ಕಲಬುರಗಿ: ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಮೀಸಲಿಡುವಂತೆ ಸರ್ಕಾರ ನಿರ್ಣಯ ಕೈಗೊಂಡಿತ್ತು.ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರಕಾರದ ನಿರ್ಣಯ ಕೈ ಬಿಡಬಾರದು ಎಂದು ಕರವೇ(ಪ್ರವೀಣ ಶೆಟ್ಟಿ ಬಣದ) ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ ಗದ್ದುಗೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಅವರು, ಗುರುವಾರದಂದು ನಡೆದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಬೇಕಿತ್ತು. ಆದರೆ ಕೆಲವು ರಾಜಕಾರಣಿಗಳು ಮತ್ತು ಖಾಸಗಿ ಉದ್ಯಮಿಗಳ ಕುತಂತ್ರದಿಂದ ಸದರಿ ಮಸೂದೆ ಜಾರಿಯಾಗಲು ಬಿಡುತ್ತಿಲ್ಲ.
ಇದು ಸರಿಯಾದ ಬೆಳವಣಿಗೆಯಾಗಿರುವುದಿಲ್ಲ.ರಾಜ್ಯ ಸರ್ಕಾರ ಈ ಮೊದಲು ನಿರ್ಣಯ ಮಾಡಿದ ಮಸೂದೆಯನ್ನು ಯಾವುದೇ ಮುಲಾಜಿಲ್ಲದೆ ಜಾರಿಗೆ ತರಬೇಕು ಮತ್ತು ಈ ಕುರಿತು ನಿರ್ಣಯವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ವೇಳೆ ಸದರಿ ಮಸೂದೆಯನ್ನು ಕೂಡಲೇ ಜಾರಿಯಾಗದೇ ಇದ್ದರೆ ಕರವೇ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ, ಕಲ್ಯಾಣ ಕರ್ನಾಟಕ ಸಂಚಾಲಕ ಮನೋಹರ ಬೀರನೂರ, ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ಕಲ್ಯಾಣ ಕರ್ನಾಟಕ ಉಪಾಧ್ಯಕ್ಷ ಸಂತೋಷ ಚೌಧರಿ, ಜಿಲ್ಲಾ ಗೌರವಾಧ್ಯಕ್ಷ ಮಂಜು ಕುಸನೂರ, ಜಿಲ್ಲಾಧ್ಯಕ್ಷ ಮಾನಸಿಂಗ್ ಚವ್ಹಾಣ, ತಾಲೂಕೂ ಅಧ್ಯಕ್ಷ ವಿಜಯಕುಮಾರ ಅಂಕಲಗಿ ಇದ್ದರು.