ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೀಚಿಗೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ನಡೆಸಿ ಹತ್ತು ಹಲವು ಯೋಜನೆಗಳನ್ನು ಅನುಮೋದನೆ ನೀಡಿರುವುದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ರಾಜ್ಯ ಸರಕಾರ 545 ಪೋಲಿಸ್ ಸಬ್ ಇನ್ಸಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ರಾಜ್ಯ ಡೈರೆಕ್ಟರ್ ಜನರಲ್ ಆಫ್ ಇನ್ಸಪೆಕ್ಟರ್ ರವರು 371ಜೆ ಮೀಸಲಾತಿ ಕೋರಿರುವ ಅಭ್ಯರ್ಥಿಗಳನ್ನು ದಿನಾಂಕ 06-06-2020ರ ಸುತ್ತೋಲೆಯಂತೆ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಸರಕಾರಕ್ಕೆ ಪತ್ರ ಬರೆದಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.
ಪ್ರಸ್ತುತ ಸರಕಾರವು ದಿನಾಂಕ 01-02-2023ರ ಸುತ್ತೋಲೆಯಂತೆ ನೇಮಕಾತಿ ಪ್ರಾಧಿಕಾರಗಳು ಸೂಚನೆಗಳನ್ನು ಪಾಲಿಸಬೇಕಿದ್ದು, ಅದಾಗ್ಯೂ ಮುಖ್ಯಮಂತ್ರಿಗಳ ದಾರಿತಪ್ಪಿಸಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡುವ ಹುನ್ನಾರ ನಡೆಸಿರುವುದು ಅತ್ಯಂತ ಖಂಡನೀಯವಾದ್ದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೇಮಕಾತಿಯಲ್ಲಿ ಮಾತ್ರವಲ್ಲ, ಅಧಿಸೂಚನೆಯಲ್ಲೂ ನಮ್ಮ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಟ್ರ್ಯೂಬನಲ್, ಸಲಹಾ ಸಮಿತಿ ರಚಿಸಬೇಕು. -ಬಸವರಾಜ ದೇಶಮುಖ, ಗೌರವಾಧ್ಯಕ್ಷರು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ಕಲಬುರಗಿ
ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾಗಿದ್ದ ಗೋವಿಂದ ಕಾರಜೋಳ ರವರು 06-06-2020ರ ಸುತ್ತೋಲೆಯನ್ನು ಹೊರಡಿಸಿದ್ದು, ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಮಿಕ್ಕುಳಿದ ವೃಂದಕ್ಕೆ ಅರ್ಜಿ ಸಲ್ಲಿಸುತ್ತೀರಾ? ಅಥವಾ ಸ್ಥಳೀಯ ವೃಂದಕ್ಕೆ ಮಾತ್ರ ಅರ್ಜಿ ಸಲ್ಲಿಸುತ್ತೀರಾ? ಎಂದು ಹಲವು ಪ್ರಶ್ನೆ ಮಾಡಲಾಗಿದೆ. ಒಂದು ವೇಳೆ ಮಿಕ್ಕುಳಿದ ವೃಂದ ಆಯ್ಕೆ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಸೇವೆಯಲ್ಲಿ 371ಜೆ ಮೀಸಲಾತಿಯ ಯಾವುದೇ ಸೌಲಭ್ಯ ಸಿಗುವದಿಲ್ಲ ಎಂದು ಸೂಚಿಸಲಾಗಿದೆ, ಅದನ್ನು ತೀವ್ರ ವಿರೋಧದ ಕಾರಣದಿಂದ ನಂತರ ಬಂದ ಶ್ರೀರಾಮುಲು ಅವರು ದಿನಾಂಕ 01-02-2023 ರಂದು ಹೊಸದಾಗಿ ಸುತ್ತೋಲೆಯನ್ನು ಹೊರಡಿಸಿದ್ದು, ಅದರಂತೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಮೊದಲಿಗೆ ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಪರಿಗಣಿಸಬೇಕು ಮತ್ತು ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.
ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 371ನೇ(ಜೆ) ಕಲಂ ಸಂಪುಟ ಉಪ ಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ ಖರ್ಗೆಯವರು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಲು ಜನವರಿ 2024 ರಂದು ಸಭೆ ನಡೆಸಿ ದಿನಾಂಕ : 01.02.2023 ರ ಸುತ್ತೋಲೆ ಜಾರಿಗೆ ತಂದರು ಎಂದರು.
ಪ್ರಸ್ತುತ 01-02-2023ರ ಸುತ್ತೋಲೆಯೇ ಚಾಲ್ತಿಯಲ್ಲಿದ್ದರೂ ಗೃಹ ಇಲಾಖೆಯವರು ಕಲ್ಯಾಣ ಕರ್ನಾಟಕಕ್ಕೆ ವಂಚಿಸಲು ಶಡ್ಯಂತ್ರ ಮಾಡಿರುವ ಬಗ್ಗೆ ನಮ್ಮ ಸಚಿವರುಗಳ ಗಮನಕ್ಕೆ ತಂದಾಗ ಸೂಕ್ತ ಸಮಯದಲ್ಲಿ ಸಚಿವರಾದ ಪ್ರಿಯಾಂಕ ಖರ್ಗೆಯವರು ಹಾಗೂ ಡಾ.ಶರಣ ಪ್ರಕಾಶ ಪಾಟೀಲ್ ರವರು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಆಗಿರುವ ಪ್ರಮಾದವನ್ನು ಸರಿಪಡಿಸಿರುವುದು ಸ್ವಾಗತಾರ್ಹವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ 371ಜೆ ನೇಮಕಾತಿಗಳಿಗೆ ಈಗಿರುವ ಎಲ್ಲಾ ಗೊಂದಲಗಳ ಸುತ್ತೋಲೆಗಳನ್ನು ವಾಪಸ್ ಪಡೆದು ಸಚಿವ ಸಂಪುಟ ಉಪಸಮಿತಿ ತಕ್ಷಣ ಮೆರಿಟ್ & ರೋಸ್ಟರ್ ನೀತಿಯಂತೆ ಆಯ್ಕೆಪಟ್ಟಿ ತಯಾರಿಸಲು ಅನುಕೂಲವಾಗುವಂತೆ 01-02-2023ರ ಸುತ್ತೋಲೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಹೊಸದಾಗಿ ಸುತ್ತೋಲೆ ಹೊರಡಿಸಿ ಶಾಶ್ವತವಾಗಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಸಂಪುಟ ಉಪಸಮಿತಿ ದಿಟ್ಟ ಕ್ರಮ ಕೈಗೊಳ್ಳಲು ಹೋರಾಟ ಸಮಿತಿ ಒತ್ತಾಯಿಸಿದರು.
ಅದಾಗ್ಯೂ ಈ ರೀತಿಯ ಅನ್ಯಾಯವನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಜನತೆ ಯಾವುದೇ ಕಾರಣಕ್ಕೂ ಒಪ್ಪುವದಿಲ್ಲ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲ್ಯಾಣದ ಜನಮಾನಸದ ವತಿಯಿಂದ ನಮ್ಮ ಹಕ್ಕಿನ ವಿಷಯಗಳಿಗೆ ಸಂಬಂಧಿಸಿ ಜಾಗೃತಿ ವಹಿಸುತ್ತದೆ. ಒಂದು ವೇಳೆ ಸರಕಾರ ನಮ್ಮ ಹಕ್ಕಿನ ನೇಮಕಾತಿ, ಮುಂಬಡ್ತಿ ಮತ್ತು ಶೈಕ್ಷಣಿಕ ಪ್ರವೇಶಗಳಲ್ಲಿ ಪದೇ ಪದೇ ದ್ವಂದ್ವತೆ ಅನುಸರಿಸಿದರೆ ಸರಕಾರದ ವಿರುದ್ಧ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಕಡೆ ತೀವ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಪ್ರೊ.ಬಸವರಾಜ ಕುಮನೂರು,ಡಾ.ಮಾಜಿದ ದಾಗಿ, ಡಾ. ಬಸವರಾಜ ಗುಲಶೆಟ್ಟಿ ಇದ್ದರು.