- ಸಾಜಿದ್ ಅಲಿ ಕಲಬುರಗಿ
ಕಲಬುರಗಿ: ಇಲ್ಲಿನ ಕಾಳಗಿ ತಾಲ್ಲೂಕಿನ ರಾಯಕೋಡ್ ಗ್ರಾಮದ ಯುವಕನೊಬ್ಬ ಮೊಹರಂ ಪದಗಳು ಮತ್ತು ಸವಾಲ್ ಜವಾಬ್(ಪ್ರಶ್ನೊತ್ತರ) ಸ್ಪರ್ಧೆಗಳ ಮೂಲಕ 60 ಗ್ರಾಮ್ ಗೂ ಹೆಚ್ಚಿನ ಬೆಳ್ಳಿ ಖಡ್ಗಗಳು ಮತ್ತು ನಗದು ಬಹುಮಾನಗಳನ್ನು ತನ್ನದಾಗಿಸಿಕೊಂಡು ಕೀರ್ತಿ ಗಳಿಸಿದಲ್ಲದೆ, ಕೋಮು ಸೌಹಾರ್ದತೆಯ ಪರಂಪರೆಯನ್ನು ಉಳಿಸುವ ಕಡೆಗೆ ಹೆಜ್ಜೆ ಹಾಕುತ್ತಿದ್ದಾನೆ.
ರಾಯಕೋಡ್ ಗ್ರಾಮದ ನಿದಮ್ ಸಾಬ್ ಅವರ ಮಗ ಆಸೀಫ್ ಅಲಿ, ಮೊಹರಂ ಪದಗಳ ಯುವ ಹಾಡುಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ನೂರಾರು ವರ್ಷಗಳ ಹಿಂದಿನಿಂದಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊಹರಂ ಆಚರಣೆಯು ಗ್ರಾಮೀಣ ಭಾಗದಲ್ಲಿ ಹಿಂದೂ- ಮುಸ್ಲಿಮರ ಊರು ಹಬ್ಬವಾಗಿ, ಸೌಹಾರ್ದತೆಯ ಹಬ್ಬವಾಗಿ ಜನಪ್ರಿಯಗೊಂಡಿದೆ. ಈ ಹಬ್ಬವನ್ನು ಮತ್ತಷ್ಟು ಸೊಬಗು ಗೊಳಿಸುವಲ್ಲಿ ಅಸೀಫ್ ಅಲಿ ಅವರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಮೊಹರಂ ಹಬ್ಬದ ದಿನಗಳಲ್ಲಿ ಗ್ರಾಮೀಣ ಭಾಗದ ರೈತರು ಮತ್ತು ಕೂಲಿ ಕಾರ್ಮಿಕ ಹಿಂದು ಮುಸ್ಲಿಮರು ರಾತ್ರಿ ವೇಳೆಯಲ್ಲಿ ಮಸೀದಿಗಳಲ್ಲಿ ಕೋಮು ಸೌಹಾರ್ದತೆ, ಭಾತೃತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡಂತಹ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ಅದರಲ್ಲಿ ಅಸೀಫ್ ಅಲಿ ಅವರು ಸಿದ್ದ ಹಸ್ತರಾಗಿದ್ದಾರೆ.
ಆಸೀಫ್ ಅಲಿ ಕಳೆದ 17 ವರ್ಷಗಳಿಂದ ಇಂತಹ ಸಂಪ್ರದಾಯವನ್ನು ಜೀವಂತ ಉಳಿಸುವುದು ಬೆಳೆಸುವ ನಿಟ್ಟಿನಲ್ಲಿ 10-15 ಜನರ ಸದಸ್ಯರ ತಂಡದೊಂದಿಗೆ ಮೊಹರಂ ತಿಂಗಳಲ್ಲಿ ಇಲ್ಲಿಯವರೆಗೆ ಸುಮಾರು100 ಕಾರ್ಯಕ್ರಮಗಳನ್ನು ಪ್ರದರ್ಶನ ನೀಡುವ ಮೂಲಕ ಜಿಲ್ಲೆಯಲ್ಲಿ ಈ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಗ್ರಾಮೀಣ ಪ್ರತಿಭೆ ಮತ್ತು ಸ್ಥಳೀಯ ಸೊಗಡನ್ನು ಬೆರೆಸಿ ಹಾಡುಗಳು ಹಾಡುವ ಮೂಲಕ ಮೊಹರಂ ಹಬ್ಬಕ್ಕೆ ಕಳೆಯನ್ನು ತಂದು ಕುಡುತ್ತಿರುವ ಆಸೀಫ್ ಅಲಿ. ತಾವೇ 40ಕ್ಕೂ ಹೆಚ್ಚು ಮೊಹರಂ ಪದಗಳ ಹಾಡುಗಳನ್ನು ರಚಿಸಿದ್ದಾರೆ. ಈ ಹಾಡುಗಳ ಪುಸ್ತಕವನ್ನು ಹೊರತರುವ ಕನಸು ಹೊಂದಿರುವುದಾಗಿ ವಾರ್ತಾ ಭಾರತಿಗೆ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಇಂತಹ ಪ್ರತಿಭೆಯನ್ನು ಮತ್ತು ಕಲೆಯನ್ನು ಇನ್ನಷ್ಟು ಪ್ರೋತ್ಸಾಹಿಸುವ ಕೆಲಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಹಾಗೂ ರಂಗಾಯಣದಿಂದ ಆಗಬೇಕಿದೆ.
ಕಲ್ಯಾಣ ಕರ್ನಾಟಕ ಭಾಗದ ಹುಟ್ಟಿಕೊಳ್ಳುವ ಕವಿಗಳು, ಕಲಾವಿದರೆಲ್ಲರೂ ಭಾವೈಕ್ಯತೆ ಮತ್ತು ಸೌಹಾರ್ದತೆಯನ್ನು ಸಾರುವಂತಹವರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಮೊಹರಂ ಹಬ್ಬದ ಆಚರಿಸುವಂತಹ ವಿವಿಧ ಸಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಯುವ ಕಲಾವಿದ ಆಸೀಫ್ ಅಲಿ ಮೊಹರಂ ಪದಗಳು ಉಳಿಸಿ ಬೆಳಸುವ ಕೆಲಸ ಮಾಡುತ್ತಿರುವುದು ಪ್ರಶಂಸೆನಿಯ. ಗ್ರಾಮೀಣ ಭಾಗದ ಇಂತಹ ಕಲಾವಿದರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಗೆ ಮಾಹಿತಿ ಸಿಕ್ಕಿದರೆ ಪರಿಷತ್ ಅವರಿಗೆ ಪ್ರೋತ್ಸಾಹಿಸಿ ಉತ್ತೇಜಿಸುವ ಕೆಲಸ ಮಾಡುತ್ತದೆ. – ವಿಜಯಕುಮಾರ್ ತೇಗಲತೀಪ್ಪಿ, ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ.
ಮೊಹರಂ ಹಬ್ಬದ ಹತ್ತು ದಿನಗಳಲ್ಲಿ ಹಲವು ಊರುಗಳಿಗೆ ತಿರುಗಿ ಕಾರ್ಯಗಳನ್ನು ನೀಡುತ ಬಂದಿದ್ದೇನೆ. ನಾವು ಹೊದ ಕಡೆಗಳಲ್ಲಿ ಜನರು ನಮ್ಮ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೀರಿಯರು, ಶರಣರು , ಸೂಫಿಗಳು ನೀಡಿರುವ ಸಂದೇಶಗಳು ಮತ್ತು ಅವರು ಹಾಕಿರುವ ದಾರಿಯಲ್ಲಿ ಸೌಹಾರ್ದತೆಯ ಸಮಾಜ ನಿರ್ಮಾಣ ಕಟ್ಟುವ ಮೊಹರಂ ಹಾಡುಗಳ ಮೂಲಕ ಜನರಿಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನವಾಗಿದೆ. – ಆಸೀಫ್ ಅಲಿ ರಾಯಕೋಡ್, ಯುವ ಮೊಹರಂ ಪದಗಳ ಹಾಡುಗಾರ.