ಬೆಂಗಳೂರು: ರಾಜಕೀಯ ಭಿನ್ನಾಭಿಪ್ರಾಯವನ್ನು ಬಿಟ್ಟು, ನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ನೂತನ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಹಾಗೂ ಶಾಸಕರುಗಳಿಗೆ ವಿಧಾನ ಸಭೆ ಮಾನ್ಯ ಹಂಗಾಮಿ ಸಭಾಧ್ಯಕ್ಷರಾದ ಆರ್. ವಿ. ದೇಶಪಾಂಡೆ ತಿಳಿಸಿದರು.
ಇಂದು ಪ್ರಾರಂಭವಾದ 16ನೇ ವಿಧಾನ ಸಭೆಯ ಅಧಿವೇಶನದ ಸಮಯದಲ್ಲಿ ನೂತನ ಸಚಿವರು ಹಾಗೂ ಶಾಸಕರಿಗೆ ಪ್ರತಿಜ್ಞಾ ವಿಧಿ ಭೋದಿಸುವ ಸಮಯದಲ್ಲಿ ಎಲ್ಲಾರೂ ತಮ್ಮ ರಾಜಕೀಯ ದ್ವೇಷವನ್ನು ಬಿಟ್ಟು, ರಾಜ್ಯದ ಅಭಿದ್ಧಿಗೆ ಶ್ರಮಿಸಿ ನಾಡು ನಿರ್ಮಾಣ ಮಾಡಬೇಕು. ಸಂವಿಧಾನದ ಪ್ರಕಾರ ಎಲ್ಲರೂ ಪ್ರಮಾಣ ವಚನ ಮಾಡಬೇಕು ಎಂದು ತಿಳಿಸಿದರು.
ಮೊದಲನೆಯದಾಗಿ ಮುಖ್ಯಮಂತ್ರಿಗಳು, ನಂತರ ಉಪ ಮುಖ್ಯಮಂತ್ರಿಗಳು ಪ್ರತಿಜ್ಞಾ ವಿಧಿ ಮಾಡಬೇಕು. ಸಂವಿಧಾನದ ಪ್ರಕಾರ ಪ್ರತಿಜ್ಞಾ ವಿಧಿ ಮಾಡುವಾಗ ದೇವರ ಹೆಸರಿನಲ್ಲಿ ಅಥವಾ ಸಂವಿಧಾನದ ಹೆಸರಿನಲ್ಲಿ ಮಾಡಬೇಕು. ವ್ಯಕ್ತಿಯ ಹೆಸರಿನಲ್ಲಿ ಮಾಡಿದ್ದಲ್ಲಿ ಅದು ಕಾನುಬದ್ಧವಾಗಿರುವುದಿಲ್ಲ. ಚುನಾವಣಾ ಆಯುಕ್ತರು ನೀಡಿರುವ ಆಯ್ಕೆ ಪ್ರಮಾಣ ಪತ್ರವನ್ನು ವಿಧಾನ ಸಭೆಯ ಕಾರ್ಯದರ್ಶಿಗಳಿಗೆ ನೀಡಿ, ಕಾರ್ಯದರ್ಶಿಗಳು ನೀಡುವ ಪ್ರಮಾಣ ಪತ್ರವನ್ನು ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು ನಂತರ ವಹಿಯಲ್ಲಿ ಸಹಿ ಮಾಡುವಂತೆ ಎಲ್ಲರಿಗೂ ಸಭಾಧ್ಯಕ್ಷರು. ತಿಳಿಸಿದರು.
ಅದರಂತೆ ಮೊದಲು ಮುಖ್ಯಮಂತ್ರಿಗಳು ನಂತರ ಉಪ ಮುಖ್ಯಮಂತ್ರಿಗಳು, ಸಚಿವರುಗಳು ಹಾಗೂ ಶಾಸಕರು ಇಂದು ವಿಧಾನಸಭೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.