ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಕೋಲಿ ಸಮಾಜದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಕಳೆದ ಒಂದುವರೆ ತಿಂಗಳಿಂದ ಕೋಲಿ ಕಬ್ಬಲಿಗ ಸಮಾಜದವರು ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸುತ್ತಿದ್ದರೂ ಅವರನ್ನು ಸೌಜನ್ಯಕ್ಕಾದರೂ ಭೇಟಿಯಾಗದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೆನ್ಸ್ ಇಲ್ಲ. ಸೆನ್ಸ್ ಇಲ್ಲದವರಿಗೆ ನಾನ್‍ಸೆನ್ಸ್ ಅನ್ನಬಹುದಲ್ಲವೇ? ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಆರೋಪಿಸಿದರು.
ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಕರುಣೇಶ್ವರ ಮಠದ ಆವರಣದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ಶ್ರೀರಾಮಚಂದ್ರ, ಹನುಮಂತ, ಹಿಂದು ಮುಖಂಡರ ಭಾವಚಿತ್ರ ವಿರೂಪಗೊಳಿಸಿ ಅಶೋಕ ಚಕ್ರದ ಧ್ವಜ ನೆಟ್ಟಿರುವುದು ಸರಿಯಾದುದಲ್ಲ. ಮೇಲಾಗಿ ಆಂದೋಲಾ ಸಿದ್ಧಲಿಂಗ ಸ್ವಾಮೀಜಿಗೆ ಜೀವ ಬೆದರಿಕೆ ಇದ್ದರೂ ಲಿಂಗಾಯತ ನಾಯಕರು ಸುಮ್ಮನಿರುವುದೇಕೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಚಿತ್ತಾಪುರ ತಾ.ಪಂ. ಅನಿರ್ಬಂಧಿತ ಅನುದಾನ ಯೋಜನೆ ಅಡಿಯಲ್ಲಿ 40,00 ಲಕ್ಷ ರೂ. ಕೆಟಿಪಿಪಿ ನಿಯಮಗಳನ್ನು ಉಲ್ಲಂಘನೆ ಮಾಡಿ ಅವ್ಯವಹಾರ ಮಾಡಿರುವ ಕುರಿತು ಈಗಾಗಲೇ ದೂರು ಸಲ್ಲಿಸಿದ್ದು, ಇಲ್ಲಿಯವರೆಗೆ ತನಿಖೆ ಕೈಗೊಂಡಿರುವುದಿಲ್ಲ ಎಂದು ದೂರಿದರು.
ಚಿತ್ತಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಕೌಂಟೆಂಟ್ ವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಮಹೇಶ ಬಾಳಿ, ಶ್ರೀಕಾಂತ ಸುಲೇಗಾಂವ ಇದ್ದರು.