ಕಲಬುರಗಿ; ತವರಿನ ಸನ್ಮಾನಿತರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸನ್ಮಾನದತ್ತ ಕರೆದೊಯಲಿ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ನಿರ್ದೇಶಕರಾದ ಪ್ರೊ. ಎಂ ಎಸ್ ಪಾಸೊಡಿ ಹೇಳಿದರು.
ತಾಲೂಕಿನ ತಾಜ ಸುಲ್ತಾನಪುರ ಗ್ರಾಮದ ಹೊಸಮಠ ಹಾಗೂ ಗೆಳೆಯರ ಬಳಗದ ವತಿಯಿಂದ ಸಿದ್ದರಾಮಯ್ಯ ಹೊಸಮಠ ಹಾಗೂ ರಾಚಮ್ಮ ಹೊಸಮಠ ಸ್ಮರಣೋತ್ಸವ ನಿಮಿತ್ಯ ತವರಿನ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಅನುಮಾನ ಹಾಗೂ ಅವಮಾನ ಮೆಟ್ಟಿಲುಗಳು ಆತ್ಮವಿಶ್ವಾಸದಿಂದ ಎದುರಿಸಿದಾಗ ಸನ್ಮಾನ ನಮ್ಮದಾಗುತ್ತದೆ. ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಜನರನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಸಮಾಜ ಸೇವೆಗೈಯುವ ಮನಸುಗಳು ಹೆಚ್ಚಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರು, ಗ್ರಾಮದ ಹಿತ ಚಿಂತಕರಾದ ರೇವಣಸಿದ್ದಯ್ಯ ಹೊಸಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮದ ಹಿರಿಯ ಮೂತ್ಸದ್ದಿಗಳು ಸದ್ದಿಲ್ಲದೆ ಯಾವುದೇ ಪ್ರಚಾರ ಬಯಸದೆ ಹಲವಾರು ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಅವರೆಲ್ಲರೂ ಸಮಾಜದ ಆಸ್ತಿ ಅವರನ್ನು ಜೋಪಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತವರು ಪೂಜಿಸಬೇಕು ಎನ್ನುವಂತೆ ತಾಯಿ ತಂದೆಯನ್ನು ಒಳ್ಳೆಯ ರೀತಿಯಾಗಿ ನೋಡಿಕೊಳ್ಳಬೇಕು, ಗ್ರಾಮದ ಪ್ರತಿಭೆಗಳಿಗೆ ಸಮಾಜಕ್ಕೆ ಪರಿಚಯಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಅವರಾದ ಪೂಜ್ಯರಾದ ಮರುಳಸಿದ್ದ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾದ ಚಿರಂಜೀವಿ ದೊಡ್ಡಪ್ಪ ಅಪ್ಪ, ಶ್ರೀನಿವಾಸ ಸರಡಗಿ ಶ್ರೀಮಠದ ಉತ್ತರಾಧಿಕಾರಿಯಾದ ಚಿರಂಜೀವಿ ಚಿನ್ನದ ವೀರೇಶ್ವರ ದೇವರು ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ.ಅಲ್ಲಮಪ್ರಭು ದೇಶಮುಖ, ಬೀದರನ ಬಾಲ ಪ್ರತಿಭೆ ಕುಮಾರಿ ಶಿವಾನಿ ಶಿವು ಸ್ವಾಮಿ, ಚಂದ್ರಶೇಖರ ಜಿ ಪಾಟೀಲ ಆಗಮಿಸಿದರು. ಅಫಜಲಪುರ ತಾಲೂಕ ಉಪ ತಹಸಿಲ್ದಾರರಾದ ವೀರಯ್ಯ ಹೊಸಮಠ, ನಾಗಭೂಷಣ ಹೊಸಮಠ ಉಪಸ್ಥಿತರಿದ್ದರು. ಸಿದ್ದರಾಮೇಶ್ವರ ಮಠದ ಧರ್ಮಾಧಿಕಾರಿಯಾದ ನಾಗೇಂದ್ರಯ್ಯ ಮಠ ಅಧ್ಯಕ್ಷತೆ ವಹಿಸಿದರು.
ಕಲಬುರಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಆರತಿ ಪಾಟೀಲ ಅವರು “ಹಿರಿಯರು ಸಮಾಜದ ಆಸ್ತಿ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೆ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುತ್ಸದ್ದಿಗಳಿಗೂ ಹಾಗೂ ಸಮಾಜ ಸೇವಕರಿಗೂ ವಿಶೇಷವಾಗಿ ತವರಿನ ಸನ್ಮಾನ ಮಾಡಲಾಯಿತು.
ಶ್ರೀಮತಿ ಲಲಿತಾಬಾಯಿ ಹಾಗೂ ಶಿವಶರಣಪ್ಪಾ ಅಟ್ಟೂರ ಅವರಿಗೆ ಆದರ್ಶ ದಂಪತಿ ಪ್ರಶಸ್ತಿ ಮತ್ತು ಗುರುಶಾಂತ ಹಾಂವಾ ಅವರಿಗೆ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಲಕಾರಿ ಪೂಜಾರಿ ಪ್ರಾರ್ಥಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ರವಿಕುಮಾರ ಶಹಾಪುರಕರ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮ ಮುಂಚಿತವಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೂ,ಚಿನ್ನದ ವೀರೇಶ್ವರ ದೇವರಿಗೂ, ಅವರಾದ ಪೂಜ್ಯರಿಗೂ ಗ್ರಾಮದ ಪ್ರಮುಖ ಬೀದಿಗಳಿಂದ ಹಲವಾರು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.