ಕಲಬುರಗಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಮಳಖೇಡ್ ಕೋಟೆಯ ಹೊರಭಾಗದ ಕಟ್ಟಡ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದ ಶಾಸಕರಾಗಿರುವ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಅಧಿಕಾರಿಗಳೊಂದಿಗೆ ಕೋಟೆಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಿಂದೆ ತಮ್ಮ ಸರ್ಕಾರದ ಅವಧಿಯಲ್ಲಿಯೇ ಕೋಟೆ ಸಂರಕ್ಷಣೆಗೆ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅದರ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ಪ್ರಗತಿ ವಿವರವನ್ನು ಅಧಿಕಾರಿಗಳಿಂದ ಪಡೆದು ಅದಕ್ಕೆ ವೇಗ ನೀಡಲಾಗುವುದು ಎಂದರು.
ಕಳೆದ ಎರಡ್ಮೂರು ದಿನದಿಂದ ಸತತ ಮಳೆಯಾಗುತ್ತಿರುವ ಕಾರಣ ಸೇಡಂ ತಾಲೂಕಿನ ವಿವಿಧೆಡೆ ರಸ್ತೆ, ಸೇತುವೆ, ಮನೆ ಹಾನಿಗಳಾಗಿವೆ. ಕೂಡಲೆ ಅಧಿಕಾರಿಗಳಿಗೆ ಸರ್ವೆ ಮಾಡಲು ಸೂಚಿಸಿದ್ದು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗುವುದು. ಇನ್ನು ಬೆಳೆ ಹಾನಿಗೆ ಸಂಬಂಧಿಸಿದಂತೆ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳಿಂದ ಜಂಟಿ ಸರ್ವೇ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೋಟೆ ಬಳಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಕೂಡಲೆ ಪರಿಹಾರ ಒದಗಿಸಲಾಗುವುದು ಎಂದರು.
ಇದಕ್ಕೂ ಮುನ್ನ ಸಚಿವರು ಕಾಗಿಣಾ ನದಿಗೆ ಅಡ್ಡಲಾಗಿರುವ ಇತ್ತೀಚೆಗೆ ಲೋಕಾರ್ಪಣೆಗೊಂಡ ಮಳಖೇಡ್ ಸೇತುವೆ ಹಾಗೂ ಪಕ್ಕದಲ್ಲಿರುವ ಉತ್ತರಾದಿ ಮಠ ಬೃಂದಾವನ ವೀಕ್ಷಿಸಿದರು. ಸೇತುವೆ ಬಳಿ ಮೀನುಗಾರಿಕೆ ಮಾಡಿಕೊಂಡ ಮೀನುಗಾರರನ್ನು ಪ್ರವಾಹ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಮೀನುಗಾರರನ್ನು ಸಹ ಸಚಿವರು ಭೇಟಿಯಾಗಿ ಪ್ರವಾಹ ಹಿನ್ನೆಲೆಯಲ್ಲಿ ಮೀನುಗಾರಿಕೆ ಮಾಡದಂತೆ ತಿಳಿಸಿ ಅಲೆಮಾರಿಯವರಿಗೆ 2 ಎಕರೆ ಜಮೀನು ಗುರುತಿಸುವ ಕಾರ್ಯ ನಡೆದಿದೆ ಎಂದರು.
ಸಂಸದ ರಾಧಾಕೃಷ್ಣ ದೊಡ್ಡಮನಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ತಾಲೂಕಾ ಪಂಚಾಯತ್ ಇ.ಓ ಸೇರಿದಂತೆ ಅನೇಕ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇದ್ದರು.