ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬೀಳ್ಕೊಡುಗೆ ಸಮಾರಂಭ

0
28

ಕಲಬುರಗಿ : ವೈಚಾರಿಕತೆಯ ನೆಲೆಯಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ಮೌಲ್ಯ ಮತ್ತು ಮಹತ್ವವಿದೆ. ವಿದ್ಯಾರ್ಥಿಗಳು ಕನ್ನಡ ಭಾಷಾಭಿರುಚಿ ಬೆಳೆಸಿಕೊಂಡರೆ ಸಾಹಿತ್ಯ ಬರವಣಿಗೆಗೆ ಪ್ರೇರಣೆ ಸಿಗುತ್ತದೆ. ಯುಜಿಸಿ ಹೇಳಿರುವಂತೆ ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಬೋದಿಸುವ ಜ್ಞಾನವನ್ನು ರೂಪಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್.ಎನ್. ಮೂಲಗಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕನ್ನಡ ಸಾಹಿತ್ಯ ಸಂಘದ ಕಾರ್ಯ ಚಟುವಟಿಕೆಗಳ ಮುಕ್ತಾಯ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನಿರಂತರ ಪರಿಶ್ರಮದಿಂದ ಮಾತ್ರ ಅತ್ಯುತ್ತಮ ಶಿಕ್ಷಕನಾಗಲು ಸಾಧ್ಯವಿದೆ. ವ್ಯವಸ್ಥಿತವಾದ ಅಧ್ಯಯನ ಮತ್ತು ಸಂಶೋಧನಾ ಮನೋಭಾವವಿರುವ ಯುವಕರು ಸಾಧನೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಕೆಲವೇ ಕೆಲವರು ಸಾಧಕರಾಗುತ್ತಾರೆ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್. ಟಿ. ಪೋತೆಯವರಂತಹ ಅಪ್ರತಿಮ ಸಾಹಿತಿ, ಕವಿ, ಕಾದಂಬರಿಕಾರ ಕನ್ನಡ ಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ ಎಂದರು.

ವಿಭಾಗದಲ್ಲಿ ದೇಶದ ಮತ್ತು ರಾಜ್ಯದ ಸಾಹಿತ್ಯ ಕ್ಷೇತ್ರದ ಎಲ್ಲಾ ದಿಗ್ಗಜರ ಚಿತ್ರಗಳು ಮತ್ತು ಕೃತಿಗಳಿಗೆ ಸೂಕ್ತ ಗ್ರಂಥಾಲಯ ವ್ಯವಸ್ಥೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಶೋಧನೆಗೆ ಪ್ರೇರಣೆ ನೀಡಿದಂತಾಗಿದೆ ಎಂದ ಅವರು ದೇಶವನ್ನು ಕಟ್ಟುವುದು ಎಷ್ಟು ಮುಖ್ಯವೋ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವುದು ಅಷ್ಟೇ ಮುಖ್ಯ. ಅತ್ಯುತ್ತಮ ಗುರುವಿದ್ದರೆ ವ್ಯಕ್ತಿಯ ವ್ಯಕ್ತಿತ್ವ ಬೆಳೆಯುತ್ತದೆ. ಸಾಧಕನಿಗೆ ನಮ್ರವಾದ ಮನಸ್ಸು, ಮೃದು ಸ್ವಭಾವ ಮತ್ತು ಸತತ ಪ್ರಯತ್ನ ಮುಖ್ಯಸೂತ್ರಗಳಾಗಿವೆ ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ರಾಂತ ಕುಲಪತಿ ಪ್ರೊ. ಹಾ.ಮಾ. ನಾಯಕರ ಜನ್ಮದಿನವಾಗಿರುವ ಇಂದು ಕಲ್ಯಾಣ ಕರ್ನಾಟಕದ ಲೇಖಕರಿಗೆ ಉತ್ತೇಜನ ನೀಡಲು 40 ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಬಹುಮಾನ ನೀಡಲು ಆರಂಭಿಸಿದರು. ಜೊತೆಗೆ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂಬುದನ್ನು ಸ್ಮರಿಸಿಕೊಂಡರು.

ಕನ್ನಡ ಅಧ್ಯಯನ ಸಂಸ್ಥೆ ಸಾಹಿತ್ಯದ ವಿವಿಧ ಪ್ರಕಾರಗಳ ಅಧ್ಯಯನಕ್ಕೆ ಒತ್ತು ನೀಡಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಕಲಿಕೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ಹಾ.ಮಾ. ನಾಯಕರ ಕನಸಿನಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಜ್ಞಾನ ಸಂಪಾದನೆ ಮತ್ತು ಸಾಹಿತ್ಯ ಕ್ಷೇತ್ರದ ವಿಸ್ತರಣೆ ಯಾವುದೇ ಜಾತಿಗೆ ಸೀಮಿತವಿಲ್ಲ. ಪ್ರಸ್ತುತ ಅಂತರಶಿಸ್ತೀಯ ಅಧ್ಯಯನಕ್ಕೆ ಹೆಚ್ಚು ಮಹತ್ವ ದೊರೆಯುತ್ತಿದೆ.

ಸಾಹಿತ್ಯವನ್ನು ವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ಮತ್ತು ಸಂಶೋಧನೆ ಮಾಡಲು ಸಾಧ್ಯವಾಗುತ್ತಿದೆ. ಸಮಾಜ, ಪರಿಸರ, ಸಾಹಿತ್ಯ ಮತ್ತು ಕಲೆಗಳು ವೈಜ್ಞಾನಿಕ ಜ್ಞಾನ ಸ್ತರಗಳು ವಿಸ್ತಾರಗೊಂಡಿವೆ. ಆದರಿಂದ ಸಾಹಿತ್ಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಕಾಲೀನ ಜ್ಞಾನ ಹಾಗೂ ವಿಭಿನ್ನ ಚಿಂತನೆಗಳ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಒಲವು ಮತ್ತು ಓದಿನಿಂದ ಉತ್ತಮ ನಿರೂಪಣೆ ಮತ್ತು ಸಂವಹನ ಕೌಶಲದಿಂದ ವಿವಿಧ ವೃತ್ತಿ ಅವಕಾಶಗಳನ್ನು ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ, ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಅಧ್ಯಾಪಕ ಡಾ. ಎಂ.ಬಿ. ಕಟ್ಟಿ, ಡಾ. ಹನುಮಂತ ಮೇಲಕೇರಿ, ಡಾ. ಶಿವಶರಣಪ್ಪ ಕೂಡ್ಲಿ ಹಾಗೂ ಪತ್ರಿಕೋದ್ಯಮ ವಿಭಾಗದ ಡಾ. ಕೆ. ಎಂ. ಕುಮಾರಸ್ವಾಮಿ ಉಪಸ್ಥಿತರಿದ್ದರು.

ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಣವೀರಗೌಡ ಬಿರಾದಾರ, ಪರಮಾನಂದ, ಮಾರುತಿ ಕತಾರ್, ಭೀಮರಾಯ, ಅಂಬಣ್ಣ, ಭೀಮಾಶಂಕರ್ ಝಳಕಿ ಹಾಗೂ ರಾಜಶ್ರೀ ಅನಿಸಿಕೆ ಹಂಚಿಕೊಂಡರು. ರಾಜಶ್ರೀ ಸ್ವಾಗತಿಸಿದರು. ರೇಣುಕಾ ಪ್ರಾರ್ಥಿಸಿದರು. ಅಭಿಲಾಶ ಮತ್ತು ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು. ಪಂಡಿತ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here