ಕಲಬುರಗಿ: ಸಕಾಲ, ಐ.ಪಿ.ಜಿ.ಆರ್.ಎಸ್, ಸಿ.ಪಿ.ಗ್ರಾಮ್ಸ್, ಮುಖ್ಯಮಂತ್ರಿ ಜನಸ್ಪಂದನ, ಜನತಾ ದರ್ಶನ ಕೋಶ ಹಾಗೂ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿರುವ ಕಲಬುರಗಿ ಕನೆಕ್ಟ್ ವೆಬ್ ಆಧಾರಿತ ಮೂಲಕ ಸ್ವೀಕೃತವಾಗುವ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಈ ಕುರಿತು ಜಿಲ್ಲಾ ಮಟ್ಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾರ್ವಜನಿಕರು ಅನಗತ್ಯ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕಾದರೆ ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡುವುದು ತುಂಬಾ ಮುಖ್ಯ. ಸಕಾಲ ಯೋಜನೆಯಡಿ ವಿಳಂಬ ಮಾಡಿದಲ್ಲಿ ಅಧಿಕಾರಿ-ನೌಕರರಿಗೆ ದಂಡ ಬೀಳುತ್ತೆ. ಇದನ್ನರಿತು ಕೆಲಸ ಮಾಡಿ ಎಂದರು.
ಯಾವುದೇ ಕುಂದುಕೊರತೆ ಅರ್ಜಿ ತಮ್ಮ ಹಂತದಲ್ಲಿ ನಿಯಮಾನುಸಾರ ಪರಿಹಾರ ನೀಡಬಹುದಾರೆ ಕೂಡಲೆ ನೀಡಬೇಕು. ಕಾನೂನಾತ್ಮಕವಾಗಿ ಇಲ್ಲದಿದಲ್ಲಿ ಸಕಾರಣದೊಂದಿಗೆ ಅರ್ಜಿದಾರರಿಗೆ ಹಿಂಬರಹ ಕೊಡಬೇಕು. ಮೇಲಾಧಿಕಾರಿಗಳ ಹಂತದಲ್ಲಿ ಪರಿಹರಿಸುವ ಅರ್ಜಿದಲ್ಲಿ ಅದನ್ನು ಸಂಬಂಧಪಟ್ಟವರಿಗೆ ಕಳುಹಿಸಿ ಅರ್ಜಿದಾರರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಡಿ.ಸಿ. ತಿಳಿಸಿದರು.
*ಎಸ್.ಸಿ.ಪಿ-ಟಿ.ಎಸ್.ಪಿ ಪ್ರಗತಿ ಪರಿಶೀಲನೆ:*
ಇದೇ ಸಂದರ್ಭದಲ್ಲಿ ಪ್ರಸಕ್ತ 2023-24ನೇ ಸಾಲಿನ ವಿಶೇಷ ಘಟಕ ಯೋಜನೆ- ಗಿರಿಜನ ಉಪ ಯೋಜನೆಯಡಿ ಕುರಿತು ವಿವಿಧ ಇಲಾಖೆಗೆ ಹಂಚಿಕೆಯಾದ ಅನುದಾನ, ಖರ್ಚಾದ ಕುರಿತು ಪ್ರಗತಿ ಪರಿಶೀಲಿಸಿದ ಡಿ.ಸಿ. ಅವರು, ಆಯಾ ಇಲಾಖೆಗೆ ಪರಿಶಿಷ್ಟರ ಕಲ್ಯಾಣಕ್ಕಾಗಿ ಜಿಲ್ಲಾ ಮತ್ತು ರಾಜ್ಯ ವಲಯದಿಂದ ಹಂಚಿಕೆಯಾಗಿರುವ ಅನುದಾನವನ್ನು ಎಸ್.ಸಿ-ಎಸ್.ಟಿ ಸಮುದಾಯದ ಶ್ರೇಯೋಭಿವೃದ್ಧಿಗೆ ಕಾಲಮಿತಿಯಲ್ಲಿಯೇ ಖರ್ಚು ಮಾಡಬೇಕೆಂದು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಅವರು ಪ್ರಸ್ತಕ ಸಾಲಿನಲ್ಲಿ ಜಿಲ್ಲೆಯಲ್ಲಿ ಇದೂವರೆಗೆ ಇಲಾಖಾವಾರು ಆಗಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
*ಕ.ಕ.ಉತ್ಸವ ದಿನಾಚರಣೆ, ಸಮಿತಿ ರಚನೆ:*
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಇದೇ ಸೆ.17ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಯಶಸ್ಸಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಒಳಗೊಂಡ ಸಮಿತಿ ರಚಿಸಿದ್ದು, ಆಯಾ ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಡಿ. ಸಿ. ಬಿ.ಫೌಜುಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.