ಕಲಬುರಗಿ: ಬೇಸಿಗೆ ಮತ್ತು ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿ ಮತ್ತು ಪಕ್ಷಿಗಳ ನೀರಿನ ದಾಹ ಇಂಗಿಸಲು ಕೃತಕ ನೀರಿನ ತೊಟ್ಟಿಗೆ ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತದೆ.
ಪ್ರತಿ ಸಿ.ಸಿ.ಪಾಂಡ್ 15 ರಿಂದ 20 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದು, 5-6 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಇದರಿಂದ ಕಾಡಿನಲ್ಲಿರುವ ಮೂಕ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಿಸದಂತಾಗಲಿದೆ.
ಚಿಂಚೋಳಿ ವನ್ಯಜೀವಿ ವಲಯದ ಶೇರಿಬಿಕನಳ್ಳಿ, ಯಾಕತಪೂರ, ಸೋಮಲಿಂಗದಳ್ಳಿ ಹಾಗೂ ನೇಚರ್ಲಾ ಅರಣ್ಯ ಪ್ರದೇಶದಲ್ಲಿ ತಲಾ 2 ಮತ್ತು ಅಂತಾವರಂ ಹಾಗೂ ಬುರುಗದೊಡ್ಡಿ ವಲಯದಲ್ಲಿ ತಲಾ 1 ಸೇರಿ ಒಟ್ಟು 10 ಸಿ.ಸಿ.ಪಾಂಡ್ ನಿರ್ಮಿಸಲಾಗಿದೆ.
ಸಿ.ಸಿ.ಪಾಂಡ್ ಗೆ ಬೇಸಿಗೆ ಅವಧಿಯಲ್ಲಿ ನಿಯಮಿತವಾಗಿ ನೀರು ಪೂರೈಕೆ ಮಾಡುವ ಮೂಲಕ ಕಾಡು ಪ್ರಾಣಿ- ಪಕ್ಷಿಗಳ ನೀರಿನ ದಾಹ ನೀಗಿಸಲು ಇಲಾಖೆ ಮುಂದಾಗಿದೆ ಎನ್ನುತ್ತಾರೆ ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ.