ಸೇಡಂನಲ್ಲಿ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಉದ್ಘಾಟನೆ

0
47

ಕಲಬುರಗಿ: ಜಿಲ್ಲೆಯ ಹೊಸ ತಾಲೂಕಿನಲ್ಲಿ ನೂತನ‌ ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಹೇಳಿದರು

ಶನಿವಾರ ನ್ಯಾಯಾಂಗ ಇಲಾಖೆ, ಲೊಕೋಪಯೋಗಿ ಇಲಾಖೆ ಹಾಗೂ ತಾಲೂಕಾ ನ್ಯಾಯಾವಾದಿಗಳ‌ ಸಂಘದ ಸಂಯುಕ್ತಾಶ್ರಯದಲ್ಲಿ ಸೇಡಂ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ ನೂತನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಬೇಕಾದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪಾತ್ರ ಹೆಚ್ಚಿದೆ. ಈ ಮೂರು ಅಂಗಗಳು ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಿದಲ್ಲಿ ಉತ್ತಮ ಸಮಾಜ ಕಟ್ಟಲು ಮತ್ತು ಜನರು ಸ್ವಾಭಿಮಾನದ ಬದುಕು ಸಾಗಿಸಲು ಸಾಧ್ಯವಾಗಿದ್ದು, ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಬೇಕಿದೆ ಎಂದರು.

ಮನೆ ಬಾಗಿಲಿಗೆ ನ್ಯಾಯ: ಕರ್ನಾಟಕ ರಾಜ್ಯ ಉಚ್ಛ‌ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕಲಬುರಗಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ಕೆ.ನಟರಾಜನ್ ಮಾತನಾಡಿ, ಜನರ ಮನೆ ಬಾಗಿಲಿಗೆ ನ್ಯಾಯ ಪರಿಕಲ್ಪನೆಯಡಿ ಇಂದಿಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಿಸಿ, ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ನ್ಯಾಯ ಒದಗಿಸುವ ಕೆಲಸ ನ್ಯಾಯವಾದಿಗಳು ಮಾಡಬೇಕು ಎಂದರು.

ಸೇಡಂ 4ನೇ ಹೆಚ್ಚುವರಿ ನ್ಯಾಯಾಲಯದಲ್ಲಿ 1,058 ಕೇಸ್ ಇದ್ದು, ತ್ವರಿತ ವಿಲೇವಾರಿಗೆ ನೂತನ ನ್ಯಾಯಾಲಯ ಸಹಾಯವಾಗಲಿದೆ. ಸೇಡಂ, ಚಿಂಚೋಳಿ, ಚಿತ್ತಾಪುರ ಜನರು ನ್ಯಾಯಕ್ಕಾಗಿ ಕಲಬುರಗಿಗೆ ಬರುವುದು ತಪ್ಪಿದ್ದು, ಇದು ಕಕ್ಷಿದಾರರಿಗೆ ತುಂಬಾ ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು, ನ್ಯಾಯಾಲಯ ಅಂದರೆ ನೆನಪಾಗುವುದೆ ವಿಳಂಬ ಪ್ರಕ್ರಿಯೆ. ಒಮ್ಮೆ ಪ್ರಕರಣ ದಾಖಲಾದರೆ ವರ್ಷಗಟ್ಟಲೆ ನಡೆಯುತ್ತದೆ. ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸುವ ಮೂಲಕ ಇದನ್ನು ಹೋಗಲಾಡಿಸುವ ಜವಾಬ್ದಾರಿ ನ್ಯಾಯಾವಾದಿಗಳ ಮೇಲಿದೆ ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಅಶೋಕ ಎಸ್.‌ಕಿಣಗಿ ಅವರು ಕಾರ್ಯಕ್ರಮದ ತಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸದ ರಾಧಾಕೃಷ್ಞ ದೊಡ್ಡಮನಿ ಸಹ ಮಾತನಾಡಿದರು.

ಕಾರ್ಯಕ್ರಮದಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕರಣ ಗುಜ್ಜರ್, ಹಿರಿಯ ಸಿವಿಲ್‌ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ, ಸಿವಿಲ್ ನ್ಯಾಯಾಧೀಶೆ ಲಲಿತಾ ಕುದರಿಮತಿ, ತಾಲೂಕಾ ನ್ಯಾಯಾವಾದಿಗಳ‌ ಸಂಘದ ಪ್ರಧಾನ ಕಾರ್ಯದರ್ಶಿ ವಸಂತಕುಮಾರ ಪೂಜಾರಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ದಶ್ವಂತ ಗಾಜರೆ ಇದ್ದರು. ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ನಾಗಶ್ರೀ ಅವರು ಸ್ವಾಗತಿಸಿದರು. ತಾಲೂಕಾ ನ್ಯಾಯಾವಾದಿಗಳ‌ ಸಂಘದ ಅಧ್ಯಕ್ಷ ಮಲ್ಲಣಗೌಡ ಎಸ್. ಬೆನೆಕನಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here