ಕಲಬುರಗಿ : ಕನ್ನಡ ಭಾಷೆಯ ಬಳಕೆಯ ಬಗ್ಗೆ ಕೀಳರಿಮೆಯನ್ನು ಬಿಟ್ಟು ಕನ್ನಡದ ನಿತ್ಯ ಬಳಕೆಯಾದರೆ ಕನ್ನಡ ಭಾಷೆಯು ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಮತ್ತು ಕನ್ನಡ ಪ್ರೇಮ ಮೆರೆದಂತಾಗುತ್ತದೆ ಎಂದು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.
ಕಲಬುರಗಿಯ ಕೆಪಿಎನ್ ಆಸ್ಪತ್ರೆಯಲ್ಲಿ ನ. 20 ರಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಕರ್ನಾಟಕ ಕನ್ನಡ ಕನ್ನಡಿಗ ವಿಶೇಷ ರಸ ಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಭಾಷಾವಾರು ರಾಜ್ಯ ರಚನೆಗೊಂಡು ಮೈಸೂರು ಸಂಸ್ಥಾನವು ಮತ್ತೆ ಕರ್ನಾಟಕವಾಗಿ 68 ವರ್ಷ ಸಂದರು ಕನ್ನಡ ಕಲಿಯಿರಿ ಕನ್ನಡ ಜಾರಿಯಾಗಲಿ ಮತ್ತು ಕನ್ನಡದಲ್ಲಿ ಆಡಳಿತ ಬರಲಿ ಎಂಬ ಕೂಗು ಇನ್ನೂ ಜೀವಂತವಾಗಿರೋದು ಅತ್ಯಂತ ದುಃಖಕರ ವಿಷಯವಾಗಿದೆ.
ಕನ್ನಡ ನಾಡಿನ ಜನತೆಯು ಕನ್ನಡ ಭಾಷೆಯನ್ನು ನಿತ್ಯ ಬಳಕೆ ಮಾಡಿ ಕನ್ನಡ ಪ್ರೀತಿಯನ್ನು ತೋರಿಸಬೇಕಾಗಿದೆ ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ ಕನಿಷ್ಠ ಒಂದು ಕನ್ನಡ ಪತ್ರಿಕೆ ಮತ್ತು ಕನ್ನಡ ಪುಸ್ತಕಗಳನ್ನು ಓದಿ ಕನ್ನಡದಲ್ಲಿ ಆಡಳಿತ ಜಾರಿಗೊಂಡು ಕರ್ನಾಟಕದಲ್ಲಿ ಕನ್ನಡವೇ ವಿಜೃಂಭಿಸಬೇಕು. ಕನ್ನಡ ಸಾಹಿತ್ಯಕ್ಕೆ ಕವಿರಾಜಮಾರ್ಗ ಕೃತಿ ಕೊಟ್ಟ ಕಲಬುರ್ಗಿ ಜಿಲ್ಲೆ ಹಾಗು ರಾಷ್ಟ್ರಕೂಟರ ನಾಡಿನ ಜನ ನಾವೆಲ್ಲರೂ ಹೆಮ್ಮೆಪಡುವ ವಿಷಯವಾಗಿದೆ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿ ಭಾವೈಕ್ಯತೆಯ ಪುಣ್ಯದ ನೆಲವಾಗಿ ಹೆಸರು ಪಡೆದಿದೆ. ಕನ್ನಡ ನಾಡಿನಲ್ಲಿ ಜನ್ಮವೆಸಗಿರುವುದೇ ಪುಣ್ಯ ವಿಶೇಷ ಎಂದು ಡಾ. ಪೆರ್ಲ ಹೇಳಿದರು.
ಸಮಾರಂಭದಲ್ಲಿ ಕೆಬಿಎನ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಿ.ಎಸ್ ಶಂಕರ್ ಕರ್ನಾಟಕ — ಕನ್ನಡ — ಕನ್ನಡಿಗ ವಿಷಯ ಕುರಿತಾಗಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ ಸಭಿಕರಿಗೆ ಉತ್ತರ ಹೇಳಲು ಅವಕಾಶ ನೀಡಿದರು ಇದರಲ್ಲಿ ಸಮಗ್ರ ಕರ್ನಾಟಕ ಇತಿಹಾಸ, ಚಾರಿತ್ರಿಕ ಪುರುಷರು, ಕರ್ನಾಟಕದ ಉಡುಗೆ – ತೊಡುಗೆ, ಆಹಾರ, ಪ್ರವಾಸಿ ತಾಣಗಳು ಸೇರಿದಂತೆ ನಾಡಿನ ಹಿರಿಮೆ ಗರಿಮೆಗಳ ಬಗ್ಗೆ ಕರ್ನಾಟಕದ ಸಮಗ್ರ ದರ್ಶನ ಮಾಡಿಸಿ ಮಾಹಿತಿ ಒದಗಿಸಿದರು.
ಅಧ್ಯಕ್ಷತೆ ವಹಿಸಿದ ಕೆಬಿಎನ್ ಆಸ್ಪತ್ರೆಯ ಡೀನ್ ಡಾ. ಸಿದ್ದೇಶ್ ಶಿರವಾರ ಮಾತನಾಡಿ ಕನ್ನಡದ ಬಗ್ಗೆ ಎಲ್ಲರೂ ಕಾಳಜಿ ವಹಿಸಿ ಬಳಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಹೊರರಾಜ್ಯದಿಂದ ವೈದ್ಯಕೀಯ ಅಧ್ಯಯನಕ್ಕಾಗಿ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಸಲಹೆ ನೀಡಿದರು. ನಂತರ ಪ್ರಬಂಧ, ಚಿತ್ರ ರಚನೆ, ಗಾಯನ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ. ಸಿದ್ದಲಿಂಗ ಚೇಂಗಟಿ ಉಪಸ್ಥಿತರಿದ್ದರು ಡಾ. ಚಂದ್ರಕಲಾ ಪಿ ಸ್ವಾಗತಿಸಿ ಕುಮಾರ್ ಹುಮ್ನಾಬಾದ್ ವಂದನಾರ್ಪಣೆಗೆದರು ಡಾ. ಶ್ರೀರಾಜ್ ಮತ್ತು ಡಾ. ಆಕಾಶ್ ನಿರೂಪಣೆಗೈದರು.