ಕಲಬುರಗಿ: ಶುಕ್ರವಾರ ಸೇಡಂ ಪಟ್ಟಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ ಉದ್ಯೋಗ ಮೇಳಕ್ಕೆ ಉದ್ಯೋಗ ಅಕಾಂಕ್ಷಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸುಮಾರು 457 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು. ಇನ್ನು 1,350 ಜನರು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಸಂಜೆ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೆ ನೇಮಕಾತಿ ಪತ್ರ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಉದ್ಯೋಗ ಮೇಳಕ್ಕೆ ಗುರುವಾರ ಸಂಜೆ ವರೆಗೆ ನೋಂದಣಿ ಮಾಡಿಕೊಂಡಿದ್ದ 5,323 ಜನರ ಪೈಕಿ ಶುಕ್ರವಾರ ಮೇಳದಲ್ಲಿ ಸುಮಾರು 4,700 ಜನ ಭಾಗಿಯಾಗಿದ್ದಾರೆ. ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾದವರಿಗೂ ಉದ್ಯೋಗದ ಭರವಸೆ ದೊರೆತಿದೆ. ಒಟ್ಟಾರೆ ಸಂದರ್ಶನಕ್ಕೆ ಹಾಜರಾದವರ ಪೈಕಿ 1800ಕ್ಕೂ ಹೆಚ್ಚು (ಶೇ.40ರಷ್ಟು ಜನರಿಗೆ) ಇಂದಿಲ್ಲಿ ಉದ್ಯೋಗ ಸಿಕ್ಕಿದ್ದು, ತಮಗೆ ಖುಷಿ ತಂದಿದೆ ಎಂದರು.
ಇಂದಿಲ್ಲಿ ಕೆಲಸ ಸಿಗದವರು ನಿರಾಶರಾಗಬೇಕಿಲ್ಲ. ಅಂತಹವರಿಗೆ ಕೌಶಲ್ಯಾಭಿವೃದ್ಧಿ ನಿಗಮವು ನಿರಂತರ ಸಂರ್ಪದಲ್ಲಿದ್ದು, ಉದ್ಯೋಗ ಅರ್ಹತೆಯ ಕೌಶಲ್ಯ ತರಬೇತಿ ನೀಡಲಿದೆ. ನಿರುದ್ಯೋಗಿಗಳು ಉದ್ಯೋಗ ಅರ್ಹತೆಯ ಕೌಶಲ್ಯ ಪಡೆಯಲು ಕಡ್ಡಾಯವಾಗಿ ಕೌಶಲ್ಯಾಭಿವೃದ್ಧಿ ನಿಗಮದ ಅಂತರ್ಜಾಲದಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.
50 ಸಾವಿರ ಸರ್ಕಾರಿ ಹುದ್ದೆ ಭರ್ತಿ: ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಮುಂದಿನ ಐದು ವರ್ಷದಲ್ಲಿ ನಮ್ಮ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 50 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಬೆಳಿಗ್ಗೆ 9 ಗಂಟೆಯಿಂದಲೆ ನೋಂದಣಿ ಪ್ರಕ್ರಿಯೆ ಶುರುವಾಗಿತ್ತು. ಸೇಡಂ ಪಟ್ಟಣ, ಗ್ರಾಮಾಂತರ ಪ್ರದೇಶ ಹಾಗೂ ಜಿಲ್ಲೆಯ ಇತರೆ ಭಾಗಗಳಿಂದ ನಿರುದ್ಯೋಗಿಗಳ ದಂಡು ಸೇಡಂನತ್ತ ಧಾವಿಸಿತ್ತು. ಯುವಕ-ಯುವತಿಯರು, ಗೃಹಿಣಿಯರು ಉದ್ಯೋಗ ಅರಸಿ ಬಂದಿದ್ದರು. ನೋಂದಣಿ, ಸಂದರ್ಶನ ಕೌಂಟರ್‍ಗಳು ಅಭ್ಯರ್ಥಿಗಳಿಂದ ತುಂಬಿ ತುಳುಕಿದವು. ನೊಂದಣಿಗೆ ಹತ್ತಾರು ಕೌಂಟರ್ ತೆರೆದ ಕಾರಣ ಯಾವುದೇ ಸಮಸ್ಯೆ ಕಾಣಲಿಲ್ಲ. ಅಲಲ್ಲಿ ಕುಳಿತುಕೊಂಡು ನೊಂದಣಿ ಅರ್ಜಿ ಭರ್ತಿ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಉದ್ಯೋಗ ಮೇಳ ಅಂಗವಾಗಿ ಕೆ.ಜಿ.ಟಿ.ಟಿ.ಐ, ಜಿ.ಟಿ.ಟಿ.ಸಿ, ಐ.ಟಿ.ಐ ಕೇಂದ್ರಗಳು ಮಳಿಗೆ ತರೆದು ತಮ್ಮ ಕೇಂದ್ರದಲ್ಲಿ ಲಭ್ಯವಿರುವ ಕೋರ್ಸ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತಿಯ ಎನ್.ಆರ್.ಎಲ್.ಎಂ ಮಳಿಗೆ ಸಹ ತೆರೆದು ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಪ್ರಮುಖವಾಗಿ ಎಲ್ ಆಂಡ್ ಟಿ ಫೈನಾನ್ಸ್, ಮಲಾಬಾರ ಗೋಲ್ಡ್ ಆಂಡ್ ಡೈಮೆಂಡ್ಸ್, ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಟ್ರೇಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ಸನ್‍ಲೈಫ್ ಇನ್ಸುರೆನ್ಸ್ ಕಂಪನಿ, ಕೆ.ಬಿ.ಎಲ್ ಸರ್ವಿಸಸ್ ಲಿಮಿಟೆಡ್, ಎಲ್‍ಐಸಿ ಆಫ್ ಇಂಡಿಯಾ, ಮಹೇಂದ್ರ ಆಂಡ್ ಮಹೇಂದ್ರಾ ಎ.ಡಿ.-ಜಹೀರಾಬಾದ್, ಅಲ್ಟಾಟೆಕ್ ಸಿಮೆಂಟ್ ಲಿಮಿಟೆಡ್, ಸೇಡಂ ತಾಲೂಕಿನ ಕೋಡ್ಲಾದ ಶ್ರೀ ಸಿಮೆಂಟ್ ಹಾಗೂ ಲೇಬರ್‍ನೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸೇರಿದಂತೆ 110ಕ್ಕೂ ಹೆಚ್ಚಿನ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.
ಎಷ್ಟಾದರು ನೇಮಕ ಮಾಡಿಕೊಳ್ಳುತ್ತೇವೆ: ಬೆಂಗಳೂರು, ಮೈಸೂರಿನಲ್ಲಿ ರೋಗಿಗಳಿಗೆ ಮನೆಗೆ ಹೋಗಿ ಅಗತ್ಯ ವೈದ್ಯಕೀಯ ಉಪಚಾರ ಮಾಡಲು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ನಸಿರ್ಂಗ್ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದೇವೆ. ನೇಮಕಾತಿಗೆ ಸಂಖ್ಯೆ ಮಿತಿಯಲ್ಲ. ಎμÉ್ಟ ಜನ ಬಂದರು ತೆಗೆದುಕೊಳ್ಳುತ್ತೇವೆ. ಇಂದಿಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. -ರೋಶನ,ನರ್ಸಿಂಗ್ ಅಧಿಕಾರಿ,ಪ್ರಣಾ ಹೆಲ್ತ್ ಕೇರ್ ಪ್ರೈ.ಲಿ.ಬೆಂಗಳೂರು
ಸೋಮವಾರ ಪ್ರ್ಯಾಕ್ಟಿಕಲ್ ಟೆಸ್ಟ್: ಟೊಯೋಟಾ, ಕಿಯಾ ಹಾಗೂ ಹೊಂಡಾ ಕಂಪನಿಯಲ್ಲಿ ವಿವಿಧ ವಿಭಾಗದಲ್ಲಿ ಪೆಂಟಿಂಗ್, ಟೆಕ್ನಿಷಿಯನ್ ಸೇರಿ ಒಟ್ಟು 22 ಹುದ್ದೆ ಭರ್ತಿಗೆ ಸಂದರ್ಶನ ಕೈಗೊಂಡಿದ್ದೇವೆ. ಮಧ್ಯಾಹ್ನದ ವರೆಗೂ 30 ಜನರ ಸಂದರ್ಶನ ನಡೆಸಿದ್ದು, ಇದರಲ್ಲಿ 9 ಜನರನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಇಂದಿಲ್ಲಿ ಶಾರ್ಟ್ ಲಿಸ್ಟ್ ಆದವರನ್ನು ಸೋಮವಾರ ಕಲಬುರಗಿಯಲ್ಲಿ ಪ್ರ್ಯಾಕ್ಟಿಕಲ್ ಟೆಸ್ಟ್ ಮಾಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು. -ಅನಿತಾ,ಮಾನವ ಸಂಪನ್ಮೂಲ ಅಧಿಕಾರಿ,ಟೊಯೋಟಾ,ಕಿಯಾ & ಹೊಂಡಾ ಶೋರೂಮ್,ಕಲಬುರಗಿ
ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಇರುವ ಸ್ಥಳದಲ್ಲಿಯೇ ನಸಿರ್ಂಗ್ ಸ್ಟಾಫ್ ಉದ್ಯೋಗಕ್ಕಾಗಿ ಸಂದರ್ಶನವನ್ನು ಎದುರಿಸಿದ್ದು ತುಂಬಾ ಖುಷಿ ತಂದಿದೆ. ಕೆಲಸದ ಬಗ್ಗೆ ಕಂಪನಿಯವರು ಕರೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ನೊಡೋಣಾ ಏನು ಆಗುತ್ತೆ ಅಂತಾ
ಸುಮಾ ಎಸ್.,ಸೇಡಂ : ಉದ್ಯೋಗ ಮೇಳದಲ್ಲಿ ಕೆಲಸ ಸಿಗುತ್ತೇ ಅಂತಾ ಸ್ನೇಹಿತರು ಹೇಳಿದ್ರು. ಹೀಗಾಗಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದಕ್ಕಿಂತ ಸ್ಥಳೀಯವಾಗಿ ಏನಾದ್ರು ಕೆಲಸ ಸಿಕ್ಕರೆ ಮಾಡೋಣ ಅಂತಾ ಬಂದಿರುವೆ. -ರಮೇಶ,ಪದವೀಧರ ಅಂಗವಿಕಲ ಅಭ್ಯರ್ಥಿ,ಮುಧೋಳ್