ಬೆಂಗಳೂರು; ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃಧ್ಧಿ ಯೋಜನೆಯ ಅನುಷ್ಟಾನಕ್ಕೆ ವಾರ್ಷಿಕವಾರು ಪ್ರತಿಯೊಬ್ಬ ಸಂಸತ್ ಸದಸ್ಯರಿಗೆ ಭಾರತ ಸರ್ಕಾರವು ರೂ.5 ಕೋಟಿ ರೂಪಾಯಿಗಳ ಅನುದಾನ ನಿಗಧಿ ಮಾಡಿದೆ ಎಂದು ಭಾರತ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಲೋಕ್ ಶೇಖರ್ ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಯೋಜನೆಯಡಿ ಮಾರ್ಗಸೂಚಿ ಇದ್ದು, ಸದರಿ ಅನುದಾನವನ್ನು ನೇರವಾಗಿ ನೋಡಲ್ ಜಿಲ್ಲಾಧಿಕಾರಿಗಳಿಗೆ ಬಿಡುಗಡೆಗೊಳಿಸಲಾಗುತ್ತಿದ್ದು, ಸಂಸತ್ ಸದಸ್ಯರು ಶಿಫಾರಸ್ಸು ಮಾಡುವ ಸ್ಥಳೀಯವಾಗಿ ಅವಶ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದ್ದು, 1ನೇ ಏಪ್ರಿಲ್ 2023 ರಿಂದ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.
ಪರಿಷ್ಕøತ ಮಾರ್ಗಸೂಚಿ ಪ್ರಕಾರ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ನಿಧಿ ಬಿಡುಗಡೆ ಮಾಡಲು ಹೊಸದಾಗಿ ಅಂತರ್ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ.
ಹೊಸದಾಗಿ ಅಭಿವೃದ್ಧಿಪಡಿಸಲಾದ ಆನ್‍ಲೈನ್ ವ್ಯವಸ್ಥೆ ಮೂಲಕ ಸಂಬಂಧಪಟ್ಟ ಅನುಷ್ಠಾನ ಸಂಸ್ಥೆಗಳಿಗೆ ಹಾಗೂ ಮಾರಾಟಗಾರರಿಗೆ ನೇರವಾಗಿ ನಿಧಿ ಬಿಡುಗಡೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಅಧಿಕಾರಿಗಳು, ಅಂತರ್ ರಾಜ್ಯಗಳೊಂದಿಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ವಿಷಯವನ್ನು ನಿರ್ವಹಿಸುವಂತಹ ಅಧಿಕಾರಿ ಹಾಗೂ ಸಿಬ್ಬಂದಿಯವರೊಂದಿಗೆ ಸಮಗ್ರವಾಗಿ ಚರ್ಚಿಸಲು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಭಾರತ ಸರ್ಕಾರದ ಉಪ ಮಹಾನಿರ್ದೇಶಕರಾದ ಅರಿನ್‍ದಮ್ ಮೊದಕ್, ಉಪನಿರ್ದೇಶಕ ವಿಕಾಸ್ ನಿಗಮ್, ಕಿರಿಯ ಅಂಕಿಅಂಶ ಅಧಿಕಾರಿ ವಿವೇಕ್ ಸಿಂಗ್ ಹಾಗೂ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ವಿಷಯವನ್ನು ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.