ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕು’ ಎಂದು ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಸಮುದಾಯದ ಮುಖಂಡ ಅಬ್ದುಲ್ ರಹೀಮಾನ್ ಪಟೇಲ್ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಮರು 50 ವರ್ಷಗಳಿಂದ ಜೇವರ್ಗಿಯಲ್ಲಿ ಧರ್ಮಸಿಂಗ್, ನಂತರ ಅವರ ಪುತ್ರ ಡಾ.ಅಜಯಸಿಂಗ್ ಅವರನ್ನು ಬೆಂಬಲಿಸುತ್ತಲೇ ಬಂದಿದೆ. ಇದೇ ರೀತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದೀಗ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಬೆಂಬಲಿಸಿದೆ. ಆದ್ದರಿಂದ ಸಮುದಾಯಕ್ಕೆ ಉತ್ತಮ ಸ್ಥಾನ ನೀಡಬೇಕು’ ಎಂದು ಕಾಂಗ್ರೆಸ್ ಹೈ ಕಮಾಂಡ್ ಅನ್ನು ಒತ್ತಾಯಿಸಿದರು.
‘ರಾಜ್ಯಮಟ್ಟದಲ್ಲೂ ಮುಸ್ಲಿಮರಿಗೆ ಅಧಿಕಾರ ನೀಡುವಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದವರನ್ನು ವಿವಿಧ ನಿಗಮ, ಆಯೋಗ, ಮಂಡಳಿಗಳಿಗೆ ನೇಮಕ ಮಾಡದೆ ಅನ್ಯಾಯ ಮಾಡಲಾಗುತ್ತಿದೆ. ಕೆಪಿಸಿಸಿಯಲ್ಲೂ ಮುಸ್ಲಿಮರಿಗೆ ಅವಕಾಶ ನೀಡಿಲ್ಲ’ ಎಂದು ದೂರಿದರು.
ಮುಖಂಡ ಅಮೀನ್ ಪಟೇಲ್ ಚಿಂಚೋಳಿ ಮಾತನಾಡಿ, ‘ಜೇವರ್ಗಿ ತಾಲ್ಲೂಕಿನಲ್ಲಿ ಏಳು ಜಿಲ್ಲಾ ಪಂಚಾಯಿತಿ, 17 ತಾಲ್ಲೂಕು ಪಂಚಾಯಿತಿಗಳಿವೆ. ಕೆಲವು ಕಡೆ ಮುಸ್ಲಿಂ ಸಮಾಜದ ಮತಗಳು ನಿರ್ಣಾಯಕವಾಗಿದ್ದು, ಈ ಬಾರಿ ಎರಡು ಜಿಲ್ಲಾ ಪಂಚಾಯಿತಿ, 6 ತಾಲ್ಲೂಕು ಪಂಚಾಯಿತಿಗೆ ಸ್ಪರ್ಧೆ ಮಾಡಲು ಮುಸ್ಲಿಂ ಸಮಾಜಕ್ಕೆ ಅವಕಾಶ ನೀಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಜಾಕ್‌ಸಾಬ್ ಮನಿಯಾರ, ಮಹಿಬೂಬ್‌ಸಾಬ್ ಮನಿಯಾರ, ಶೇಖಚಾಂದ ವಡಗೇರಾ, ಮೋಹಿಯುದ್ದೀನ್ ಇನಾಂದಾರ, ಇಬ್ರಾಹಿಂ ಶೇಖ ಮಿರ್ಚಿ ಇತರರಿದ್ದರು.