- -ಡಾ. ಶಿವರಂಜನ ಸತ್ಯಂಪೇಟೆ
ಅದು 18-06-1981ರ ಹಿಂದಿನ ದಿನ ಶಹಾಪುರದಲ್ಲಿದ್ದ ನಮಗೆ ನಮ್ಮ ಗುರಪ್ಪ ಮುತ್ಯಾ ತೀರಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತ್ತು. ಹೀಗಾಗಿ ಅವ್ವ, ಅಣ್ಣ, ತಮ್ಮಂದಿರ ಜೊತೆ ಸಮೀಪದ ಸತ್ಯಂಪೇಟೆ ಗ್ರಾಮದ (ಅಪ್ಪ ಬಹುಶಃ ರಾತ್ರಿಯೇ ಹೋಗಿದ್ದನೋ ಏನೋ!) ನಮ್ಮ ಮನೆಗೆ ತಲುಪಿದೆವು. ನನಗಾಗ ಬಹುಶಃ ಏಳೆಂಟು ವರ್ಷವಿರಬೇಕು. ಬೆಳ್ಳಂಬೆಳಗ್ಗೆ ಸತ್ಯಂಪೇಟೆ ತಲುಪಿದಾಗ ಆಯಿ ಶಿವಮ್ಮ, ಮುತ್ಯಾನ ಮೃತದೇಹದ ಎದುರು ಕುಳಿತು ಒಂದೇ ಸಮ ಹಾಡ್ಯಾಡಿ ಅಳುತ್ತಿದ್ದಳು. ಅತ್ತು ಅತ್ತು ಆಕೆಯ ಕಣ್ಣೀರು ಕೂಡ ಬತ್ತಿ ಹೋಗಿದ್ದವು. ದಂಗು ಬಡಿದವರಂತೆ ಸುಮ್ಮನೆ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದಳು.
ಅಪ್ಪ, ಕಾಕಂದಿರು ಮುತ್ಯಾನ ಶವ ಸಂಸ್ಕಾರದ ಸಿದ್ಧತೆಯಲ್ಲಿ ತೊಡಗಿದ್ದರು. ದನ ಕಟ್ಟುವ ಮನೆಯಲ್ಲಿ ಊರ ಪ್ರಮುಖರ ಜೊತೆ ಚರ್ಚೆ ನಡೆಸುತ್ತಿದ್ದರು. ಅಪ್ಪ ಅವರೊಂದಿಗೆ ಮಾತನಾಡುತ್ತ ಒಳಗೊಳಗೆ ಗದ್ಗದಿತನಾಗುತ್ತಿರುವುದನ್ನು ಕಂಡು ನನಗೂ ಅಳು ಉಮ್ಮಳಿಸಿ ಬರುತ್ತಿತ್ತು. ತದ ನಂತರ ಮನೆಯ ಮುಂದಿನ ಬೇವಿನ ಮರದ ಕೆಳಗೆ ನನ್ನ ವಾರಿಗೆಯ ಹುಡುಗರ ಜೊತೆ ಆಟವಾಡುವುದರಲ್ಲಿ ತೊಡಗಿದ್ದು ಇನ್ನೂ ಅಷ್ಟಿಷ್ಟು ನೆನಪು.
ಮನೆಯ ಎಡ ಭಾಗದಲ್ಲಿ ಹೆಬ್ಬಾಗಿಲು ಪ್ರವೇಶಿಸುವ ಮುನ್ಮವೇ ಕಾಣುವ ಈ ಹೆಮ್ಮರ ನಮ್ಮ ಮನೆ ಮಾತ್ರವಲ್ಲ ಇಡೀ ಊರಿಗೆ ನೆರಳಿನ ಆಶ್ರಯ ನೀಡಿತ್ತು. (ಊರಿಗೆ ಯಜಮಾನನಾಗಿದ್ದ ಅಜ್ಜ ಊರ ನ್ಯಾಯ, ಪಂಚಾಯ್ತಿ ಇಲ್ಲಿಯೇ ಮಾಡುತ್ತಿದ್ದ ) ಅಷ್ಟಕ್ಕೂ ನಮ್ಮ ದಿನದ ಬಹುತೇಕ ಸಮಯ ಕಳೆಯುವುದು ಈ ಬೇವಿನ ಮರದ ಕೆಳಗೆಯೇ!
ಅಲ್ಲಿ ನಾವು ಮರ ಹತ್ತಿ ಇಳಿಯುವ (ಗಿಡ ಮಂಗ್ಯಾನ ಆಟ) ಆಟ, ಮರದ ಕೆಳಗಿನ ಮಣ್ಣಿನಲ್ಲಿ ದುಂಡಾಗಿ ಮೂರ್ನಾಲ್ಕು ಗುಳಿ ತೋಡಿ ಅದರೊಳಗೆ ಸೀತಾಫಲದ ಬೀಜ ಅಡಗಿಸಿಟ್ಟು ಆಡುವ ಅದೆಂಥದೋ ಆಟ, ಚಿಣಿ -ದಾಂಡು, ಲಗೋರಿ, ಗೋಟಿ ಆಟ, ಕಲ್ಲು ಬಸ್ ಆಟ, ಕಣ್ಣಾ ಮುಚ್ಚೆ ಕಾಡೆ ಗೂಡೆ ಆಟ, ಹಣ್ಣಾದ ಬೇವಿನ ಬೀಜ ಸೇರು ಗಟ್ಟಲೇ ಆಯ್ದು ಅಂಗಡಿಯವರಿಗೆ ಹಾಕಿ ತಿಂಡಿ ತಿನಿಸು ತಿಂದದ್ದು, ಇದೇ ಮರದ ಅಂಟು ಬಳಸಿ ಹರಿದ ನೋಟ್ ಬುಕ್ ಜೋಡಿಸಿದ್ದು, ಸೆಟಗೊಂಡು ಗಿಡ ಏರಿ ಕುಳಿತಿರುವುದು, ನೆರಳ ಕೆಳಗೆ ವರಸು ಹಾಕಿಕೊಂಡು ಮಲಗಿದ್ದು ಸೇರಿದಂತೆ ಸಾವಿರ ಸಾವಿರ ನೆನಪುಗಳು ಮನದಾಳದಲ್ಲಿ ಇನ್ನೂ ಜೀವಂತವಾಗಿವೆ. ನಮ್ಮ ಮನೆಯ ಸದಸ್ಯರ ಬಾಲ್ಯದ ಬಹುತೇಕ ಗಳಿಗೆಗಳು ಇಲ್ಲಿಯೇ ಕಳೆದಿವೆ.
ಬೇವಿನ ಮರ ಹತ್ತಿ ಇಳಿಯುವ ಅಳಿಲು, ಕೌಲೆತ್ತಿನಂತೆ ತಲೆ ಹಾಕುತ್ತ ಕುಳಿತ ತೊಂಡೆಕಾಟ, ಬೇವಿನ ಮರದ ಎಲೆ ಹೋಲುವ ಶಿವನ ಕುದುರೆ, ಕಂಟಿರುವೆಗಳ ಸಾಲು, ಕಾಗೆಯ ಗೂಡು, ಗಿಳಿಯ ಇಂಚರ, ಗೂಬೆಯ ಭಯಾನಕ ಕೂಗು ಹೀಗೆ ಏನೆಲ್ಲವನ್ನೂ ತನ್ನೊಡಲೊಳಗೆ ಇಂತಹ ದೊಡ್ಡ ಆಲದ ಮರದಂತಿದ್ದ ಬೇವಿನ ಮರದ ಟೊಂಗೆ ಕಳೆದ ಏಳೆಂಟು ದಿನಗಳ ಹಿಂದೆ ಬೀಸಿದ ಜೋರಾದ ಗಾಳಿಗೆ ಉರುಳಿ ಬಿದ್ದಿದೆ ಎಂಬ ಸುದ್ದಿ ಕೇಳಿದಾಗಿನಿಂದ ನನ್ನ ಮನಸ್ಸು ಅದೇಕೋ ಕಸಿವಿಸಿಯಾಗುತ್ತಿದೆ.
ಆಯಿ, ಮುತ್ಯಾ, ಅಪ್ಪ, ಅವ್ವ, ಕಾಕಂದಿರು, ಚಿಕ್ಕಮ್ಮಂದಿರು ಅತ್ತೆ, ಮಾವಂದಿರು, ಅಣ್ಣ, ತಂಗಿ, ತಮ್ಮಂದಿರು, ಹೆಂಡತಿ, ಮಕ್ಕಳು, ಬಂಧು- ಬಾಂದವರು, ಆಪ್ತರು, ಬಾಲ್ಯದ ಗೆಳೆಯರು, ವಾರಿಗೆಯವರು ಹೀಗೆ ಅನೇಕ ನೆನಪುಗಳು ಉಕ್ಕಿ ಬಂದವು.