ಸುರಪುರ :ನಗರದ ಪ್ರಾಥಮಿಕ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ (ಪಿಎಲ್‍ಡಿ ಬ್ಯಾಂಕ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಸನಗೌಡ ಹಣಮಂತ್ರಾಯಗೌಡ ಪಾಟೀಲ್ ದೇವಪುರ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಯಾದಗಿರಿಯ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಶಂಕರ ಗೋಪಾಲ ಅವರು, ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಸನಗೌಡ ಹಣಮಂತ್ರಾಯಗೌಡ ಪಾಟೀಲ್ ದೇವಪುರ ಒಬ್ಬರೆ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಘೋಷಿಸಿದರು.
ಒಟ್ಟು ಹನ್ನೊಂದು ಜನ ನಿರ್ದೇಶಕರ ಪೈಕಿ ಏಳು ಜನ ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಬ್ಯಾಂಕ್‍ನ ನಿರ್ದೇಶಕರಾದ ರಾಜಾ ಸುಭಾಶ್ಚಂದ್ರ ನಾಯಕ, ರಾಮಚಂದ್ರ ಪೂಜಾರಿ, ವಾಮನರಾವ್ ದೇಶಪಾಂಡೆ, ನಿಂಗಣ್ಣ ಕೆಂಗೂರಿ, ಶೆಟ್ಟಿನಾಯಕ, ಬಸಣ್ಣ ಕಮತಗಿ ಮತ್ತು ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ ದಾಯಗೋಡಿ ಇದ್ದರು.
ಅಧ್ಯಕ್ಷರ ಹೆಸರು ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬ್ಯಾಂಕ್ ಆವರಣದಲ್ಲಿ ಪಟಾಕಿ ಸಿಡಿಸಿ, ಗುಲಾಲ್ ಎರಚಿ, ಸಿಹಿ ತಿನ್ನಿಸಿ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಮುಖಂಡರಾದ ವಿಠ್ಠಲ ಯಾದವ, ಶಾಸಕ ಆರ್‍ವಿಎನ್ ಅವರ ಆಪ್ತ ಸಹಾಯಕ ಹಣಮಂತ್ರಾಯ ಮಕಾಶಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.