ಪ್ರಕರಣ ಇತ್ಯರ್ಥಕ್ಕೆ ಮಾರ್ಚ 9 ರಂದು ರಾಷ್ಟ್ರೀಯ ಲೋಕ ಅದಾಲತ್

0
17

ಕಲಬುರಗಿ: ಬಹುದಿನಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಪರಸ್ಪರ ರಾಜಿ- ಸಂಧಾನದ ಮೂಲಕ ಸುಖಾಂತ್ಯಗೊಳಿಸುವ ಪ್ರಯುಕ್ತ ಇದೇ ಮಾರ್ಚ 9 ರಂದು ಜಿಲ್ಲೆಯ ಎಲ್ಲ ಕೋರ್ಟ್‍ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ನಾಗಶ್ರೀ ತಿಳಿಸಿದರು.

ಪ್ರಾಧಿಕಾರದ ಎಡಿಆರ್ ಕಟ್ಟಡದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲಾ ವ್ಯಾಪ್ತಿಯ ಎಲ್ಲ ತಾಲೂಕು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿರುವ ಇತ್ಯರ್ಥವಾಗಬಹುದಾದ ಪ್ರಕರಣಗಳನ್ನು ಈ ಅದಾಲತ್‍ನಲ್ಲಿ ವಿಚಾರಣೆಗೆ ಕೈಗೆತ್ತುಕೊಂಡು ಉಭಯ ಕಕ್ಷಿದಾರರಿಗೂ ಸಮಾಧಾನ ತರುವಂತೆ ಇತ್ಯರ್ಥಗೊಳಿಸಲಾಗುವುದು ಎಂದರು.

Contact Your\'s Advertisement; 9902492681

ಕಲಬುರಗಿ ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಹೀಗಾಗಿ, ಈ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಲೋಕ ಅದಾಲತ್ ಸಹಾಯಕ್ಕೆ ಬರಲಿದೆ. ಮೇಲಾಗಿ, ಕಕ್ಷಿದಾರರ ಹಣ ಮತ್ತು ಸಮಯ ಉಳಿತಾಯ ಆಗುವುದರಿಂದ ಈ ನಿಟ್ಟಿನಲ್ಲಿ ಸಾರ್ವಜನಿಕರು ಲೋಕ ಅದಾಲತ್ ಲಾಭ ಪಡೆಯಬೇಕೆಂದು ಸಲಹೆ ನೀಡಿದರು.

ಲೋಕ ಅದಾಲತ್/ಜನತಾ ನ್ಯಾಯಾಲಯದಲ್ಲಿ ಒಮ್ಮೆ ಇತ್ಯರ್ಥಗೊಳ್ಳುವ ಪ್ರಕರಣ ಕುರಿತಂತೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ, ಆಸಕ್ತ ಕಕ್ಷಿದಾರರು ನೇರವಾಗಿ ಕೋರ್ಟ್ ಅಧಿಕಾರಿಗಳು ಅಥವಾ ತಮ್ಮ ವಕೀಲರ ಮೂಲಕ ಲೋಕ ಅದಾಲತ್ ವಿಚಾರಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ಮಾಹಿತಿ ನೀಡಿದರು.

ಪತಿ-ಪತ್ನಿ ಮಧ್ಯೆ ಏರ್ಪಟ್ಟಿರುವ ವ್ಯಾಜ್ಯ, ವಿಚ್ಛೇದನಾ ಪ್ರಕರಣ, ಮೋಟಾರು ಅಪಘಾತ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಆಸ್ತಿ ವಿವಾದ, ಭೂಸ್ವಾಧೀನ ಪ್ರಕರಣ, ವಿದ್ಯುತ್ ಮತ್ತು ನೀರಿನ ಶುಲ್ಕ ಪಾವತಿ ಬಾಕಿ ಪ್ರಕರಣ, ಬ್ಯಾಂಕ್ ಸಾಲ ಪ್ರಕರಣ ಸೇರಿದಂತೆ ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದಾದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಗೊಳಿಸಲಾಗುವುದು ಎಂದು ವಿವರಿಸಿದರು.

ಕಳೆದ ಡಿಸೆಂಬರ್, 2023ರಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಒಟ್ಟು 36142 ಪ್ರಕರಣಗಳ ಪೈಕಿ 31155 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಈ ಬಾರಿ ನಡೆಯಲಿರುವ ಲೋಕ ಅದಾಲತ್‍ನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಹುದಿನಗಳಿಂದ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವ ಕಕ್ಷಿದಾರರು ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಜಿಲ್ಲೆಯ ಯಾವುದೇ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು. ಜೊತೆಗೆ, ಕಾಯಂ ಜನತಾ ನ್ಯಾಯಾಲಯ ಕಚೇರಿಯನ್ನು ಸಹ ಸಂಪರ್ಕಿಸಬಹುದು ಎಂದು ನ್ಯಾಯಾಧೀಶರಾದ ಎಸ್.ನಾಗಶ್ರೀ ತಿಳಿಸಿದರು.

ಇನ್ನು, ತಮ್ಮ ವಕೀಲರ ಮೂಲಕ ಅಥವಾ ನೇರವಾಗಿಯೂ ಕಕ್ಷಿದಾರರು ಲೋಕ ಅದಾಲತ್‍ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆದರೆ, ಅಗತ್ಯ ಕಾನೂನು ಜ್ಞಾನದ ಅವಶ್ಯಕತೆ ಇರುವ ಕಾರಣಕ್ಕೆ ವಕೀಲರ ಮೂಲಕ ಹಾಜರಾಗುವುದು ಹೆಚ್ಚು ಸೂಕ್ತ ಎಂದು ಅವರು ಕಿವಿಮಾತು ಹೇಳಿದರು.

ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here