ಕಲಬುರಗಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯಾಗಲಿದ್ದು ತಮಗೆ ಮತ ಹಾಕುವಂತೆ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.
ಕಲಬುರಗಿ ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ಕ್ಷೇತ್ರದ ಮತದಾರರು ಅಲ್ಲಮಪ್ರಭು ಪಾಟೀಲ ಅವರಿಗೆ ಬೆಂಬಲ ನೀಡಿದಂತೆ ತಮಗೂ ಆಶೀರ್ವಾದ ನೀಡಬೇಕು. ನಾನು ಗೆದ್ದರೆ ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಒಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ನಿಮ್ಮ ಮನೆಗೆ ತಲುಪಿಸಿದ್ದೇವೆ. ಕೆಲಸ ಮಾಡಿದ್ದೇವೆ ಅದಕ್ಕೆ ಕೂಲಿ ಕೊಡಿ ಎಂದು ವಿನಂತಿಸುತ್ತಿದ್ದೇವೆ ಎಂದರು.
ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಲಾಭ ಫಲಾನುಭವಿಗಳಿಗೆ ತಲುಪುತ್ತಿದೆ. ಅನ್ನ ಭಾಗ್ಯ ಯೋಜನೆ 21 ಲಕ್ಷ ಫಲಾನುಭವಿಗಳಿಗೆ ತಲುಪಿದ್ದರೆ, ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ ಸುಮಾರು 65 ಲಕ್ಷ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿಯಲ್ಲಿ ಯುವಕರಿಗೆ ಪ್ರತಿ ತಿಂಗಳು ರೂ 1500- ರೂ 3000 ವರೆಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಆರ್ಥಿಕ ಸಮಾನತೆ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಈ ಯೋಜನೆಗಳು ಸಹಕಾರಿಯಾಗಿವೆ. ಯಾವುದೇ ಜಾತಿ ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲರಿಗೂ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಗಳನ್ನು ಬಿಜೆಪಿಯವರು ಬಿಟ್ಟಿ ಭಾಗ್ಯ ಎನ್ನುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ‘ಮಹಿಳೆಯರು ದಾರಿ ತಪ್ಪುತ್ತಿದ್ದಾರೆ’ ಎನ್ನುವ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಮಕ್ಕಳಿಗೆ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ಕೊಡುವುದು, ಸಾಲ ತೀರಿಸುವುದನ್ನು ದಾರಿ ತಪ್ಪುವುದು ಎನ್ನಬೇಕಾ? ಈ ಸಲ ನೀವೆಲ್ಲ ಸೇರಿ ಬಿಜೆಪಿಯನ್ನು ದಾರಿ ತಪ್ಪಿಸಿ ಎಂದು ಸಭೆಯಲ್ಲಿದ್ದ ಮಹಿಳೆಯರಿಗೆ ಹೇಳಿದರು.
ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಬಿಜೆಪಿ ಭಾವನಾತ್ಮಕವಾಗಿ ಚುನಾವಣೆಗಳನ್ನು ಎದುರಿಸಿದೆ ಹೊರತು ಅಭಿವೃದ್ದಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲ್ಲ. ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸಂಸದ ಉಮೇಶ ಜಾಧವ ಬಾಯಿ ಬಿಟ್ಟಿಲ್ಲ ಎಂದು ಟೀಕಿಸಿದರು.
ಮುಖಂಡ ನೀಲಕಂಠರಾವ ಮೂಲಗೆ ಮಾತನಾಡಿ ಐದು ವರ್ಷದಲ್ಲಿ ಒಂದು ರೈಲು ಬಿಟ್ಟಿದ್ದೇ ಸಂಸದ ಉಮೇಶ ಜಾಧವ ಸಾಧನೆ. ಉಳಿದಂತೆ ಬರೀ ರೀಲೆ ಬಿಟ್ಟಿದ್ದಾರೆ ಎಂದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ರಾಜಗೋಪಾಲರೆಡ್ಡಿ, ಪವನ ವಳಕೇರಿ, ಚಂದ್ರಲಾಪರಮೇಶ್ವರಿ, ಮಜರ್ ಖಾನ್, ಪ್ರವೀಣ್ ಹರವಾಳ, ಫಾರೂಕ್‌ಸೇಟ್ ಸೇರಿದಂತೆ ಹಲವರಿದ್ದರು.