ಕಲಬುರಗಿ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನವರಂಗದಲ್ಲಿ ನಡೆದ ೩೨ ನೇ ನುಡಿಹಬ್ಬ ಘಟಿಕೋತ್ಸವದಲ್ಲಿ ಲೇಖಕ ಗಿರೀಶ ಜಕಾಪುರೆಯವರಿಗೆ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಯಿತು.
ಗಿರೀಶ ಜಕಾಪುರೆಯವರು ಕಲಬುರಗಿಯ ಸ್ವಾಯತ್ತ ಸರ್ಕಾರಿ ಪದವಿ ಕಾಲೇಜಿನ ಸಹಪ್ರಾಧ್ಯಾಪಕರಾಗಿರುವ ಡಾ. ರೋಲೇಕರ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ‘ಚದುರಂಗ ಮತ್ತು ಪ್ರೇಮಚಂದರ ಸಾಹಿತ್ಯದಲ್ಲಿ ಪ್ರತಿಭಟನೆಯ ನೆಲೆಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಸಮಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್, ಅನಂತಪುರ್ ನ ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಎಸ್.ಎ. ಕೋರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ, ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಡ ಹಾಗೂ ಅಧ್ಯಯನಾಂಗದ ನಿರ್ದೇಶಕರಾದ ಡಾ. ಪಿ. ಮಹಾದೇವಯ್ಯ ಅವರು ಪದವಿ ನೀಡಿ ಸನ್ಮಾನಿಸಿದರು. ಸಮಾರಂಭದ ವೇದಿಕೆಯ ಮೇಲೆ ನಾಡೋಜ ಡಾ. ತೇಜಸ್ವಿನಿ ಕಟ್ಟಿಮನಿ, ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ನಾಡೋಜ ಡಾ. ಎಸ್. ಸಿ. ಶರ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಮೂಲತಃ ಮಹಾರಾಷ್ಟ್ರದ ಮೈಂದರ್ಗಿಯವರಾದ ಗಿರೀಶ ಜಕಾಪುರೆಯವರು ಸದ್ಯ ಕಲಬುರಗಿ ಜಿಲ್ಲೆಯ ಕೋಗನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಕಥೆ, ಕಾವ್ಯ, ಕಾದಂಬರಿ, ಮಕ್ಕಳಸಾಹಿತ್ಯ, ಅನುವಾದ, ಗಜಲ್ ಮುಂತಾದ ಪ್ರಕಾರಗಳಲ್ಲಿ ೩೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯಲೋಕದಲ್ಲಿಯೂ ಪರಿಚಿತರಾಗಿದ್ದಾರೆ.