ಶಹಾಬಾದ: ಹೇಳಿಕೊಳ್ಳಲು ಸಾಕಷ್ಟು ಬಸ್‍ಗಳಿವೆ. ಕಣ್ಣು ಹಾಯಿಸಿದರೇ ಹದಿನೈದು ನಿಮಿಷಕ್ಕೊಂದು ಬಸ್‍ಗಳು ಸಂಚರಿಸುತ್ತವೆ.ಆದರೆ ನಿಲ್ಲುವುದು ಮಾತ್ರ ಬೆರಳಣಿಕೆಯಷ್ಟು ಮಾತ್ರ.ಇದರಿಂದ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ಇದು ನಗರದ ಹೊರವಯಲದ ರಾಷ್ಟ್ರೀಯ ಹೆದ್ದಾರಿ(150) ಹೊಂದಿಕೊಂಡಿರುವ ವಾಡಿ-ಚಿತ್ತಾಪೂರ ವೃತ್ತದಲ್ಲಿ ಕಂಡು ಬರುವ ಸಾಮನ್ಯ ದೃಶ್ಯ.
ನಿತ್ಯ ನಗರದಿಂದ ಕಲಬುರಗಿ ಮತ್ತು ಯಾದಗಿರಿ ನೂರಾರು ಜನರು ಬಸ್‍ಗಳ ಮೇಲೆ ಅವಲಂಬಿತರಾಗಿದ್ದಾರೆ.ಈ ಹಿಂದೆ ಯಾದಗಿರಿ-ಕಲಬುರಗಿ ಹಾಗೂ ಕಲಬುರಗಿ-ಯಾದಗಿರಿ ಬಸ್‍ಗಳೇಲ್ಲವೂ ವಾಡಿ-ಚಿತ್ತಾಪೂರ ವೃತ್ತದಲ್ಲಿ ನಿಲ್ಲುತ್ತಿದ್ದವು.ಆದರೆ ಕೆಲವು ತಿಂಗಳುಗಳಿಂದ ಬಸ್ ನಿಲ್ಲದೇ ಇರುವುದರಿಂದ ಸರಕಾರಿ ನೌಕರರಿಗೆ, ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ತೊಂದರೆ ಉಂಟಾಗಿದೆ.
ರಾವೂರ ವೃತ್ತದಲ್ಲಿ ಬಸ್‍ಗಳು ನಿಲ್ಲಿಸಲಾಗುತ್ತಿದೆ.ಆದರೆ ತಾಲೂಕಾ ಪ್ರದೇಶದಲ್ಲಿ ಬಸ್ ನಿಲ್ಲಿಸದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.ಬಸ್‍ಗಳು ಬಂದರೂ ನಿಲ್ಲಿಸುತ್ತಿಲ್ಲ.ಇದರಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಬೇಕಾಗಿದೆ.ಅಲ್ಲದೇ ಶಹಾಬಾದ-ಕಲಬುರಗಿ ಬಸ್ ಹಿಡಿದು ತಡವಾಗಿ ಹೋದರೆ ಅಧಿಕಾರಿಗಳ ತರಾಟೆಗೆ ಒಳಗಾಗಬೇಕಿದೆ.ದಿನನಿತ್ಯ ಇದೇ ಗೋಳಾಗಿದ್ದರಿಂದ ಎಲ್ಲಿಲ್ಲದ ತೊಂದರೆ ಅನುಭವಿಸುವಂತಾಗಿದೆ.ಇತ್ತ ಪ್ರಯಾಣಿಕರಿಗೂ ಕಷ್ಟ ಅನುಭವಿಸುತ್ತಿದ್ದಾರೆ.ಬಹುತೇಖ ಬಸ್‍ಗಳು ನಿಲ್ಲುತ್ತಿಲ್ಲ.
ಕೆಲವು ಬಸ್‍ಗಳು ನಿಲ್ಲಿಸುತ್ತಿದ್ದಾರೆ.ಆದರೆ ಜನಗಳಿಂದ ತುಂಬಿಕೊಂಡಿರುತ್ತದೆ.ಈ ಬಗ್ಗೆ ಅನೇಕ ಬಾರಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಬಸ್ ಪಾಸ್ ತೆಗೆದುಕೊಂಡ ವಿದ್ಯಾರ್ಥಿಗಳ ಪಾಡೇನು? ಬಸ್ ನಿಲ್ಲಿಸದಿರುವುದಕ್ಕೆ ಕಾರಣವೇನು? ಇದಕ್ಕೆ ಉತ್ತರ ನೀಡುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ. ಅಲ್ಲದೇ ಶಹಾಬಾದ ನಗರದ ಸಾರ್ವಜನಿಕರು ಯಾದಗಿರಿಗೆ ಹೋಗಬೇಕಾದರೂ ನಗರದಿಂದ ಹೊರವಲಯದ ವಾಡಿ-ಚಿತ್ತಾಪೂರ ವೃತ್ತಕ್ಕೆ 4 ಕಿಮೀ ದೂರ ಕ್ರಮಿಸಿ ಬರಬೇಕಾಗುತ್ತದೆ.
ಈ ಎಲ್ಲಾ ಸಮಸ್ಯೆಗಳ ಮಧ್ಯೆ ವಾಡಿ-ಚಿತ್ತಾಪೂರ ವೃತ್ತದಲ್ಲಿ ತಂಗುದಾಣವಿಲ್ಲ.ಬಿಸಿಲು-ಮಳೆ ಎನ್ನದೇ ಬಸ್‍ಗಾಗಿ ದಿನನಿತ್ಯ ಪ್ರಯಾಣಿಕರು ಪರದಾಡುತ್ತಿದ್ದಾರೆ.ಇವರ ಗೋಳು ಯಾರು ಕೇಳದಂತಾಗಿದೆ. ಕೂಡಲೇ ವಾಡಿ-ಚಿತ್ತಾಪೂರ ವೃತ್ತದಲ್ಲಿ ಯಾದಗಿರಿ-ಕಲಬುರಗಿ ಮತ್ತು ಕಲಬುರಗಿ-ಯಾದಗಿರಿ ಬಸ್‍ಗಳು ಹಾಗೂ ಚಿತ್ತಾಪೂರ-ಕಲಬುರಗಿ ಎಲ್ಲಾ ಬಸ್‍ಗಳನ್ನು ಕಡ್ಡಾಯವಾಗಿ ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ನೂರಾರು ವಿದ್ಯಾರ್ಥಿಗಳು, ಸರಕಾರಿ ನೌಕರರು ಹಾಗೂ ಪ್ರಯಾಣಿಕರು ನಗರದಿಂದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಹೋಗುತ್ತಾರೆ.ಎಲ್ಲರೂ ಬಸ್‍ಗಳ ಮೇಲೆ ಅವಲಂಬಿತರಾಗಿದ್ದಾರೆ.ಆದರೆ ಕೆಲವು ತಿಂಗಳಿನಿಂದ ಸಾರಿಗೆ ಇಲಾಖೆಯ ಬೇಜವಾಬ್ದಾರಿತನದಿಂದ ಸಾರ್ವಜನಿಕರು ಪರದಾಡುವಂತಾಗಿದೆ.ಕೂಡಲೇ ಎಲ್ಲಾ ಬಸ್‍ಗಳನ್ನು ವಾಡಿ-ಚಿತ್ತಾಪೂರ ವೃತ್ತದಲ್ಲಿ ನಿಲ್ಲಿಸಬೇಕು- ಅನ್ವರ ಪಾಶಾ ಕಾಂಗ್ರೆಸ್ ಮುಖಂಡ.
ಕಣ್ಮುಂದೆ ಬಸ್‍ಗಳು ಬಂದರೂ ನಿಲ್ಲಿಸುತ್ತಿಲ್ಲ. ಕೆಲವು ಬಸ್‍ಗಳು ನಿಲ್ಲುತ್ತವೆ.ಆದರೆ ಸಮಯಕ್ಕೆ ಸರಿಯಾಗಿ ಬರೋದಿಲ್ಲ.ಇದರಿಂದ ನಿತ್ಯ ತಡವಾಗಿ ಹೋಗುವುದರಿಂದ ತರಗತಿಗಳಿಂದ ವಂಚಿತರಾಗುತ್ತಿದ್ದೆವೆ.ಅಲ್ಲದೇ ಉಪನ್ಯಾಸಕರಿಂದ ತರಾಟೆಗೆ ಒಳಗಾಗುತ್ತಿದ್ದೆವೆ.ಇದರಿಂದ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ.ಕೂಡಲೇ ಜಿಲ್ಲಾಧಿಕಾರಿಗಳು ಬಸ್‍ಗಳನ್ನು ನಿಲ್ಲಿಸಬೇಕು.- ಬಸವರಾಜ ಪಾಟೀಲ ವಿದ್ಯಾರ್ಥಿ
ನಗರದ ವಾಡಿ-ಚಿತ್ತಾಪೂರ ವೃತ್ತದಲ್ಲಿ ಬಸ್‍ಗಳು ನಿಲ್ಲುತ್ತಿಲ್ಲ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರ ದೂರಾಗಿದೆ.ಒಂದು ವಾರದೊಳಗೆ ಎಲ್ಲಾ ಬಸ್‍ಗಳನ್ನು ನಿಲ್ಲಿಸಬೇಕು.ಇಲ್ಲದಿದ್ದರೇ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆ.- ಯಲ್ಲಾಲಿಂಗ ಹಯ್ಯಾಳಕರ್ ತಾಲೂಕಾಧ್ಯಕ್ಷ ಕರವೇ.