ಶಿಸ್ತುಬದ್ಧ ಅಧ್ಯಯನವೇ ಸಾಧನೆಗೆ ಸೋಪಾನ

0
78

ಬುದ್ಧ, ಬಸವ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವದಲ್ಲಿ ಪ್ರೊ. ದಯಾನಂದ ಅಗಸರ್ ಅಭಿಮತ

ಕಲಬುರಗಿ: ವಿದ್ಯಾರ್ಥಿಗಳು ಬದುಕಿನ ಬವಣೆಗಳನ್ನು ಅರ್ಥಮಾಡಿಕೊಂಡು ಎದುರಾಗುವ ಸವಾಲುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮೂಲಕ ಶಿಸ್ತುಬದ್ಧ ಅಧ್ಯಯನವೇ ಸಾಧನೆಗೆ ಸೋಪಾನವಾಗಲಿದೆ. ಅದಕ್ಕೆ ಬುದ್ಧ ಬಸವ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ವೈಚಾರಿಕ ಸಂದೇಶಗಳು ಪ್ರೇರಣೆಯಾಗಲಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ಆಯೋಜಿಸಿದ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮಮದಲ್ಲಿ ಬುದ್ಧ, ಬಸವ ಹಾಗೂ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾಚಿತ್ರಕ್ಕೆ ಪುಷ್ಪ ಸಮರ್ಪಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬುದ್ಧರ ಮಾರ್ಗ ಮತ್ತು ಬಸವಣ್ಣನವರ ಸಂದೇಶಗಳ ಪ್ರಭಾವದಿಂದ ಬೆಳೆದ ಡಾ. ಬಿ. ಆರ್. ಅಂಬೇಡ್ಕರ್ ಒಬ್ಬ ಮೇದಾವಿ ವಿದ್ಯಾರ್ಥಿಯಾಗಿದ್ದರು. ಸಮಸ್ಯೆಗಳಿಗೆ ಎಂದೂ ಅವರು ಹೆದರಲಿಲ್ಲ. ಸಮಸ್ಯೆಗಳನ್ನು ಮೆಟ್ಟಿಲು ಮಾಡಿಕೊಂಡು ವ್ಯವಸ್ಥೆಗೆ ಆದರ್ಶ ಸಂವಿಧಾನವನ್ನು ನೀಡಿದರು. ಅವರ ಜೀವನ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ್ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ ಇಡೀ ದೇಶದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸುವ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ವಾಸ್ತವತೆಗಳನ್ನು ಅರ್ಥಮಾಡಿಕೊಂಡು ಶಿಕ್ಷಣದ ಜೊತೆಗೆ ಅವಕಾಶಗಳನ್ನು ಉಪಯೋಗಿಸಿಕೊಂಡು ಉನ್ನತ ಸ್ಥಾನಗಳನ್ನು ಪಡೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಹೆಚ್ಚು ಸಮಯ ಓದು ಮತ್ತು ಬರವಣಿಗೆಯಲ್ಲಿ ತೊಡಗಿ ದಮನಿತರ ಧ್ವನಿಯಾಗಿ ಪ್ರಕಾಶಿಸಿದರು. ಅವರ ಆದರ್ಶ ಬದುಕು ಮತ್ತು ಜಾಗತಿಕ ಜ್ಞಾನದಿಂದ ಇಡೀ ಜಗತ್ತಿಗೆ ಪರಿಚಯಿಸಲ್ಪಟ್ಟರು. ಶಿಕ್ಷಣವನ್ನು ಒಂದು ಅಸ್ತ್ರವಾಗಿ ಪ್ರಯೋಗಿಸಿ ಕೊಂಡು ಬೆಳೆದರು ಎಂಧರು.

ದೇಶದ ಅರ್ಥವ್ಯವಸ್ಥೆಯಲ್ಲಿನ ೯೮ರಷ್ಟು ಕೃಷಿ, ಕೈಗಾರಿಕೆ, ಉದ್ಯಮ ಮತ್ತು ಸೇವಾವಲಯಗಳಲ್ಲಿ ಶೋಷಿತ ಸಮುದಾಯಗಳು ಹಲವು ಕಾರಣಗಳಿಂದ ಗುರುತಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಕೇವಲ ಮೀಸಲಾತಿಯಿಂದ ಮಾತ್ರವೇ ಕನಿಷ್ಠ ಅವಕಾಶಗಳು ಕೆಲವರಿಗೆ ಮಾತ್ರವೇ ಸಿಗುತ್ತಿವೆ. ಗ್ರಾಮಗಳಲ್ಲಿರುವ ಶೋಷಿತರ ಬದುಕನ್ನು ಸುಧಾರಿಸಬೇಕಾದರೆ ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಗಮನ ಕೊಡಬೇಕಿದೆೆ ಎಂದ ಅವರು ಶೋಷಿತರ ಮತ್ತು ಹಿಂದುಳಿದ ಜನಾಂಗಗಳ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಹುಡುಕಲು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಆ ನಿಟ್ಟಿನಲ್ಲಿ ಶೋಷಿತ ಸಮುದಾಯಗಳ ವಿದ್ಯಾರ್ಥಿ ಸಮೂಹ ಶಿಕ್ಷಣದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಮಾತನಾಡಿ ಬುದ್ಧ, ಬಸವ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರು ಮನುಕುಲದ ಮೂರು ಮಹಾನ್ ಚೇತನಗಳಾಗಿವೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಸತ್ಯವನ್ನು ಪ್ರತಿಪಾದನೆ ಮಾಡಿದ ಈ ಮೂರು ಮಹಾನ್ ವ್ಯಕ್ತಿಗಳ ವಿಚಾರಗಳ ಮೇಲೆಯೇ ಹಲವಾರು ರಾಷ್ಟ್ರಗಳು ನಿರ್ಮಾಣವಾಗಿವೆ ಎಂದರು.

ಆಳಂದ ತಾಲೂಕಿನ ಧುತರಗಾಂವನ ಉಸ್ತುರಿ ಮಠದ ಪೂಜ್ಯ ಶ್ರೀ ವಿಶ್ವನಾಥ ಕೊರಣೇಶ್ವರ ಸ್ವಾಮೀಜಿಗಳು ಮಾತನಾಡಿ ಬುದ್ಧ, ಬಸವ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಜ್ಯೋತಿ ಬಾಪುಲೆ ಅವರ ವಿಚಾರಧಾರೆಗಳ ವಾರಸುದಾರರಾಗಿರುವ ವಿದ್ಯಾರ್ಥಿಗಳು ಅವರ ವೈಚಾರಿಕ ಪ್ರಜ್ಞೆಗಳನ್ನು ಬೆಳೆಸಿಕೊಳ್ಳಬೇಕು. ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಜ್ಞೆ ಪ್ರತಿಯೊಬ್ಬ ವ್ಯಕ್ತಿಯ ಮನಸಿನಲ್ಲಿದೆ ಎಂದರು.

ನೃಪತುಂಗ ವಸತಿ ನಿಲಯದ ನಿಲಯಪಾಲಕ ಡಾ. ಎಸ್. ಹೆಚ್ಚ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಲಂಡನಕರ್, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ್ ಮಾಲೆ, ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಿಂಗಣ್ಣ, ಕಾಂಗ್ರೆಸ್ ಮುಖಂಡ ಪ್ರವೀಣ್ ಹರವಾಳ, ರೇಶ್ಮಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶರದ್ ರೇಶ್ಮಿ, ಮಾಜಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಕಗ್ಗನಮಡಿ, ಗುಲಬರ್ಗಾ ವಿವಿಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಅರುಣ್ ಕುರ್ನೆ, ಅತಿಥಿ ಉಪನ್ಯಾಸಕ ಡಾ. ಅನಿಲ್ ಟೆಂಗಳಿ, ಎನ್‌ಎಸ್‌ಯುಐ ಅಧ್ಯಕ್ಷ ಡಾ. ಗೌತಮ್ ಎಂ ಕರಿಕಲ್, ಬಿಸಿಎಂ ವಸತಿ ನಿಲಯದ ನಿಲಯ ಪಾಲಕ ನಾಗಪ್ಪ, ಬಿಸಿಎಂ ವಸತಿ ನಿಲಯದ ನಿಲಯ ಪಾಲಕ ಗಿರೀಶ್ ಪೂಜಾರಿ, ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಜಗದೀಶ್ , ಕಾಂಗ್ರೆಸ್ ಮುಖಂಡ ಸಂತೋಷ್ ಹಾದಿಮನಿ, ವಕೀಲರಾದ ನಾಗೇಂದ್ರ ಜೌಳಿ ಸೇರದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವಕೀಲರಾದ ನಾಗೇಂದ್ರ ಜವಳಿ, ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ಆನಂದ ಯಾತನತಮೂರ ಸೇರಿದಂತೆ ಕಾರ್ಯಕ್ರಮದಲ್ಲಿ ವಸತಿ ನಿಲಯದ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಬಿ. ಎಮ್. ಮಹದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಹಿಂದಿ ವಿಭಾಗದ ಸಂಶೋಧನಾ ವಿದ್ಯಾರ್ಥಿ ಜಯಪ್ರಕಾಶ್ ಕಾಂಬ್ಳೆ ಭೀಮಗೀತೆ ಹಾಡಿದರು. ನಾಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here