ಭಾವನಾತ್ಮಕ ರಾಜಕಾರಣ ವಿರೋಧಿಸಿ ಪ್ರತಿಭಟನೆ: ಪ್ರಧಾನಿ ಪ್ರತಿಕೃತಿ ದಹನಕ್ಕೆ ಪೋಲಿಸ್‍ರಿಂದ ಅಡ್ಡಿ

0
14

ಕಲಬುರಗಿ: ಭಾವನಾತ್ಮಕ ರಾಜಕಾರಣವನ್ನು ಕೈಬಿಟ್ಟು ಜನರ ಬದುಕು ಕಟ್ಟುವ ರಾಜಕಾರಣವನ್ನು ಮಾಡಬೇಕು ಎಂದು ಒತ್ತಾಯಿಸಿ ಇದೇ ಜನವರಿ 20ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಜೆಟ್ ಪೂರ್ವ ಜನರ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ಭೂತದಹನ ಚಳುವಳಿ ನಿಮಿತ್ಯ ಶನಿವಾರ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಮತ್ತು ಪ್ರಧಾನಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ ಅದನ್ನು ಪೋಲಿಸರು ತಡೆದರು.

ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಕಾ. ಪದ್ಮಾವತಿ ಎನ್. ಮಾಲಿಪಾಟೀಲ್ ಅವರು ಪ್ರತಿಕೃತಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದ ಮುಂದೆ ಬೆಂಕಿ ಹಚ್ಚಲು ಮುಂದಾದಾಗ ಪೋಲಿಸ್ ಪೇದೆಯೊಬ್ಬರು ಅದನ್ನು ತಡೆದರು. ಆದಾಗ್ಯೂ, ಕಡ್ಡಿ ಗೀರಿ ಪ್ರತಿಕೃತಿಗೆ ಬೆಂಕಿ ಹಚ್ಚಿದಾಗ ಪೇದೆಯು ಬೂಟುಗಾಲಿನಿಂದ ಅದರ ಮೇಲೆ ಕಾಲಿಟ್ಟು ಬೆಂಕಿ ಆವರಿಸದಂತೆ ತಡೆದರು. ಆಗ ಪಕ್ಷದ ರಾಜ್ಯ ಮಂಡಳಿ ಸದಸ್ಯ ಕಾಂ. ಮೌಲಾ ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ್ ರಾಠೋಡ್ ಮುಂತಾದವರು ಸಹ ಬೆಂಕಿ ಹಚ್ಚಲು ಮುಂದಾದಾಗ ಪೋಲಿಸರು ಅದಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಪೋಲಿಸರು ಪ್ರಮುಖರನ್ನು ತಳ್ಳಿ ಪ್ರತಿಕೃತಿ ದಹನಕ್ಕೆ ಅಡ್ಡಿಪಡಿಸಿದರು.

Contact Your\'s Advertisement; 9902492681

ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ, ಸುಪ್ರಿಂಕೋರ್ಟ್ ಆಧಾರದ ಮೇಲೆ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಂತಹ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಇಂತಹ ರಾಜಕಾರಣದ ಬದಲಿಗೆ ಜನರ ಬದುಕನ್ನು ಕಟ್ಟುವಂತಹ ರಾಜಕಾರಣ ಮಾಡಬೇಕು. ಜನರ ಬೇಡಿಕೆಗಳಿಗೆ ಸ್ಪಂದಿಸಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಬರ ಬಿದ್ದಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಪರಿಹಾರ ನಿಧಿ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯದ ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಯಾವುದೇ ತಾರತಮ್ಯ ಮಾಡದೇ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿರುವ 18,171 ಕೋಟಿ ರೂ.ಗಳನ್ನು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಬೇಕು ಎಂದು ಅವರು ಅಗ್ರಹಿಸಿದರು.

ಗ್ರಾಮೀಣ ಜನರ ವಲಸೆ ತಡೆಯಲು ಮತ್ತು ಅವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಯುಪಿಎ-1 ಸರ್ಕಾರ ರೂಪಿಸಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಯೋಜನೆಗೆ ನೀಡುತ್ತಿರುವ ಅನುದಾನ ಕಡಿತಗೊಳಿಸಿದ್ದು ಖಂಡನಾರ್ಹ. ಮನರೇಗಾ ಯೋಜನೆಯ ಸೌಲಭ್ಯವನ್ನು 100 ದಿನಗಳಿಂದ 200 ದಿನಗಳವರೆಗೆ ವಿಸ್ತರಿಸಿ ಅದರಡಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು 600ರೂ.ಗಳಿಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ವಸತಿ ರಹಿತರ ಸಮಸ್ಯೆ ಗಂಭೀರವಾಗಿದೆ. ಸುಮಾರು 27 ಲಕ್ಷ ಕುಟುಂಬಗಳು ವಸತಿ ಹೀನವಾಗಿವೆ. ಕಳೆದ 2018ರಲ್ಲಿ ಪ್ರಧಾನಿಯವರು ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಸ್ವಂತ ಮನೆಯನ್ನು ಕಲ್ಪಿಸಿಕೊಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದಾಗ್ಯೂ, ರಾಜ್ಯದಲ್ಲಿ ಇಲ್ಲಿಯವರೆಗೂ 27 ಲಕ್ಷ ಕುಟುಂಬಗಳು ಸ್ವಂತ ಸೂರಿಲ್ಲದೇ ಬದುಕು ಸವೆಸುತ್ತಿವೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ಮನೆಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಹಿಂದಿನ ರಾಜ್ಯ ಬಿಜೆಪಿ ಸರ್ಕಾರ 1948ರ ಫ್ಯಾಕ್ಟರೀಸ್ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಿದೆ. ಅಲ್ಲದೇ ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳೆಯದ ಕೆಲಸದಲ್ಲಿ ದುಡಿಯುವಂತೆ ಕಾನೂನು ರೂಪಿಸಿತು. ಕೂಡಲೇ ಈ ತಿದ್ದುಪಡಿಯನ್ನು ಹಿಂಪಡೆದು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಕಳೆದ ಬಿಜೆಪಿ ಸರ್ಕಾರದಲ್ಲಿ ತಿದ್ದುಪಡಿ ಮಾಡಿದ ಭೂ ಸುಧಾರಣಾ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಅವರು, ಚುನಾವಣಾ ಪೂರ್ವದಲ್ಲಿ ಬೆಳಗಾವಿಯ ಖಾನಾಪುರದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಸಂಗಾತಿಗಳೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ವಾದ್ರಾ ಅವರು ಅಂಗನವಾಡಿ, ಅಕ್ಷರ ದಾಸೋಹ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಸ್ಥಿತಿಗತಿಯ ಕುರಿತು ಚರ್ಚಿಸಿದರು. ಮನವಿಯನ್ನು ಪುರಸ್ಕರಿಸಿದ ಅವರು, ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಆರನೇ ಗ್ಯಾರಂಟಿಯಾಗಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮೂರು ಕ್ಷೇತ್ರಗಳ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದಾಗಿ ಘೋಷಿಸಿದ್ದರು. ಅದನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಅವರು ಚುನಾವಣಾ ಪೂರ್ವದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ, ಕಳೆದ 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಪ್ರಮಾಣ ದೇಶದಲ್ಲಿ ಕಾಣಿಸುತ್ತಿದೆ. ಕೂಡಲೇ ಉದ್ಯೋಗ ಸೃಷ್ಟಿ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ದಲಿತ ಕಾಲೋನಿಗಳ ಮತ್ತು ಬುಡಕಟ್ಟು ಹಾಡಿಗಳ ಸಮಗ್ರ ಅಭಿವೃದ್ಧಿಗೆ ಪ್ರತಿ ಕಾಲೋನಿ ಮತ್ತು ಹಾಡಿಗೂ ಪ್ರತ್ಯೇಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಗತ್ಯ ಹಣಕಾಸಿನ ನೆರವನ್ನು ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನದಲ್ಲಿ ಭರಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಿಂದಿನ ಅಧಿಕಾರಾವಧಿಯಲ್ಲಿ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಯ ವರದಿಯನ್ನು ಬಿಹಾರ್ ರಾಜ್ಯದಲ್ಲಿ ಬಿಡುಗಡೆ ಮಾಡಿರುವಂತೆ ರಾಜ್ಯದಲ್ಲೂ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಭುದೇವ್ ಯಳಸಂಗಿ, ಭೀಮಾಶಂಕರ್ ಮಾಡಿಯಾಳ್, ಶಿವಲಿಂಗಮ್ಮ ಲೆಂಗಟಿಕರ್, ಶರಣಬಸಪ್ಪ ಗಣಜಲಖೇಡ್, ಶರಣಮ್ಮ, ಮಲ್ಲಿಕಾರ್ಜುನ್ ದೊಡ್ಡಮನಿ, ಭೀಮರಾಯ್ ಮುದಬಸಪ್ಪಗೋಳ್, ಮೈಲಾರಿ ಜೋಗೆ, ಜಯಶ್ರೀ, ಅನಿಲ್ ಕಾಂಬಳೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here