ಮನಕಿ ಬಾತ್ ಕೇಳಿಸಿಕೊಳ್ಳುವಲಿ ಟೈಮ್ ವೇಸ್ಟ್ ಮಾಡಿದ ಜಾಧವ್: ಸಚಿವ ಪ್ರಿಯಾಂಕ್ ಖರ್ಗೆ

0
107

ಕಲಬುರಗಿ: ಕೋಲಿ ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ವಾಪಸ್ ಕಳಿಸಿದ್ದು, ಲೋಕಸಭೆ ಚುನಾವಣೆಯ ಬಳಿಕ ಮತ್ತೊಮ್ಮೆ ಪ್ರಸ್ತಾವನೆಯನ್ನು ಖುದ್ದಾಗಿ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಸ್ತಾವನೆಯನ್ನು ವಾಪಸ್ ಕಳಿಸಿರುವ ವಾಸ್ತವಾಂಶವನ್ನು ಮರೆಮಾಚಿ ಸಂಸದ ಉಮೇಶ್ ಜಾಧವ ಈಗ ಖರ್ಗೆ ಹಾಗೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು‌.

Contact Your\'s Advertisement; 9902492681

ಕಳೆದ‌ ಲೋಕಸಭೆ ಚುನಾವಣೆ ವೇಳೆ ಕೋಲಿ ಕಬ್ಬಲಿಗ ಕುರುಬ ಸಮಾಜವನ್ನು ಎಸ್ ಟಿ ಸೇರಿಸುವುದಾಗಿ ಹೇಳಿದ್ದ ಕಲಬುರಗಿ ಲೋಕಸಭೆ ಚುನಾವಣೆ ಉಸ್ತುವಾರಿ ಎಂ ಎಲ್ ಸಿ ರವಿಕುಮಾರ ಹಾಗೂ ಜಾಧವ ಮತ ಪಡೆದಿದ್ದರು. ಆದರೆ ಈಗ ಎಲ್ಲರೂ ಮೌನವಾಗಿದ್ದಾರೆ. ‘ ಉಮೇಶ್ ಜಾಧವ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕೈಲಾಗದ ಮನುಷ್ಯ. ಈಗ ವಾಸ್ತವಾಂಶವನ್ನು ಜನರ ಮುಂದಿಟ್ಟು ಅವರ ಕೈ ಕಾಲು ಹಿಡಿದು ಕ್ಷಮೆ ಕೇಳಲಿ ‘ ಎಂದು ಆಗ್ರಹಿಸಿದರು.

ಮೋದಿ ವಿಶ್ವಗುರು ಅವರಿಗೆ ಉಕ್ರೇನ್ ರಷ್ಯಾ ಯುದ್ದ ನಿಲ್ಲಿಸುವ ಶಕ್ತಿ ಇದೆ. ಚೀನಾ, ಪಾಕಿಸ್ತಾನದವರು ಮೋದಿಯನ್ನು ಕಂಡರೆ ನಡುಗುತ್ತಾರೆ ಎಂದೆಲ್ಲ ಹೇಳಿಕೊಳ್ಳುವ ಬಿಜೆಪಿಗರಿಗೆ ಅವರಿಂದ ಈ ಕೆಲಸ ಮಾಡಿಸಲು ಯಾಕೆ ಆಗಲಿಲ್ಲ ? ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೆ ಎಲ್ಲ ಕೆಲಸ ಆಗುತ್ತವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ಜಾಧವ ಅವರಿಗೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಯಾಕೆ ಆಗಲಿಲ್ಲ ? ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ ಜಿಲ್ಲಾ ಮಟ್ಟದಲ್ಲಿ ಸುಳ್ಳು ಹೇಳುತ್ತಾರೆ ಎಂದು ಆಪಾದಿಸಿದರು.

ರಾಜ್ಯ ಸರ್ಕಾರವೇ ಪ್ರಸ್ತಾವನೆ ಕಳಿಸಿದ ಮೇಲೆ ಒಪ್ಪಿಗೆ ಇದೆ ಅಂತ ಅರ್ಥ. ಬಿಜೆಪಿ ಸರ್ಕಾರ 246 ಸಂಸದರನ್ನು ಸಸ್ಪೆಂಡ್ ಮಾಡಿ 57% ಬಿಲ್ ಗಳನ್ನು ಎರಡೇ ವಾರದಲ್ಲಿ ಯಾವುದೇ ಚರ್ಚೆ ನಡೆಸದೇ ಪಾಸ್ ಮಾಡಿದ್ದಾರೆ. ತ್ರಿವಳಿ ತಲಾಖ್, ಮಹಿಳಾ ಮೀಸಲಾತಿ ಬಿಲ್, ಜಮ್ಮು ಕಾಶ್ಮೀರ ರೀ ಅರ್ಗನೈಸೇಷನ್ ಬಿಲ್ ಗಳು ಹಾಗೆ ಪಾಸ್ ಆಗಿವೆ. ಅದರಂತೆ ಕೋಲಿ ಕಬ್ಬಲಿಗ ಹಾಗೂ ಕುರುಬ ಸಮುದಾಯಗಳನ್ನು ಎಸ್ ಟಿ ಪಟ್ಟಿಗೆ ಯಾಕೆ ಸೇರಿಸಲಿಲ್ಲ ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯ ಸಂದರ್ಭದಲ್ಲಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ರವಿಕುಮಾರ ಈಗ ಯಾಕೆ ಮಾತನಾಡುತ್ತಿಲ್ಲ ? ಈ ಸಲ ಮತ್ತೆ ಚುನಾವಣೆಗೆ ಬಂದರೆ ಅವರಿಗೆ ಜನರು ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಬಿಜೆಪಿ ಅವರನ್ನು ಬದಲಾಯಿಸಿದೆ. ನೀವು ರಕ್ತದಲ್ಲಿ ಬರೆದುಕೊಡುವುದು ಬೇಡ. ಕಾಗದಲ್ಲಿ ಪೆನ್ ನಲ್ಲಿ ಬರೆಸಿಬಿಡಿ ಸಾಕು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಾಯಕರ ವಿರುದ್ದ ದೂರು ಬಂದರೆ ತಕ್ಷಣ ನೋಟಿಸು ನೀಡುವ ಚುನಾವಣಾ ಆಯೋಗ, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಹಾಗೂ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನೀಡಿದ ದೂರಿನ ಮೇಲೆ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ಖುರ್ಚಿ ಖಾಲಿ ಮಾಡಬೇಕಾಗುತ್ತದೆ ಎನ್ನುವ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಚಿವರಿಗೆ ಸಹಜವಾಗಿ ಜವಾಬ್ದಾರಿಗಳಿವೆ. ಕಲಬುರಗಿ ಗೆ ನನಗೆ ಹಾಗೂ ಶರಣಪ್ರಕಾಶ ಪಾಟೀಲ ಹಾಗೆ ರಾಯಚೂರಿಗೆ ದರ್ಶನಾಪುರ ಹಾಗೂ ಬೋಸ್ ರಾಜ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಹಾಗಾಗಿ ನಾವು ಲೀಡ್ ಕೊಡಲೇಬೇಕು ಎಂದರು.

ಮಾಜಿ ಸಚಿವ ಮಾಲೀಕಯ್ಯ ಅವರು ಒಂದು ಕಾಲು ಬಿಜೆಪಿಯಿಂದ ಹೊರಗೆ ಇಟ್ಟಿದ್ದಾರೆ ನಿಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೀರಾ ಎಂದು ಕೇಳಿದಾಗ ಉತ್ತರಿಸಿದ ಅವರು ಗುತ್ತೇದಾರ ಈಗಾಗಲೇ ಎರಡೂ ಕಾಲು ಹೊರಗೆ ಇಟ್ಟಿದ್ದಾರೆ‌. ನನ್ನೊಂದಿಗೆ ವೈಯಕ್ತಿಕವಾಗಿ ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ನಮ್ಮ ವೈಯಕ್ತಿಕ ವಿಚಾರಗಳು ಏನೇ ಇರಲಿ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ. ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಮೋದಿ ಬಂದರೂ ಸ್ವಾಗತಿಸುತ್ತೇವೆ. ಜಾಧವ ಬಂದರೂ ಸ್ವಾಗತಿಸುತ್ತೇವೆ. ಬಿಜೆಪಿಯವರು ಕೇವಲ ಸಮಾಜ ಒಡೆಯುತ್ತಾರೆ ಎಂದು ಭಾವಿಸಿದ್ದೆವು. ಆದರೆ ಕುಟುಂಬವನ್ನೂ ಒಡೆಯುತ್ತಾರೆ ಎಂದು ಗುತ್ತೇದಾರ ಹೇಳಿದ್ದಾರೆ ಎಂದು ಕಿಚಾಯಿಸಿದರು.

ಶಿವಕುಮಾರ ಹೊನಗುಂಟಿ, ಈರಣ್ಣ ಝಳಕಿ, ಲಚ್ಚಪ್ಪ ಜಮಾದಾರ, ಡಾ.‌ಕಿರಣ್ ದೇಶಮುಖ, ಪ್ರವೀಣ್ ಹರವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here