ಕಲಬುರಗಿ : ನಿಯಮಿತ ಸತ್ವಯುತ ಆಹಾರ, ನಿದ್ರೆ ಮತ್ತು ದೈಹಿಕ ಶ್ರಮದಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸ್ತ್ರೀ ಮತ್ತು ಪ್ರಸ್ತುತಿ ರೋಗ ತಜ್ಞೆ ಡಾ. ಇಂದಿರಾ ಶಕ್ತಿ ಹೇಳಿದರು.
ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಶ್ರೀ ಹಿಂಗುಲಾಂಬಿಕಾ ಆರ್ಯುವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರ ಮತ್ತು ಮಲ್ಲೇಶಪ್ಪ ಮಿಣಜಗಿ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಗಾಜೀಪುರ ಬಡಾವಣೆಯ ಅತ್ತರ ಕಾಂಪೌಂಡ್‍ನ ಶಕ್ತಿ ನಿವಾಸದಲ್ಲಿ ಬುಧವಾರ ನಡೆದ 9ನೇ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹಾರ್ಮೋನಗಳು ಏರುಪೇರಿನಿಂದ ಸ್ತನದ ಕ್ಯಾನ್ಸರ್ ಸಾಮಾನ್ಯವಾಗಿದ್ದು, ಇದರ ತಪಾಸಣೆಗಾಗಿ ಮ್ಯಾಮೋಗ್ರಾಫಿ ಬಸವೇಶ್ವರ ಹಾಗೂ ಸಂಗಮೇಶ್ವರ ಆಸ್ಪತ್ರೆಯಲ್ಲಿ ಲಭ್ಯವಾಗಿದೆ. ಅಲ್ಲದೆ ಮನೆ ಸುತ್ತಮುತ್ತಲು ಪರಿಸರ ಸ್ವಚ್ಚತೆ ಕಾಪಾಡಿದರೆ ಸಾಂಕ್ರಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಅಲ್ಲಮಪ್ರಭುಗುಡ್ಡಾ ಮಾತನಾಡಿ, ಪ್ರತಿ ವರ್ಷ ಅಶ್ವಿನಿ ಮಾಸದ ಕೃಷಿ ವಿಶ್ವದ ತ್ರಯೋದಶಿ ದಿನ ಧ್ವನಂತರಿ ಜಯಂತಿ ಪ್ರಯುಕ್ತ ರಾಷ್ಟ್ರೀಯ ಆರ್ಯುವೇದ ಜಯಂತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆರ್ಯುವೇದ ಶಾಸ್ತ್ರ ಭಾರತದ ಪುರಾತನ ವೈದ್ಯಕೀಯ ಪದ್ಧತಿಯಾಗಿದ್ದು, ರೋಗಬರುವುದನ್ನು ತಡೆಹಿಡಿದು, ರೋಗ ಬಂದ ನಂತರ ಚಿಕಿತ್ಸಾ ವಿಧಾನ ಒಳಗೊಂಡ ಶಾಸ್ತ್ರ ಇದಾಗಿದೆ ಎಂದರು.
ಆಸ್ಪತ್ರೆಯ ಮುಖ್ಯಸ್ಥೆ ಡಾ. ವಿಜಯಲಕ್ಷ್ಮೀ ಮಾತನಾಡಿ, ಆಧುನಿಕ ಜೀವನಶೈಲಿಯ ಕಾರಣದಿಂದಾಗಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಕೀಲುನೋವು, ಥೈರಾಯಿಡ್, ಮೂಲವ್ಯಾಧಿ, ಪಿಸಿಓಡಿ ಹೀಗೆ ಅನೇಕ ವ್ಯಾದಿಗಳಿಗೆ ಆರ್ಯುವೇದದಲ್ಲಿ ಚಿಕಿತ್ಸೆ ಲಭ್ಯವಿದೆ. ಮಹಿಳೆಯರು ಆರ್ಯುವೇದ ಚಿಕಿತ್ಸಾ ಪದ್ಧತಿ ಕಡೆ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಈ ಶಿಬಿರದಲ್ಲಿ ಸುಮಾರು 100ಕ್ಕೂ ಹೆಚ್ಚು ಮಹಿಳೆಯರು, ಯುವತಿಯರು ಆರೋಗ್ಯ ತಪಾಸಣೆ ಮಾಡಿಕೊಂಡರು.