ಮಹಿಳೆಗೆ ಲಂಚ ಕೇಳಿದ ಪೋಲಿಸ್ ಪೇದೆ ಲಕ್ಷ್ಮಣ್ ಕ್ಷೇತ್ರಿ ವಿರುದ್ಧ ಎಸಿಬಿಗೆ ದೂರು

0
89

ಕಲಬುರಗಿ: ಕ್ಷುಲ್ಲಕ ಕಾರಣವೊಂದರಲ್ಲಿ ಪಕ್ಕದ ಮನೆಯವರೊಂದಿಗೆ ಜಗಳವಾಡಿ ರಾಜೀ ಸಂಧಾನ ಮಾಡಿಕೊಂಡ ಜಿಲ್ಲೆಯ ಆಳಂದ್ ತಾಲ್ಲೂಕಿನ ಸರಸಂಬಾ ಗ್ರಾಮದ ರೈತ ಮಹಿಳೆ ಶ್ರೀಮತಿ ಶ್ರೀದೇವಿ ಗಂಡ ಬಸವರಾಜ್ ಗುಡ್ಡಡಗಿ ಅವರಿಗೆ ಪ್ರಕರಣ ದಾಖಲಿಸದಿರಲು ಲಂಚ ಕೇಳಿದ ಮಾದನಹಿಪ್ಪರಗಾ ಪೋಲಿಸ್ ಠಾಣೆಯ ಪೋಲಿಸ್ ಪೇದೆ ಲಕ್ಷ್ಮಣ್ ಕ್ಷೇತ್ರಿ ವಿರುದ್ಧ ದಾಖಲೆ ಸಹಿತ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೋಲಿ ಸಮಾಜ ರೈತರ ಬಳಗ ಜಿಲ್ಲಾ ಘಟಕದ ಅಧ್ಯಕ್ಷ ಅವ್ವಣ್ಣಗೌಡ ಪಾಟೀಲ್ ಅವರು ಇಲ್ಲಿ ಹೇಳಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಚ್ಚಲು ನೀರಿನ ಸಂಬಂಧ ಪಕ್ಕದ ಮನೆಯ ರೈತ ಮಹಿಳೆ ಶ್ರೀದೇವಿ ಗಂಡ ಬಸವರಾಜ್ ಗುಡ್ಡಡಗಿ ಅವರೊಂದಿಗೆ ಶ್ರೀದೇವಿ ಜಗಳವಾಡಿದ್ದರು. ನಂತರ ಗ್ರಾಮದ ಗಣ್ಯರು ಸೇರಿ ರಾಜೀ ಸಂಧಾನದ ಮೂಲಕ ಇಬ್ಬರಿಗೂ ಕೂಡಿಸಿದ್ದರು. ಆದಾಗ್ಯೂ, ಪೋಲಿಸ್ ಪೇದೆ ಲಕ್ಷ್ಮಣ್ ಕ್ಷೇತ್ರಿ ಶ್ರೀದೇವಿಗೆ ಹಾಗೂ ಆಕೆಯ ಪುತ್ರನಿಗೆ ಮೊಬೈಲ್ ಕರೆ ಮಾಡಿ ಮೊದಲು ೮೦೦೦ರೂ.ಗಳಿಗೆ ಬೇಡಿಕೆ ಇಟ್ಟ. ನಂತರ ಮೂರು ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟ. ಈ ಕುರಿತು ದಾಖಲೆ ಇದೆ. ಪೋಲಿಸ್ ಠಾಣೆಯ ಪಿಎಸ್‌ಐ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಹಣ ಕೊಡದೇ ಇರುವುದಕ್ಕೆ ಎದುರಿನ ಕಕ್ಷಿದಾರಳಿಗೆ ಒತ್ತಡ ಹೇರಿ ಪೋಲಿಸ್ ಠಾಣೆಯ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದು ರಾಜೀ ಸಂಧಾನದ ಪ್ರಕರಣವಿದ್ದರೂ ಸಹ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಅಮಾಯಕ ರೈತ ಬಡ ಕುಟುಂಬವು ಜೈಲಿಗೆ ಹೋಗುವಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ರಾಜೀ ಸಂಧಾನವಾಗಿದ್ದರಿಂದ ಕೂಡಲೇ ಪ್ರಕರಣವನ್ನು ಬೇಶರತ್ತಾಗಿ ರದ್ದುಪಡಿಸುವಂತೆ ಆಗ್ರಹಿಸಿದ ಅವರು, ಲಂಚ ಕೇಳಿದ ಪೋಲಿಸ್ ಪೇದೆಯನ್ನು ಅಮಾನತ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಲಂಚ ಕೇಳಿದ ಕುರಿತು ಖಚಿತ ಸಾಕ್ಷಾಧಾರಗಳು ಇರುವುದರಿಂದ ಪೋಲಿಸ್ ಪೇದೆಯ ವಿರುದ್ಧ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ಸಲ್ಲಿಸಲಾಗುವುದು ಹಾಗೂ ಪೋಲಿಸ್ ಹಿರಿಯ ಅಧಿಕಾರಿಗಳು ಕೂಡಲೇ ಆರೋಪಿ ಪೇದೆಯ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀದೇವಿ ಗಂಡ ಬಸವರಾಜ್ ಗುಡ್ಡಗಿ, ಮಡಿವಾಳಪ್ಪ ಹಣಮಂತಗೋಳ್, ಶರಣಬಸಪ್ಪಾ ಬಿ. ನಿಗ್ಗುಡಗಿ, ಬಕ್ಕಪ್ಪಾ ಕೋಳಿ, ಶರಣು ಕೋಳಿ, ಚಂದ್ರಶೇಖರ್ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here