ವಿಜಯನಗರ ವಾರ್ಡ್ ರದ್ದು: ದಲಿತರ ಆಕ್ರೋಶ

0
18

ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ ವಾಡಿ ಪುರಸಭೆ ಒಟ್ಟು 23 ವಾರ್ಡ್‍ಗಳನ್ನು ಹೊಂದಿದ್ದು, ಪ್ರತ್ಯೇಕ ವಾರ್ಡ್ ಆಗಿ ಗುರುತಿಸಲಾಗುತ್ತಿದ್ದ ವಿಜಯನಗರವನ್ನು ರದ್ದುಪಡಿಸಿರುವುದು ಕಾನೂನು ಬಾಹೀರವಾಗಿದೆ ಎಂದು ಬಡಾವಣೆಯ ದಲಿತ ಮುಖಂಡರು ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಮಾದಿಗ ಸಮಾಜದ ಅಧ್ಯಕ್ಷ ಬಸವರಾಜ ಕಾಟಮಳ್ಳಿ, ಬಹುತೇಕ ದಲಿತ ಕುಟುಂಬಗಳೇ ವಾಸಿಸುವ ವಿಜಯನಗರ ಬಡಾವಣೆಯನ್ನು ಕೈಬಿಟ್ಟು ಇನ್ನೊಂದು ವಾರ್ಡ್‍ಗೆ ವಿಲೀನ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಪುರಸಭೆ ಚುನಾವಣೆ ವೇಳೆ ಚುನಾವಣಾ ಅಧಿಕಾರಿಗಳೇ ವಿಜಯನಗರ, ಹನುಮಾನ ನಗರ ಮತ್ತು ಇಂದ್ರಾ ನಗರಗಳನ್ನು ಪ್ರತ್ಯೇಕ ವಾರ್ಡ್‍ಗಳಾಗಿ ವಿಂಗಡಿಸಿ ಚುನಾವಣೆ ನಡೆಸಿದ್ದರು. ಆದರೆ ಈ ಸಲ ಈ ಮೂರು ವಾರ್ಡ್‍ಗಳನ್ನು ಒಂದೇ ವಾರ್ಡ್ ಆಗಿ ರಚಿಸುವ ಮೂಲಕ ಗೊಂದಲ ಸೃಷ್ಠಿಸಿದ್ದಾರೆ ಎಂದು ದೂರಿದ್ದಾರೆ.

Contact Your\'s Advertisement; 9902492681

ವಿಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 1700 ಮತದಾರರಿದ್ದಾರೆ. ಶೇ.90 ರಷ್ಟು ಪರಿಶಿಷ್ಟ ಜಾತಿಗೆ ಸೇರಿದ ದಲಿತ ಕುಟುಂಬಗಳು ವಾಸವಿದ್ದಾರೆ. ಪುರಸಭೆ ಚುನಾವಣೆಗೆ ಜನಪ್ರತಿನಿಧಿ ಆಯ್ಕೆಯಾಗಲು ಪರಿಶಿಷ್ಟ ಜಾತಿ ಮೀಸಲಾತಿಗೆ ಅರ್ಹ ವಾರ್ಡ್ ಇದಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ವಾರ್ಡ್ ಮತದಾರರ ಸಂಖ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆ. ಪರಿಣಾಮ ವಿಜಯನಗರ ದಲಿತರ ಬಡಾವಣೆಯನ್ನು ವಾರ್ಡ್ ಪಟ್ಟಿಯಿಂದ ಕೈಬಿಡಲಾಗಿದೆ.

ಇದರಿಂದ ಓರ್ವ ದಲಿತ ಸದಸ್ಯ ಪುರಸಭೆಯ ಜನಪ್ರತಿನಿಧಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಸವರಾಜ ಕಾಟಮಳ್ಳಿ, ಕೂಡಲೇ ಮತದಾರರ ಮರು ಸಮೀಕ್ಷೆ ಕೈಗೊಳ್ಳುವ ಮೂಲಕ ವಿಜಯನಗರವನ್ನು ಪುನಹಃ ಪ್ರತ್ಯೇಕ ವಾರ್ಡ್ ಎಂದು ಘೋಷಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ರದ್ದಾದ ವಿಜಯನಗರವನ್ನು ವಾರ್ಡ್ ಆಗಿ ಬದಲಿಸದಿದ್ದರೆ ಹೋರಾಟ ಅನಿವಾರ್ಯ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here