ಸಂವಿಧಾನ ರಕ್ಷಣೆಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಡಿ.18ಕ್ಕೆ

0
23

ಸುರಪುರ: ದೇಶದಲ್ಲಿ ಇಂದು ಸಂವಿಧಾನ ಅಪಾಯದಲ್ಲಿದೆ, ಇದೆ ಮನಗಂಡು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಜಿಲ್ಲಾ ಘಟಕ ದಿಂದ ಸಂವಿಧಾನ ಸಮರ್ಪಣಾ ದಿನವನ್ನು ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಯಾದಗಿರಿಯ ಮಹರ್ಷಿ ವಾಲ್ಮೀಕಿ ಭವನದಲ್ಲಿ ಡಿ.18 ರಂದು ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ರಾಜ್ಯ ಸಮಿತಿಯ ತಿರ್ಮಾನದಂತೆ ಸಂವಿಧಾನ ಸಮರ್ಪಣಾ ದಿನದ ನಿಮಿತ್ತವಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ಈಗಾಗಲೇ ಚಾಮರಾಜನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೇ ತಿಂಗಳು 14 ರಂದು ಕಲಬುರಗಿ, 15 ರಂದು ಬೀದರ್, ಯಾದಗಿರಿಯಲ್ಲಿ 18 ರಂದು ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಯಾದಗಿರಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸುವರು. ಜಿಲ್ಲೆಯ ಎಲ್ಲ ಶಾಸಕರು, ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸೇರಿದಂತೆ ರಾಜ್ಯ, ವಿಭಾಗೀಯ, ಜಿಲ್ಲಾ, ತಾಲೂಕು ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ.

ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಮೂಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಸಮಾವೇಶದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಲಬುರಗಿ ವಿಭಾಗೀಯ ಪ್ರಧಾನ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿದರು. ಜಿಲ್ಲಾ ಪ್ರಧಾನ ಸಂಚಾಲಕ ಮರಳಸಿದ್ಧ ನಾಯ್ಕಲ್, ಜಿಲ್ಲಾ ಉಪ ಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ, ಮುಖಂಡರಾದ ಅಶೋಕ ಕಣಜೀಕರ್, ಬಸವರಾಜ ಅಣಬಿ, ಪರಶುರಾಮ ಪೂಜಾರಿ, ರಾಜು ದೊಡ್ಡಮನಿ, ಶರಣಪ್ಪ ತಳವಾರಗೇರಾ, ಮಡಿವಾಳಪ್ಪ ಎಂಟಮನೆ ಗೋಷ್ಠಿಯಲ್ಲಿ ಇದ್ದರು.

ಹಕ್ಕೊತ್ತಾಯಗಳಿಗೆ ಆಗ್ರಹ: ಕೇಂದ್ರ ಸರಕಾರ ಎಸ್ಸಿ,ಎಸ್ಟಿ ವರ್ಗಗಳಿಗೆ ವಿಶೇಷ ಘಟಕ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಕಾಯ್ದೆ ರೂಪಿಸಿ ಕೇಂದ್ರ ಬಜೆಟ್‍ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟು ಅನುಷ್ಠಾನಗೊಳಿಸಬೇಕು. ಜಾತಿ ಜನಗಣತಿಯನ್ನು ನಡೆಸಲು ಕೇಂದ್ರ ಸರಕಾರ ಸಂವಿಧಾನಿಕ ಕ್ರಮ ಕೈಗೊಳ್ಳಬೇಕು. ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಕಡ್ಡಾಯವಾಗಿ ರಾಜಕೀಯ ಮೀಸಲಾತಿ ದೊರಕಿಸಿಕೊಡಬೇಕು. ಜ್ಯೋತಿ ಬಾ ಪುಲೆ, ಸಾವಿತ್ರಬಾಯಿ ಪುಲೆಯವರ ನೆನಪಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನ ಆಚರಿಸಲು ಕ್ರಮಕೈಗೊಳ್ಳಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಭೂ ಹೀನ ಕೃಷಿ ಕಾರ್ಮಿಕರಿಗೆ ಭೂಮಿ ಮಂಜೂರು ಮಾಡಬೇಕು ಸೇರಿ 13ಕ್ಕೂ ಹೆಚ್ಚು ಹಕ್ಕೊತ್ತಾಯಗಳನ್ನು ಜಾರಿಗೊಳಿಸುವಂತೆ ಜಿಲ್ಲಾ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ಸಮಿತಿ ವಿಭಾಗೀಯ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ತಿಳಿಸಿದರು.
ನಮ್ಮ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಅವರ ಕರೆಯಂತೆ ಜಿಲ್ಲಾ ಸಮಾವೇಶ ಹಮ್ಮಿಕೊಂಡಿದ್ದು ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ-ಮಾಳಪ್ಪ ಕಿರದಳ್ಳಿ ಜಿ.ಉ.ಪ್ರ.ಸಂಚಾಲಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here