ಅಕ್ಕಲಕೋಟ: ಭಾಷೆಯು ಭಾವನೆಯ ಕೈಗನ್ನಡಿಯಾಗಿದ್ದು ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡುವದರಿಂದ ಉತ್ತಮ ಗುಣಮಟ್ಟದ ವಿಧ್ಯಾರ್ಥಿಗಳು ಭಾರತದ ಭವಿಷ್ಯದ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುವದು.ಆದ್ದರಿಂದ ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಲು ಎಲ್ಲರೂ ಮುಂದಾಗಬೇಕು ಎಂದು ಸೊಲ್ಲಾಪುರ ಸಂಸದ ಡಾ.ಜಯಶಿದ್ಧೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.
ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದಲ್ಲಿ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ,ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಶ್ರೀ ಗುರು ಬಮ್ಮಲಿಂಗೇಶ್ವರ ಕಲ್ಯಾಣ ಕೇಂದ್ರ ನಾಗಣಸೂರ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಹಮ್ಮಿಕೊಂಡಿದ್ದ ಗಡಿನಾಡ ಸಂಸ್ಕೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಿದ್ದರು. ಸರ್ವಾಧ್ಯಕ್ಷರಾಗಿ ಎನ್.ಆರ್.ಕುಲಕರ್ಣಿ ,ಉದ್ಘಾಟಕರಾಗಿ ಶಾಸಕ ಸಚಿನ ಕಲ್ಯಾಣಶೆಟ್ಟಿ ವೇದಿಕೆಯಲ್ಲಿದ್ದರು.ಹಾಗೆಯೇ ವೇದಿಕೆಯಲ್ಲಿ ಮಲ್ಲಿಕಾರ್ಜುನ ಪಾಟೀಲ,ಮಹೇಶ ಹಿಂಡೊಳೆ,ಮಹಾದೇವ ಚವ್ಹಾಣ,ಧನರಾಜ ಧನಷೆಟ್ಟಿ,ಓಂಕಾರ ಗಂಗೊಂಡಾ,ದಯಾನಂದ ಕವಡೆ,ಶಂಕರ ಅಜಗೊಂಡಾ,ಮಲ್ಲಿನಾಥ ಕಲ್ಯಾಣ,ರಮೇಶ ತೋಳನೂರೆ,ಶಶಿಕಾಂತ ಕಳಸಗೊಂಡ,ಸಿದ್ಧರಾಮ ಶಿವಮೂರ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಂಸದರು ಮುಂದೆ ಮಾತನಾಡಿ ಭಾಷೆಗೂ ಭಾವನೆಗೂ ಭೇದವಿಲ್ಲ ನಾವು ನಮ್ಮ ಮಾತೃಭಾಷೆಯಲ್ಲಿ ಯಾವದೇ ಹಿಂಜರಿಕೆ ಇಲ್ಲದೆ ಮಾತನಾಡಬೇಕು.ನಮ್ಮ ಮಾತೃಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಭಾಷೆಯ ರಕ್ಷಣೆಗೆ ನಿಲ್ಲಬೇಕು.ಗಡಿಭಾಗದ ಕನ್ನಡಿಗರು ನಾವಾಗಿರುವದರಿಂದ ಗಡಿಯ ಎಲ್ಲ ಭಾಷೆಗಳನ್ನೂ ಪ್ರೀತಿಸಿ ಭಾಷಾ ಬಾಂಧವ್ಯ ಮೆರೆಯಬೇಕು.ಭಾಷಾ ಸಾಮರಸ್ಯದ ಜೊತೆಗೆ ಕನ್ನಡ ಭಾಷೆಯ ರಾಷ್ಟ್ರೀಯ ಸ್ಥಾನಮಾನಕ್ಕೆ ಅನುಗುಣವಾಗಿ ಭಾಷೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು.ಕನಿಷ್ಠ 1 ರಿಂದ 10 ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.
ಶಾಸಕ ಸಚಿನ ಕಲ್ಯಾಣಶೆಟ್ಟಿ ಗಡಿನಾಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ನಮ್ಮ ತಾಯಿ ಭಾಷೆ ಕನ್ನಡ ವಾಗಿದ್ದು ಮಹಾರಾಷ್ಟ್ರ ಹಾಗೂ ಕರ್ನಾಟಕದ ರಾಜ್ಯಗಳ ಸೀಮೆಯ ಕನ್ನಡ ಭಾಗದಲ್ಲಿ ವಾಸಿಸುತ್ತಿರುವ ನಮಗೆ ಎರಡೂ ರಾಜ್ಯಗಳಿಂದ ಸಹಕಾರ ಬೇಕಿದೆ. ಯಾವ ಭಾಷೆಗೆ ಯಾವದೇ ಆತಂಕ ಬೇಡ. ಎರಡೂ ರಾಜ್ಯಗಳು ಕನ್ನಡ ಭಾಷೆಯ ಅಭಿವೃದ್ಧಿಯ ಸಲುವಾಗಿ ಕಾರ್ಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರದ ವತಿಯಿಂದ ಎಲ್ಲ ಸೌಲಭ್ಯಗಳನ್ನು ನೀಡಲು ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಾ ಕನ್ನಡ ಭಾಷೆಯ ಜೊತೆಗೆ ಮರಾಠಿ ಭಾಷೆಯನ್ನು ಎಲ್ಲರೂ ಪ್ರೀತಿಸಿ ಗೌರವಿಸಬೇಕು, ಕನ್ನಡ ಮರಾಠಿ ಭಾಷಾ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು, ನಾವಿಬ್ಬರು ಸಹೋದರರು ಎಂದು ಹೇಳಿದರು.
ಸರ್ವಾಧ್ಯಕ್ಷರಾದ ಎನ್.ಆರ್.ಕುಲಕರ್ಣಿ ಮಾತನಾಡಿ ನಾವೆಲ್ಲ ಮಹಾರಾಷ್ಟ್ರದ ಕನ್ನಡಿಗರು ಆಗಿದ್ದು ನಮ್ಮಲ್ಲಿ ಯಾವದೇ ಭೇಧ ಭಾವ ವಿಲ್ಲ.ಮರಾಠಿ ಭಾಷೆಯ ಜೊತೆಗೆ ಕನ್ನಡ ಭಾಷೆಯು ಈ ಭಾಗದಲ್ಲಿ ಶ್ರೀಮಂತ ಭಾಷೆಯಾಗಿದೆ. ಭಾಷೆ ಜೀವಂತವಾಗಿ ಉಳಿದರೆ ಮಾತ್ರ ನಮ್ಮ ಇರುವಿಕೆಗೆ ಅರ್ಥ ಬರುವದು.ಯಾವದೇ ಕಾರಣಕ್ಕೂ ಯಾರ ಒತ್ತಾಯಕ್ಕೆ ಬಗ್ಗದೇ ಮಾತೃಭಾಷೆಯ ರಕ್ಷಣೆಗೆ ಸದಾ ಸಿದ್ಧರಾಗಿ ನಿಲ್ಲಬೇಕು ಎಂದು ಹೇಳಿ ಗಡಿಭಾಗದಲ್ಲಿ ಇಂಥ ಅನೇಕ ಸಂಘ ಸಂಸ್ಥೆಗಳು ಕನ್ನಡ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಮಾಡಿ ಕೊಡಬೇಕು ಎಂದು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮಹಾರಾಷ್ಟ್ರ – ಕರ್ನಾಟಕ ಎನ್ನುವ ಭೇದವಿಲ್ಲದೆ ನಾವೆಲ್ಲರೂ ಭಾರತ ಮಾತೆಯ ಮಕ್ಕಳಾಗಿದ್ದೇವೆ ಎಂಬುದನ್ನು ಮರೆಯಬಾರದು.ತಮ್ಮ ಮಾತೃಭಾಷೆಯ ಕುರಿತು ಎಲ್ಲರಿಗೂ ಅಭಿಮಾನವಿರಬೇಕೇ ವಿನಃ ದ್ವೇಶಾಭಿಮಾನ ಇರಬಾರದು.ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವರ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಮಾತೃಭಾಷೆಯಾದ ಕನ್ನಡದಲ್ಲಿಯೇ ಶಿಕ್ಷಣ ಕೊಡಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.
ಬೆಳಿಗ್ಗೆ ಪ್ರಾರಂಭವಾದ ಭವ್ಯ ಮೆರವಣಿಗೆಯು ನೋಡುಗರ ಗಮನ ಸೆಳೆಯಿತು. ವೇದಿಕೆ ಸಮಾರಂಭದ ಪ್ರಾರಂಭದಲ್ಲಿ ಮಹೇಶ ಮೇತ್ರಿ ಹಾಗೂ ಸಂಗಡಿಗರು ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಎಲ್ಲ ಗಣ್ಯರ ವತಿಯಿಂದ ತಾಯಿ ಭುವನೇಶ್ವರಿ ದೇವಿಯ ಪ್ರತಿಮೆಯ ಪೂಜೆ ಮಾಡಲಾಯಿತು. ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಗಡಿಭಾಗದಲ್ಲಿ ಕನ್ನಡ ಭಾಷೆಯ ಸಲುವಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೫ ಜನ ಸಾಧಕರನ್ನು ಗಡಿನಾಡ ರತ್ನಪ್ರಶಸ್ತಿ ನೀಡಿ ಗೌರವಿಸಲಾಯಿತು.ಗಡಿಭಾಗದ ತೋಳನೂರು, ಶಿರವಳವಾಡಿ,ಗೋಪಾಳ ತಾಂಡಾ ಜೇವೂರ ಹಾಗೂ ಗೌಡಗಾವ ಕನ್ನಡ ಶಾಲೆಗಳಿಗೆ ಆದರ್ಶ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಮಾಧ್ಯಮದಲ್ಲಿ ಕಲಿತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣಕ್ಕೆ ಆಯ್ಕೆಯಾದ ವರ್ಷಾರಾಣಿ ಪ್ರಚಂಡೆ, ಈರೇಶ ಖೇಡ,ಶಿವರಾಜ ಕುಂಬಾರ, ಶ್ರೀಶೈಲ ಉಣ್ಣದ,ಐಶ್ವರ್ಯಾ ಮಾಡ್ಯಾಳ,ಶೃತಿ ಘುಘೆ ಅವರನ್ನು ವಿಶೇಷ ಗೌರವ ಮಾಡುವದರ ಜೊತೆಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಮುಂದಿನ ಶಿಕ್ಷಣಕ್ಕೆ ಶುಭ ಕೋರಲಾಯಿತು.
ಗಡಿನಾಡಿನ ಕನ್ನಡ- ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಕನ್ನಡ- ಕನ್ನಡಿಗರ ಪಾತ್ರ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಸುಮಾರು 15 ಜನ ಕವಿ- ಕವಯಿತ್ರಿಯರು ಭಾಗವಹಿಸಿ ಕವಿತೆ ವಾಚನ ಮಾಡಿ ಉಪಸ್ಥಿತರ ಚಪ್ಪಾಳೆ ಗಿಟ್ಟಿಸಿಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ ಮಧುಮಾಲ ಲಿಗಾಡೆ ವಹಿಸಿಕೊಂಡಿದ್ದರು. ಯುವ ಸಾಹಿತಿ ಗಿರೀಶ್ ಜಕಾಪುರೆಯವರು ಸಮಾರೋಪ ನುಡಿಗಳನ್ನು ಆಡಿದರು.
ಕೊನೆಯಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ, ವಿವಿಧ ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾರಂಭದ ನಿರೂಪಣೆ ಪ್ರೊ.ಚಿದಾನಂದ ಮಠಪತಿ,ವಿದ್ಯಾಧರ ಗುರವ ಮಾಡಿದರು .ಶರಣಪ್ಪ ಫುಲಾರಿ ವಂದಿಸಿದರು .
ಕಾರ್ಯಕ್ರಮದ ಯಶಸ್ಸಿಗಾಗಿ ರಾಜಶೇಖರ ಉಮರಾಣಿಕರ, ಬಸವರಾಜ ಧನಶೆಟ್ಟಿ, ಸೋಮಶೇಖರ ಜಮಷೆಟ್ಟಿ,ಚಿದಾನಂದ ಮಠಪತಿ,ಪ್ರಶಾಂತ ಬಿರಾಜದಾರ,ಕಾಶೀನಾಥ ಧನಶೆಟ್ಟಿ ಪ್ರಶಾಂತ ಬಿರಾಜದಾರ,ಶರಣಪ್ಪ ಫುಲಾರಿ,ಶರಣು ಕೋಳಿ, ಚಂದ್ರಕಾಂತ ಖಿಲಾರಿ,ವಿಶ್ವನಾಥ ದೇವರಮನಿ,ರಾಮ ಸೋಲಾಪುರೆ,ಶರದ ಗಂಗೊಂಡಾ,ಮಹಿಬುಬ್ ನಾಗಣಸುರೆ,ಕಾಶೀನಾಥ ಫೂಲಾರಿ,ಪ್ರಕಾಶ ಅತನುರೆ,ರಾಜಶೇಖರ ಖಾನಾಪೂರೆ ಸೇರಿದಂತೆ ಗಡಿಭಾಗದ ಕನ್ನಡ ಮನಸ್ಸುಗಳು ಶ್ರಮಿಸಿದರು.