ಭಾಲ್ಕಿ; ವಚನ ಜಾತ್ರೆ 2024 ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಉತ್ಸವ ಹಾಗೂ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ 25 ನೆಯ ಸ್ಮರಣೋತ್ಸವ ನಿಮಿತ್ಯ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ಬೀದರ ಅನುಭವಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳು ದೀಪ ಬೆಳಗಿಸಿ ಸಾಮೂಹಿಕ ವಚನ ಪಾರಾಯಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳು ಅಕ್ಕನ ಯೋಗಾಂಗ ತ್ರಿವಿಧಿಯನ್ನು ಹೇಳಿದರು.
ಸಾನಿಧ್ಯವಹಿಸಿದ ಪೂಜ್ಯರು ವಚನಗಳು ಬಸವಾದಿ ಶರಣರು ನೀಡಿರುವ ಅಮೂಲ್ಯ ಕೊಡುಗೆ. ವಚನಗಳ ಪಾರಾಯಣದಿಂದ ನಮ್ಮ ಜೀವನದಲ್ಲಿ ಬಸವತತ್ವದ ನಿಜಾಚರಣೆ ಬರುತ್ತದೆ. ಶರಣರು ಬೋಧಿಸಿದ ಮೌಲ್ಯಗಳನ್ನು ನಡೆಯಲ್ಲಿ ತರಲು ನಮಗೆ ಒಂದು ಆತ್ಮಬಲ ದೊರೆಯುತ್ತದೆ. ಶರಣರು ತಮ್ಮ ಪ್ರಾಣ ಬಲಿದಾನ ಮಾಡಿ ವಚನಗಳ ರಕ್ಷಣೆ ಮಾಡಿದರು. ನಾವು ಅವುಗಳನ್ನು ಪಾರಾಯಣ, ಅಧ್ಯಯನ, ಅನುಷ್ಠಾನ ಮಾಡುವ ಮೂಲಕ ಶರಣ ಮಾರ್ಗವನ್ನು ಅನುಸರಿಸಬೇಕು. ಅಂದಾಗ ನಮ್ಮ ಜೀವನ ಸುಖಿಯಾಗುತ್ತದೆ ಎಂದು ಆಶೀರ್ವಚನ ನೀಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವೇಶ್ವರಿ ತಾಯಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬೀದರ ಶರಣೆ ಸುವರ್ಣಾ ಚಿಮಕೋಡೆ, ಶರಣಪ್ಪ ಚಿಮಕೋಡೆ, ಸಂಗ್ರಾಮಪ್ಪ ಇಂಗಳೆ, ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ಪಾರ್ವತಿ ಡೋಣಗಾಪೂರೆ, ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಗಣಪತಿ ಬಾವುಗೆ, ಮಲ್ಲಮ್ಮ ನಾಗನಕೇರೆ ಉಪಸ್ತಿತರಿದ್ದರು. ಶರಣೆ ಪಾರ್ವತಿ ಧೂಮ್ಮನಸೂರೆ ಅವರಿಂದ ಧರ್ಮಗುರು ಬಸವಣ್ಣನವರ ಪೂಜೆ ನೆರವೇರಿಯಿತು. ಧೂಮ್ಮಸೂರೆ ದಂಪತಿಗಳಿಂದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಯಿತು.