ರೈತರನ್ನು ದಾರಿ ತಪ್ಪಿಸುತ್ತಿರುವ ಸಿದ್ದಸಿರಿ ಕಾರ್ಖಾನೆ ಹೋರಾಟಗಾರರು: ಶರಣು ಪಾಟೀಲ ಮೋತಕಪಲ್ಲಿ

0
39

ಚಿಂಚೋಳಿ: ತಾಲೂಕಿನ ಕಾನೂನು ತೊಡಕಲ್ಲಿ ಇರುವ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭ ಮಾಡಲಿಕ್ಕೆ ರೈತರ ಹೆಸರಲ್ಲಿ ಕೆಲವರು ಹೋರಾಟ ಮಾಡುತ್ತಿದ್ದಾರೆಯೇ ಹೊರತು ಸದ್ಯದ ರೈತರು ಬೆಳೆದ ಕಬ್ಬು ಹೇಗೆ ಸಾಗಾಟ ಮಾಡಬೇಕು ಎಂಬುದರ ಮೇಲೆ ಇಲ್ಲ ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರರಾದ ಶರಣು ಪಾಟೀಲ ಮೋತಕಪಲ್ಲಿ ಕಳವಳವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಚಿಂಚೋಳಿಯಲ್ಲಿ ರೈತರ ಕಬ್ಬು ನುರಿಸಲಿಕ್ಕೆ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕು ಸುಮಾರು 20ಕ್ಕು ಹೆಚ್ಚು ವರ್ಷಗಳು ಕಳೆದಿವೆ, ಆದರೆ ಇಷ್ಟು ದಿನಗಳಿಂದ ಇಲ್ಲದ ಕಾರ್ಖಾನೆ ಪ್ರಾರಂಭ ಮಾಡಲು ಒತ್ತಾಯಿಸುವ ಹೋರಾಟಗಾರರು, ಒಮ್ಮಿಂದೊಮ್ಮೆಲೆ ಕಳೆದ ಕೆಲ ದಿನಗಳಲ್ಲಿ ಹುಟ್ಟಿಕೊಂಡಿರುವದು ಆಶ್ಚರ್ಯ. ಇವರ ಹೋರಾಟ ನಿಜವಾಗಿಯೂ ರೈತರ ಪರ ಆಗಿದ್ದರೆ ರೈತರು ಬೆಳೆದ ಕಬ್ಬಿನ ವಿಲೇವಾರಿಗೆ ಹೋರಾಟ ಮಾಡುತ್ತಿದ್ದರು ಎಂದು ಟೀಕಿಸಿದ್ದಾರೆ.

Contact Your\'s Advertisement; 9902492681

ಕಬ್ಬು ಬೆಳೆದ ರೈತರಿಗೆ ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ಕೊಡಿ ಎಂದು ಹೋರಾಟ ಮಾಡಿದವರಲ್ಲ. ಜಿಲ್ಲೆಯ ಅಥವಾ ಪಕ್ಕದ ಜಿಲ್ಲೆಯ ಯಾವುದೇ ಕಾರ್ಖಾನೆಯ ಮುಂದೆ ಕಬ್ಬು ಖರೀದಿ ಮಾಡಿದ ರೈತರ ಬಾಕಿ ಹಣ ಪಾವತಿಸಿ ಎಂದು ಹೋರಾಟ ಮಾಡಿದವರಲ್ಲ. ದಿಲ್ಲಿಯಲ್ಲಿ ನೂರಾರು ರೈತ ಹೋರಾಟಗಾರರು ಪ್ರಾಣ ಕಳಕೊಂಡಾಗ ತುಟಿ ಬಿಚ್ಚದ ಈ ಹೋರಾಟಗಾರರು ಈಗಷ್ಟೇ ಬಿಲದಿಂದ ಹೊರ ಬಂದು ಘರ್ಜಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಚಿಂಚೋಳಿಯ ಬಸವೇಶ್ವರ ಮೂರ್ತಿ ಹತ್ತಿರ ಸಿದ್ದಸಿರಿ ಕಾರ್ಖಾನೆ ಪ್ರಾರಂಭ ಮಾಡಬೇಕು ಎಂದು ಅನಿರ್ದಿಷ್ಟ ಮೌನ ಪ್ರತಿಭಟನೆಗೆ ಶರಣಾದವರು ಸಂಜೆ ಹೊತ್ತಿಗೆ ತಮ್ಮ ಝಂಡ ತೆಗೆದು ಕೊಂಡು ಮನೆಗೆ ಹೋದರು. ಕಲಬುರಗಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದವರು ಈಗ ಕಲಬುರಗಿಗೆ ರೈತರು ಬರಲು ದೂರವಾಗುತ್ತೆ ಹೀಗಾಗಿ ನಾಲ್ಕನೇ ತಾರೀಕ ಸೋಮವಾರ ಚಿಂಚೋಳಿಯಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿರುವುದು ನೋಡಿದರೆ ಇವರು ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದಿದ್ದಾರೆ.

ರೈತರ ಮಾತು ಬಂದಾಗ ದಿಲ್ಲಿಯವರೆಗೆ ಹೋಗುವ ರೈತರು ಕಲಬುರಗಿಗೆ ಹೋಗಲಾರರೇ?. ಇವರಿಗೆ ಪ್ರಯೋಜಕತ್ವ ಮಾಡುತ್ತಿರುವ ಸಿದ್ದಸಿರಿ ಕಾರ್ಖಾನೆಯ ಆದೇಶದಂತೆ ಇವರು ತಮ್ಮ ಯೋಜನೆಯನ್ನು ಬದಲಾವಣೆ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಪ್ರತಿಭಟನೆ ಮಾಡಿದರೆ ಈ ಹೋರಾಟಗಾರರ ಅಸಲಿಯತ್ತು ತಿಳಿದ ನಮ್ಮ ರೈತರು ಭಾಗವಹಿಸುವದಿಲ್ಲ ಎನ್ನುವದನ್ನು ಅರಿತು, ಚಿಂಚೋಳಿಯಲ್ಲಿ ಸಿದ್ದಸಿರಿ ಕಾರ್ಖಾನೆಯ ನೌಕರರು ಹಾಗೂ ಬಿಜೆಪಿಯ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಅನುಕೂಲ ಆಗುವ ದ್ರಷ್ಟಿಯಿಂದ ಚಿಂಚೋಳಿಯಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸೋಕಾಲ್ಡ್  ಹೋರಾಟಗಾರರು ಮೊದಲು ಬಸವನಗೌಡ ಪಾಟೀಲ್ ಯತ್ನಾಳ್  ಅವರ ಇತಿಹಾಸವನ್ನು ಅವರಿಗೆ ಕೇಳಿ. ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಲವು ವರುಷಗಳ ಹಿಂದೆ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೆನೂರು ಗ್ರಾಮದಲ್ಲಿ ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ ಕೇವಲ ಎರೆಡೇ ವರುಷದಲ್ಲಿ ಹಿರೇಬೆನೂರು ಕಾರ್ಖಾನೆ ಬಂದ್ ಮಾಡಿದ್ದು ಏಕೆ? ಆ ಭಾಗದ ರೈತರ ಪಾಡು ಏನಾಯ್ತು ಇಂಡಿ ತಾಲೂಕಿನ ಜನತೆಗೆ ಇಲ್ಲ ಹಿರಿಯ ರಾಜಕಾರಣಿಗಳಾದ ಶಿವಾನಂದ ಪಾಟೀಲ ಹಾಗೂ ವಿಠಲ್ ಕಟಕದೊಂಡ್ ಅವರಿಂದ ತಿಳಿಯಬಹುದು ಎಂದಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿ ಸಿದ್ದಧಾರ ಹಾಲಿನ ಡೈರಿ ಸ್ಥಾಪನೆ ಹೆಸರಿನಲ್ಲಿ ಬಿಜಾಪುರ ಜಿಲ್ಲೆಯ ಸಾವಿರಾರು ರೈತರಿಂದ 1100 ರೂಪಾಯಿಗಳ ವಂತಿಗೆಯನ್ನು ಪಡೆದು ರೈತರಿಗೆ ಹೈನುಗಾರಿಕೆಗೆ ಎಮ್ಮೆ ಸಾಲ ಕೊಡುವ ಭರವಸೆ ನೀಡಿದ ಯೋಜನೆ ಎಲ್ಲಿಗೆ ಬಂತು , ಅದರ ದುಡ್ಡಲ್ಲಿ ಖರೀದಿಸಿದ ಜಾಗಗಳಲ್ಲಿ ಇವತ್ತು ಏನಿದೆ ಯತ್ನಾಳ ಅವರೇ ಹೇಳಬೇಕು.
ನೂರು ವರುಷಗಳ ಇತಿಹಾಸ ಹೊಂದಿರುವಂತಹ ಸಿದ್ದೇಶ್ವರ ಸಹಕಾರ ಬ್ಯಾಂಕ ಯತ್ನಾಳ ಅವರ ಅಧ್ಯಕ್ಷತೆಯಲ್ಲಿ ಯಾಕೆ ಸೂಪರ್ ಸೀಡ್ ಆಯ್ತು ಕೇಳಿ. ತಮ್ಮಲ್ಲಿ ಸಾಕಷ್ಟು ಹುಳುಕುಗಳನ್ನು ತುಂಬಿಕೊಂಡು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕಡೆ ಬೊಟ್ಟು ಮಾಡುತ್ತಿರುವುದು ರಾಜಕೀಯ ನಾಟಕವಾಗಿದೆ ಅಷ್ಟೇ. ಖಂಡ್ರೆ ಅವರು ವಿರೋಧ ಪಕ್ಷಗಳ ನಾಯಕರ ಒಡೆತನದ ಕಾರ್ಖಾನೆಗಳ ಜೊತೆಗೆ ರಾಜಕೀಯ ಮಾಡುವದೇ ಇದ್ದರೆ ತಮ್ಮ ಸ್ವಂತ ಕ್ಷೇತ್ರ ತಮ್ಮ ಎದುರಾಳಿ ಪ್ರಕಾಶ ಖಂಡ್ರೆ ಅವರ ಭಾಲ್ಕೆಶ್ವರ್ ಹಾಗೂ ನಾಗಮರಪಲ್ಲಿ ಕುಟುಂಬದ ಹಿಡಿತದಲ್ಲಿ ಇರುವ ನಾರಂಜಾ ಕಾರ್ಖಾನೆಗಳು ನಡೆಯುತ್ತಿದ್ದವಾ ? ನಮ್ಮ ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಕಾನೂನಾತ್ಮಕ ಉದ್ದಿಮೆ ನಡೆಸಲು ಎಲ್ಲರೂ ಸ್ವತಂತ್ರರು ನಮ್ಮದೆಲ್ಲ ಸರಿ ಇದ್ದರೆ ಯಾರಿಗೂ ತಡಿಯೋ ಹಕ್ಕಿಲ್ಲ, ಮೊದಲು ತಮ್ಮಲ್ಲಿರುವ ಕಾನೂನಾತ್ಮಕ ತೊಡಕನ್ನು ಬಗೆಹರಿಸಿಕೊಂಡು ಇನ್ನೊಬ್ಬರ ಕಡೆ ಆರೋಪ ಮಾಡುವ ಚಾಳಿ ಬಿಡಬೇಕು ಎಂದಿದ್ದಾರೆ.

ರಾಜ್ಯ ಸರಕಾರವು ಸುಪ್ರೀಂ ಕೋರ್ಟ ನಲ್ಲಿ ನಾಲ್ಕು ಅಕ್ಷರ ಬರೆದು ಕೊಟ್ಟು ಸಲ್ಲಿಸಿರುವ ಮೆಲ್ಮನವಿ ಹಿಂದಕ್ಕೆ ಪಡೆಯಬೇಕು. ಸರಕಾರವು ಕಾನೂನನ್ನು ಉಲ್ಲಂಘಸಿ ಸಿದ್ದಸಿರಿ ಕಾರ್ಖಾನೆ ಪ್ರಾರಂಭ ಮಾಡಲು ಪರವಾನಿಗೆ ಕೊಡಬೇಕು ಎಂದು ಹೇಳುವ ಈ ರೈತ ಹೋರಾಟಗಾರರು  ಇದೆ ಮಾತು ಸಿದ್ದಸಿರಿ ಕಾರ್ಖಾನೆಯ ಮಾಲೀಕರಾದ ಬಸವನಗೌಡ ಪಾಟೀಲ್ ಯತ್ನಾಳ್  ಅವರನ್ನು ನೀವು ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ದಾಖಲೆಗಳನ್ನು ಕಾನೂನಿನ ಪ್ರಕಾರ ಸಲ್ಲಿಸಿ ಪರವಾನಿಗೆ ಪಡೆದು ಕಾರ್ಖಾನೆ ಪ್ರಾರಂಭ ಮಾಡಿ ಎಂದು ಹೇಳಲು ಇವರಿಂದ ಸಾಧ್ಯ ಇಲ್ಲ ಏಕೆಂದರೆ ಇವರ ದುಕಾನ್ ನಡೆಯುತ್ತಿರುವುದೇ ಸಿದ್ದಸಿರಿ ಕಾರ್ಖಾನೆಯಿಂದ ಎಂದು ಹೇಳಿದ್ದಾರೆ.

ವಾಸ್ತವತೆಯನ್ನು ಅರಿತ ಎಲ್ಲರೂ ಸುಖ ಸುಮ್ಮನೆ ಸಚಿವರುಗಳ ಮೇಲೆ ಸರಕಾರದ ಮೇಲೆ ಗೂಬೇ ಕುರಿಸುವದು ಸರಿ ಅಲ್ಲ. ಉಚ್ಚ ನ್ಯಾಯಾಲಯದ ತೀರ್ಪು ಕಾರ್ಖಾನೆ ಪರ ಇದೆ ಎಂದು ತೀರ್ಪಿನ ನೈಜತೆಯನ್ನು ಅರಿಯದೆ ಹೇಳುವ ಕಾರ್ಖಾನೆ ಮಾಲೀಕರು ಹಾಗೂ ಪ್ರಾಯೋಜಿತ ಹೋರಾಟಗಾರರು, ಆದೇಶ ನಿಮ್ಮ ಪರವಿದ್ದು ಸರಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡದೆ ಇದ್ದಲ್ಲಿ, ಉಚ್ಚ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಅದೇ ಉಚ್ಚ ನ್ಯಾಯಾಲಯದಲ್ಲಿ ಕಂಟೆಪ್ಟ್ ಹಾಕಬೇಕು. ಅದೇ ವಾದವನ್ನು ಮಂಡಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸರಕಾರದ ಮೇಲ್ಮನವಿಯನ್ನು ತಿರಸ್ಕೃತ ಗೊಳಿಸುವ ಕೆಲಸ ಮಾಡಲಿ. ಸರಕಾರ ಕಾರ್ಖಾನೆ ಯಾರು ಕಾನೂನಿಗಿಂತ ದೊಡ್ಡವರು ಅಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು ಎಂದಿದ್ದಾರೆ.

ಬೆಳೆದ ಕಬ್ಬು ಯಾವುದಾದರೊಂದು ಕಾರ್ಖಾನೆಗೆ ಹೋಗುವ ವ್ಯವಸ್ಥೆ ಸರಕಾರ ಮಾಡುತ್ತೆ ಭರವಸೆ ಇರಲಿ. ಯಾವುದೇ ಕಾರಣಕ್ಕೂ ಈ ಹೋರಾಟಗಾರರ ಇಂತಹ ಹೋರಾಟಗಾರ ಮಾತಿಗೆ ಮರುಳಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಚಿಂಚೋಳಿ ಕಬ್ಬು ಬೆಳೆದ ರೈತರಲ್ಲಿ ವಿನಂತಿಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here