ಕಲಬುರಗಿ; ಜಿಲ್ಲೆಯಲ್ಲಿ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಡಿ.ಎ.ಪಿ ರಸಗೊಬ್ಬರದ ಕೊರತೆಯಿಲ್ಲ. ರೈತರು ಆತಂಕ ಪಡದೇ ಬಿತ್ತನೆ ಕಾರ್ಯದಲ್ಲಿ ತೊಡಗಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 3 ದಿನಗಳಲ್ಲಿ ಕಲಬುರಗಿ ಜಿಲ್ಲೆಗೆ 4,000 ಮೆಟ್ರಿಕ್ ಟನ್ (80,000 ಬ್ಯಾಗಗಳು) ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಡಿ.ಎ.ಪಿ ರಸಗೊಬ್ಬರ ಜಿಲ್ಲೆಗೆ ಬರಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಡಿ.ಎ.ಪಿ ರಸಗೊಬ್ಬರ ಲಭ್ಯವಿದ್ದು, ಯಾವುದೇ ಕಾರಣಕ್ಕೂ ರೈತರು ಆತಂಕ ಪಡಬೇಕಿಲ್ಲ ಎಂದಿದ್ದಾರೆ.
ರೈತರು ಡಿ.ಎ.ಪಿ ರಸಗೊಬ್ಬರವನ್ನು ಅಧಿಕೃತ ರಸಗೊಬ್ಬರ ಮಾರಾಟಗಾರರಿಂದ ಮಾತ್ರ ಖರೀದಿ ಮಾಡಲು ಮತ್ತು ಖರೀದಿಸಿದ್ದಕ್ಕೆ ರಶೀದಿಯನ್ನು ಕಡ್ಡಾಯವಾಗಿ ಪಡೆಯಲು ತಿಳಿಸಿರುವ ಅವರು, ಡಿಎಪಿ ರಸಗೊಬ್ಬರಕ್ಕೆ ಸರ್ಕಾರ ನಿಗದಿಪಡಿಸಿದ ದರಗಳಿಗಿಂತ ಹೆಚ್ಚಿನ ದರಕ್ಕೆ ಯಾವುದೇ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಿದರೆ ರೈತರು ತಮ್ಮ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತರ ಸಂಪರ್ಕ ಕೇಂದ್ರಕ್ಕೆ ದೂರು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಲೈಸೆನ್ಸ್ ರದ್ದು: ರಸಗೊಬ್ಬರ ನಿಯಂತ್ರಣ ಆದೇಶ-1985ರ ನಿಯಮಾವಳಿಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟಿನ ಕೇತಕಿ ಸಂಗಮೇಶ್ವರ ಕೃಷಿ ಸೆಂಟರ್ ಮತ್ತು ವೀರಭದ್ರೇಶ್ವರ ಕೃಷಿ ಸೆಂಟರ್ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳ ಪರವಾನಿಗೆಯನ್ನು ಅಮಾನತ್ತು ಮಾಡಲಾಗಿದೆ ಎಂದು ಸಮದ್ ಪಟೇಲ್ ಅವರು ತಿಳಿಸಿದ್ದಾರೆ.