ಕಲಬುರಗಿ : ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿಯನ್ವಯ ಕಲ್ಯಾಣ ಕರ್ನಾಟಕದ ನಿರುದ್ಯೋಗಿಗಳಿಗೆ ಆಯಾ ಇಲಾಖೆಯ ನೇಮಕಾತಿಗಳು ನಿಗದಿತ ಸಮಯಕ್ಕೆ ಭರ್ತಿ ಮಾಡಲು ಅದರಂತೆ ಕಲ್ಯಾಣ ಕರ್ನಾಟಕದ ನೌಕರರಿಗೆ ಮುಂಬಡ್ತಿಗಳು, ಕಾಲಮಿತಿಯಲ್ಲಿ ಸಿಗುವ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ಕ್ರಿಯಾಶೀಲವಾಗಿ ಮತ್ತು ದಿಟ್ಟತನದ ಕ್ರಮಗಳು ಕೈಗೊಳ್ಳಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ನಿಯೋಗ ಅರಣ್ಯ ಸಚಿವರು ಮತ್ತು ಬೀದರ ಜಿಲ್ಲಾ ಉಸ್ತುವಾರು ಸಚಿವರು ಹಾಗೂ 371ನೇ(ಜೆ) ಸಂಪುಟ ಉಪ ಸಮಿತಿಯ ಸದಸ್ಯರು ಆದ ಈಶ್ವರ ಖಂಡ್ರೆಯವರಿಗೆ ಮತ್ತು ಪೌರಾಡಳಿತ ಸಚಿವರು ಮತ್ತು 371ನೇ(ಜೆ) ಕಲಂ ಸಂಪುಟ ಉಪ ಸಮಿತಿಯ ಸಚಿವರಾದ ರಹಿಂ ಖಾನ್ ಅವರಿಗೆ 36 ಅಂಶಗಳ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.
ಹೀಗೆ 371ನೇ(ಜೆ) ಕಲಮಿಗೆ ಸಂಬಂಧಿಸಿದ 36 ಪ್ರಮುಖ ಅಂಶಗಳ ಪ್ರಸ್ತಾವನೆಯನ್ನು ಸಲ್ಲಿಸಿ ಇವುಗಳ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು. ಉಭಯ ಸಚಿವರು ಈ ಮಹತ್ವದ ವಿಷಯಗಳ ಬಗ್ಗೆ ವಿಶೇಷವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ಧಲಿಂಗಪ್ಪ ಪಾಟೀಲ, ಅರವಿಂದಕುಮಾರ ಅರಳಿ, ಸಮಿತಿಯ ಮುಖಂಡರಾದ ವಿನಯ ಮಾಳಗೆ, ರೋಹನಕುಮಾರ, ವೀರಶೆಟ್ಟಿ, ಭೀಮರೆಡ್ಡಿ, ಮಲ್ಲಿಕಾರ್ಜುನ ಭೂಸನೂರ, ಕೇದಾರನಥ ಪಾಟೀಲ, ಮಹೇಶಕುಮಾರ ಮೂಲಗೆ, ಈಶ್ವರಯ್ಯ ಸ್ವಾಮಿ, ರಾಮರೆಡ್ಡಿ ಪಾಟೀಲ, ನಾಗಶೆಟ್ಟಿ ಹಂಚೆ ಸೇರಿದಂತೆ ಅನೇಕರು ಇದ್ದರು.
ಒತ್ತಾಯಗಳು:
- 1) ನೇಮಕಾತಿ ಮತ್ತು ಮುಂಬಡ್ತಿಗಳಿಗೆ 371ನೇ(ಜೆ) ಕಲಂ ಸಂವಿಧಾನ ತಿದ್ದುಪಡಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾನದಂಡವನ್ನು ಅನುಸರಿಸಿ ತಕ್ಷಣ ಸುತ್ತೋಲೆ ಜಾರಿ ಮಾಡಿ ನ್ಯಾಯ ಒದಗಿಸಬೇಕು.
- 2) ಸರಕಾರ ಎಲ್ಲ ಇಲಾಖೆಗಳ ನೇಮಕಾತಿ ಅಧಿಸೂಚನೆ ಹೊರಡಿಸುವ ಮುಂಚೆ ಕಲ್ಯಾಣ ಕರ್ನಾಟಕ ವಿಶೇಷ ಘಟಕ ಪರಿಶೀಲಿಸಬೇಕು ಮತ್ತು ನಂತರ ಏನಾದರೂ ತಪ್ಪಾದರೆ ವಿಶೇಷ ಘಟಕದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಸರಕಾರ ಮುಂದಾಗಬೇಕು.
- 3) ರಾಜ್ಯ ಸರಕಾರದ ವತಿಯಿಂದ ಆಯಾ ಇಲಾಖೆಯ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿಗೆ ಸಂಬಂಧಿಸಿ ಆಗಾಗ ದ್ವಂದ್ವ ನೀತಿಯ ಸುತ್ತೋಲೆಗಳನ್ನು ಹೊರಡಿಸಿ ನಮ್ಮ ಪಾಲಿನ ನೇಮಕಾತಿಗಳಿಗೆ ಕೊಡಲಿ ಪೆಟ್ಟು ಹಾಕಲಾಗುತ್ತಿದೆ. ಇದನ್ನು ತಪ್ಪಿಸಲು ಕಲ್ಯಾಣ ಕರ್ನಾಟಕ ಪ್ರದೇಶದ ಮೆರಿಟ್ ಹೊಂದಿದ ಅಭ್ಯರ್ಥಿಗಳಿಗೆ ಮೊದಲು ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣ ಸಿ ನಂತರ ಸ್ಥಳಿಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣ ಸಲು ಕಠಿನ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಇದಕ್ಕೆ ಪೂರಕವಾಗಿ ಮಿಕ್ಕುಳಿದ ಹುದ್ದೆಗಳ ನೇಮಕಾತಿ ಪಟ್ಟಿ ಮೊದಲು ಪ್ರಕಟಿಸಿ ನಂತರ ಸ್ಥಳಿಯ ವೃಂದದ ನೇಮಕಾತಿ ಪಟ್ಟಿ ಪ್ರಕಟಿಸಬೇಕು. ಇದರಿಂದ ನಮ್ಮ ಪ್ರದೇಶದ ಅಭ್ಯರ್ಥಿಗಳಿಗೆ ಮಿಕ್ಕುಳಿದ ಕೋಟಾದಲ್ಲಿ ಮೆರಿಟ್ ಆಧಾರ ಹೊಂದಿದ್ದಲ್ಲಿ, ಅಲ್ಲಿಯೂ ಕೂಡ ಸ್ಥಾನ ಲಭಿಸುವವು. ಅದರಂತೆ ಸ್ಥಳಿಯ ವೃಂದದಲ್ಲಿ ನಮ್ಮ ಪಾಲಿನ ಸ್ಥಾನಗಳು ಸಹಜವಾಗಿ ಲಭಿಸುತ್ತವೆ.
- 4) ಪರೀಕ್ಷಾ ಪ್ರಾಧಿಕಾರ ನೇಮಕಾತಿಗಳಿಗೆ ಸಂಬಂಧಿಸಿ ಸಂಪುಟ ಉಪ ಸಮಿತಿಯ ನಿರ್ದೇಶನಗಳಂತೆ ಸರಕಾರದ ಆದೇಶವನ್ನು ಪಾಲಿಸಿ ಕಟ್ತುನಿಟ್ಟಾಗಿ ಸುತ್ತೋಲೆಗಳನ್ನು ಹೊರಡಿಸಿ ಅದರಂತೆ ಪ್ರಕ್ರಿಯೆಗಳನ್ನು ಕೈಗೊಳ್ಳಲು ಆದೇಶಿಸಬೇಕು.
- 5) ಹೈದ್ರಾಬಾದ ಕರ್ನಾಟಕ ಉದ್ಯೋಗ ಮೀಸಲಾತಿ ಆದೇಶ, 2013ರ ಕಂಡಿಕೆ 10(4) ಪ್ರಕಾರ ಗುತ್ತಿಗೆ ಅಥವಾ ತಾತ್ಕಾಲಿಕ ಹುದ್ದೆಗಳಲ್ಲಿಯೂ ಮೀಸಲಾತಿ ನೀಡುವದು ಕಡ್ಡಾಯವಾಗಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಬೇಕು.
- 6) ಕಲ್ಯಾಣ ಕರ್ನಾಟಕ ಉದ್ಯೋಗ ಮೀಸಲಾತಿ ಆದೇಶ, 2013ರ ಕಂಡಿಕೆ 13(ಎ) ಪ್ರಕಾರ ರಾಜ್ಯ ಮಟ್ಟದ ಕಛೇರಿಗಳನ್ನು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಸ್ಥಳಾಂತರ ಮಾಡಿ ಸ್ಪಂದಿಸುವುದು ಅತಿ ಅವಶ್ಯವಾಗಿದೆ.
- 7) ಕಲ್ಯಾಣ ಕರ್ನಾಟಕ ಉದ್ಯೋಗ ಮೀಸಲಾತಿ ಆದೇಶ, 2013ರ ಕಂಡಿಕೆ 13(ಬಿ)(ಎ) ಪ್ರಕಾರ ನೇಮಕಾತಿಯ ಸಂದರ್ಭದಲ್ಲಿ ವಯಸ್ಸಿನಲ್ಲಿ ಅಥವಾ ಯಾವುದೇ ಇತರೆ ವಿನಾಯತಿ ನೀಡುವದು.
- 8) ಕಲ್ಯಾಣ ಕರ್ನಾಟಕ ಉದ್ಯೋಗ ಮೀಸಲಾತಿ ಆದೇಶ, 2013ರ ಕಂಡಿಕೆ 13(ಬಿ)(ಬಿ) ಪ್ರಕಾರ ಸ್ಥಳೀಯ ವ್ಯಕ್ತಿಗೆ ಕೃಪಾಂಕ ನೀಡುವದು.
- 9) ಕಲ್ಯಾಣ ಕರ್ನಾಟಕ ಉದ್ಯೋಗ ಮೀಸಲಾತಿ ಆದೇಶ, 2013ರ ಕಂಡಿಕೆ 13(ಸಿ)ಯ ಪ್ರಕಾರ 1-1-2013ಕ್ಕೆ ಮುಂಚೆ ಹತ್ತು ವರ್ಷಗಳಿಗಿಂತ ಹೆಚ್ಚಾಗಿಸರಕಾರದಲ್ಲಿ ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿರುವ ಮತ್ತ ನಿಯಮಿಸಲಾದ ಷರತ್ತುಗಳನ್ನು ಪೂರೈಸಿರುವ ಮತ್ತು ಸರಕಾರದಿಂದ ಸ್ಥಳೀಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮತ್ತು ಸರಕಾರವು ನಿಯಮಸಬಹುದಾದ ಇತರ ಪ್ರಯೋಜನೆಗಳಲ್ಲಿ ಕೆಲವು ರಿಯಾಯತಿಗಳನ್ನು ನೀಡಬಹುದು.
- 10) 371ನೇ (ಜೆ) ಕಲಂ ಅಡಿ ಬರುವ ಸಮಸ್ಯೆಗಳ ಮತ್ತು ಅಪಿಲುಗಳ ನಿವಾರಣೆಗೆ ಪ್ರತ್ಯೇಕ ಟ್ರಿಬ್ಯೂನಲ್ (ನ್ಯಾಯಾಧೀಕರಣ) ವಿಭಾಗಿಯ ಕೇಂದ್ರ ಕಲಬುರಗಿಯಲ್ಲಿ ಸ್ಥಾಪನೆ ಮಾಡಬೇಕು. ಸದರಿ ನ್ಯಾಯಾಧೀಕರಣದ ಸ್ಥಾಪನೆಯ ಬಗ್ಗೆ 371ನೇ(ಜೆ) ಕಲಂ ಖಂಡಿಕೆ 12(ಎ) ದಲ್ಲಿಯೂ ಸಹ ಉಲ್ಲೇಖಿಸಲಾಗಿದೆ. ಇದರ ಸ್ಥಾಪನೆಯಿಂದ ನಮ್ಮ ಎಲ್ಲಾ ಸಮಸ್ಯೆಗಳಿಗೆ ಒಂದೇ ಕೇಂದ್ರದಿಂದ ವ್ಯವಹಾರ ನಡೆಸಿ ನ್ಯಾಯ ಪಡೆಯಲು ಅನುಕೂಲವಾಗುವುದು.
- 11) ಸಂವಿಧಾನದ 371(ಜೆ) ಕಲಂ ಸಮಗ್ರವಾಗಿ ಅನುಷ್ಠಾನಗೊಳಿಸಲು ಉಪ ಸಮಿತಿಯ ಅಧ್ಯಕ್ಷರ, ಅಧ್ಯಕ್ಷತೆಯಲ್ಲಿ ಉಪಸಮಿತಿಯ ಸದಸ್ಯರುಗಳ ಉಪಸ್ಥಿತಿಯಲ್ಲಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಹಾಗೂ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಸೇರಿದಂತೆ ಆಯಾ ಜಿಲ್ಲೆಯ ಆಯ್ದ ಕೆಲವು ಚಿಂತಕರು ಮತ್ತು ಪರಿಣಿತ ಹೋರಾಟಗಾರರ ಸಮ್ಮುಖದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ 371(ಜೆ) ಅನುಷ್ಠಾನವಾಗಿರುವ ಬಗ್ಗೆ ಪರಿಶೀಲನೆ ಸಭೆ ನಡೆಸಲು ವಿಶೇಷವಾಗಿ ಸರಕಾರಕ್ಕೆ ಸಮಿತಿ ಕೋರಿದೆ.
- 12) ಸಂವಿಧಾನದ 371ನೇ(ಜೆ) ಕಲಂ ಕಳೆದ 10 ವರ್ಷಗಳಿಂದ ನ್ಯಾಯಸಮ್ಮತವಾಗಿ ಅನುಷ್ಠಾನವಾಗದಿರಲು ಇದಕ್ಕೆ ಪ್ರತ್ಯೇಕ ಸಚಿವಾಲಯದ ಕೊರತೆಯೇ ಮುಖ್ಯ ಕಾರಣವಾಗಿದೆ. ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕದ ವಿಶೇಷ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಇದರಡಿ ನೇಮಕಾತಿಗಳ, ಮುಂಬಡ್ತಿಗಳ, ವಿಶೇಷ ಅಭಿವೃದ್ಧಿಗೆ ಸಂಬಂಧಿಸಿದ ಮಂಡಳಿಯ ಅಂಶಗಳು, ಭವಿಷ್ಯದಲ್ಲಿ ವಿಶೇಷ ಸ್ಥಾನಮಾನದಲ್ಲಿ ತಿದ್ದುಪಡಿಯಾಗುವ ಅಂಶಗಳನ್ನು ಇದರಲ್ಲಿ ಸೇರಿಸಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ಕಲಂ ಸಮಗ್ರ ಅನುಷ್ಠಾನಕ್ಕಾಗಿ ಕಲ್ಯಾಣದ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯವೊಂದನ್ನು ಸ್ಥಾಪಿಸಿ, ಅಪರ ಮುಖ್ಯ ಕಾರ್ಯದರ್ಶಿ ಸ್ಥಾನದ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ಮಾಡಬೇಕು. ಅಂದಾಗ ಮಾತ್ರ ಇದರ ಪರಿಣಾಮಕಾರಿ ಅನುಷ್ಠಾನವಾಗುವದಲ್ಲದೇ ನಮ್ಮ ಭಾಗದ ಜನರಿಗೆ ವಿಶೇಷ ಸ್ಥಾನಮಾನದ ಫಲ ಸಮಾರೋಪವಾಗಿ ಸಿಗುವುದರ ಜೊತೆಗೆ ಕಾಲಮಿತಿಯಲ್ಲಿ ಅಭಿವೃದ್ಧಿಯಾಗುವುದು. ಈ ಬಗ್ಗೆ ದಿನಾಂಕ : 17.09.2019 ರಂದು ಆಗಿನ ಮುಖ್ಯಮಂತ್ರಿಗಳು ಪ್ರತ್ಯೇಕ ಸಚಿವಾಲಯ ರಚನೆಯ ಬಗ್ಗೆ ಅಧಿಕೃತವಾಗಿ ಕಲಬುರಗಿಯಲ್ಲಿ ಘೋಷಣೆ ಮಾಡಿದರು, ಆದರೆ ಇದು ಕೇವಲ ಘೋಷಣೆಯಾಗಿಯೇ ಉಳಿದಿದೆ.