ಕಲಬುರಗಿ: ಇಲ್ಲಿನ ಶ್ರೀನಿವಾಸ ಸರಡಗಿ ಗ್ರಾಮದ ಪರಿಸರದಲ್ಲಿರುವ ವಿಮಾನ ನಿಲ್ದಾಣದಲ್ಲಿನ ಸಂತ ಶ್ರೀ ಸೇವಾಲಾಲ ಮಹಾರಾಜರ ಮತ್ತು ಮರಿಯಮ್ಮ ದೇವಿಯ ದೇವಾಲಯ ಧ್ವಂಸಗೊಳಿಸಿರುವ ಹಾಗೂ ದೇವರ ಮೂರ್ತಿಗಳನ್ನು ಭಗ್ನಗೊಳಿಸಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಕೋಳ್ಳುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿವಿಧ ಮಠಾಧಿಶರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಹತ್ತಿರ ನಿಯೋಗದ ಮೂಲಕ ಭೇಟಿ ನೀಡಿ, ವಿಮಾನ ನಿಲ್ದಾಣದ ಆವರಣದಲ್ಲಿದ್ದ ಸಂತ ಸೇವಾಲಾಲ ಮಹಾರಾಜರ ಮತ್ತು ಮರಿಯಮ್ಮ ದೇವಿಯ ದೇವಾಲಯಗಳನ್ನು ಹಾಗೂ ದೇವರ ಮೂರ್ತಿಯನ್ನು ಯಾವುದೇ ಮುನ್ಸೂಚನೆ ನೀಡದೇ ಬಂಜಾರಾ ಸಮುದಾಯದ ಧರ್ಮಗುರುಗಳ, ರಾಜಕೀಯ ಧುರೀಣರ, ಸಮುದಾಯದ ಮುಖಂಡರ ಗಮನಕ್ಕೂ ತರದೇ ಏಕಾಏಕಿ ದೇವಾಲಯಗಳನ್ನು ನೆಲಸಮಗೊಳಿಸಿ ದೇವರ ಮೂರ್ತಿಗಳನ್ನು ಭಗ್ನ ಗೊಳಿಸಿರುವುದು ಅತ್ಯಂತ ಘೋರ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲ್ದಾಣ ಉದ್ಘಾಟನೆಯ ಮುಂಚೆ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು ಒಂದುಬಾರಿ ಪ್ರಾಯೋಗಿಕ ಹಾರಾಟ ಮಾಡಿದರು ಹಾಗೂ ಅಂದಿನ ಅಂದಿನ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಹೆಚ್. ಡಿ. ಕುಮಾರಸ್ವಾಮಿಯವರು ಮೊದಲು ಮಾಡಿಕೊಂಡು ಕೇಂದ್ರದ ಅನೇಕ ಸಚಿವರು, ಸಂಸದರು, ರಾಜಕೀಯ ಧುರೀಣರು ಈ ವಿಮಾನ ನಿಲ್ದಾಣದ ಸೇವೆಯನ್ನು ಬಳಕೆ ಮಾಡಿಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ವಿಮಾನ ಹಾರಾಟಕ್ಕೆ ಮತ್ತು ಇಳಿಯುವಿಕೆಗೆ ದೇವಸ್ಥಾನಗಳು ಅಡ್ಡಿ ಬರಲಿಲ್ಲವೇ ? ಎನ್ನುವುದು ಜನತೆಯಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತಮ್ಮ ಪೂರ್ವಜರಿಂದ ಬದುಕಿ, ಬಾಳಿ ವಾಸವಿದ್ದ ಮನೆಗಳನ್ನು ಮತ್ತು ಹೊಲಗಳನ್ನು ಬಿಟ್ಟುಕೊಟ್ಟ ಶ್ರಮಿಕ ವರ್ಗದ ಬಂಜಾರಾ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡಿದ ಮಹತ್ವದ ಉಡುಗೊರೆಯೇ? ಎನ್ನುವುದು ನಾವು ಕೇಳಬೇಕಾಗುತ್ತದೆ. ಬಂಜಾರಾ ಸಮುದಾಯದ ಕುಲಗುರು, ಆದಿದೈವ, ಶತಮಾನದ ಶ್ರೇಷ್ಠ ಶಿವಯೋಗಿ, ಕಾರಣಿಕ ಪುರುಷ ಸಂತ ಸೇವಾಲಾಲ ಮಹಾರಾಜರ ಮತ್ತು ಮರಿಯಮ್ಮ ದೇವಿಯ ದೇವಸ್ಥಾನ ಉರುಳಿಸಿರುವ ಹಿಂದೆ ಭಾರತ ಸರ್ಕಾರ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಕಡೆ ಜಿಲ್ಲಾಡಳಿತ ಬೊಟ್ಟು ಮಾಡಿ ತೋರಿಸುವುದರ ಮೂಲಕ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯದಿಂದ ವಿಮುಕ್ತವಾಗುತ್ತಿರುವುದನ್ನು ನೋಡಿದರೆ ಯಾರನ್ನೋ ಬಚಾವು ಮಾಡಲು ಜಿಲ್ಲಾಡಳಿತ ಹೊರಟಿದೆಯೇ ? ಇದರ ಸಮಗ್ರ ತನಿಖೆ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ 15 ದಿನ ಕಳೆದರೂ ಸಹ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ವಿನಾಕಾರಣ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಪ್ರಕರಣದ ಗಂಭೀರತೆಯನ್ನು ತಾವುಗಳು ಅರ್ಥ ಮಾಡಿಕೊಂಡು ಸಮಗ್ರ ತನಿಖೆಗೆ ಆದೇಶಿಸುವಂತೆ ಮತ್ತು ಆರೋಪಿಗಳ ಮೇಲೆ ಕಾನೂನಿನ ರೀತಿ ಕ್ರಮ ಕೈಗೊಳ್ಳುವಂತೆ ಹಾಗೂ ಭೂಮಿ ನೀಡಿ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ, ಉದ್ಯೋಗ ನೀಡುವಂತೆ ತಮ್ಮ ಮನವಿ ಪತ್ರದಲ್ಲಿ ಸಿಎಂಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರರು ಪೀಠಾಧಿಪತಿಗಳು ಶ್ರೀ ಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠ ಶ್ರೀನಿವಾಸ ಸರಡಗಿ. ಪೂಜ್ಯ ಶ್ರೀ ಬಳಿರಾಮ ಮಹಾರಾಜರು ಪೀಠಾಧಿಪತಿಗಳು, ಸಂತ ಶ್ರೀ ಸದ್ಗುರು ಸೇವಾಲಾಲ ಬಂಜಾರಾ ಶಕ್ತಿಪೀಠ, ಗೊಬ್ಬೂರವಾಡಿ ಭೀಮಾಶಂಕರ ಚಕ್ಕಿ, ನಾಗಲಿಂಗಯ್ಯ ಮಠಪತಿ, ಶೀಲವಂತಯ್ಯ ಮಲ್ಲೇದಮಠ, ರವಿ ಶಹಾಪೂರಕರ, ಸಂಗಯ್ಯ ಸ್ವಾಮಿ ಹಿರೇಮಠ, ಪ್ರದೀಪ ರಾಠೋಡ, ಸಂತೋಷ ಆಡೆ, ಧನರಾಜ ಚವ್ಹಾಣ, ಹಣಮಂತರಾಯ ಅಟ್ಟೂರ, ಶಿವಶರಣಪ್ಪ ಚಿದ್ರಿ ಇದ್ದರು.