ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ
ಭವ ಬಂಧನವ ಬಿಡಿಸಿ
ಪರಮ ಸುಖವ ತೋರಿದ ಗುರುವೆ
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶ
ಕೊಟ್ಟ ಗುರುವೆ ನಮೋಃ ನಮೋಃ
-ಅಕ್ಕಮಹಾದೇವಿ
ದೇವರ ಸಚ್ಚಿದಾನಂದ ಸ್ವರೂಪದ ಸಾಕಾರವಾಗಿ ಬೆಳೆಯುತ್ತಿರುವ ಮಹಾದೇವಿ ಮಹಾತಾಯಿ. ಲೌಕಿಕದಲ್ಲಿ ಅಲೌಕಿಕ, ಸಂಸಾರದಲ್ಲಿ ಸತ್ಯವನ್ನು, ಆಸಕ್ತಿಯಲ್ಲಿ ವಿರಕ್ತಿ, ಮರ್ತ್ಯ ದಲ್ಲಿ ಅಮತ್ರ್ಯ ತೋರಬಂದ ಮಹಾಸತಿ. ಆಕೆ ಅಚ್ಚಳಿಯದ ದಿವ್ಯ ಪ್ರಕಾಶ, ಅನುಪಮಶಕ್ತಿಯ ಸಾಗರ, ಉಜ್ವಲ ಸಂವೇದನಾಪೂರ್ಣ ಜೀವನ ಕಥನ. ಈ ಲೋಕದ ಆಟ, ಪಾಠ, ನೋಟ, ಕೂಟದಂತಹ ಪ್ರಾಪಂಚಿಕ ಸುಖಭೋಗವು ಬಾಲ್ಯದಲ್ಲಿ ಅವಳಿಗೆ ಹಿಡಿಸಲಿಲ್ಲ. ಅಖಂಡ ಉರಿವ ಬೆಂಕಿಯ ವೈರಾಗ್ಯ ಆಕೆಯದು.
ಶರಣರು, ಸಂತರು, ದಾರ್ಶನಿಕರು ಸಂಸಾರದಲ್ಲಿದ್ದರೂ ಅದನ್ನು ಅಷ್ಟೊಂದು ಹಚ್ಚಿಕೊಳ್ಳದೆ ಮಜ್ಜಿಗೆಯೊಳಗಿನ ಬೆಣ್ಣೆಯೆಂತೆ, ಕೆಸರಿನೊಳಗಣ ಕಮಲದಂತಿರುತ್ತಿದ್ದರು. ಅದೇರೀತಿಯಾಗಿ ಮಹಾದೇವಿ ಕೂಡ ದಿವ್ಯ ಚೇತನವಾಗಿ ಬೆಳೆಯುತ್ತಾಳೆ. ತಾಯಿ ಲಿಂಗಮ್ಮಳ ತ್ರಿಕಾಲ ಲಿಂಗಪೂಜೆ, ಪಾಠ, ತಂದೆ ಓಂಕಾರಶೆಟ್ಟಿಯ ತಾಡೋಲೆಯ ವಚನ ಓದು, ದಾಸೋಹ, ಪ್ರವಚನ ಕೇಳುವುದು, ಅನುಭಾವಗೋಷ್ಠಿ ನಡೆಸುವ ಮನೆಯ ಈ ಪರಿಸರ ಮಹಾದೇವಿ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಅಂತೆಯೇ ಗುರು, ಲಿಂಗ, ರುದ್ರಾಕ್ಷಿ, ವಿಭೂತಿ ಬೇಕು ಎಂದು ಹಠ ಹಿಡಿಯುತ್ತಾಳೆ. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎನ್ನುವಂತೆ ಮನೆ ಮತ್ತು ಮಠದ ಪರಿಸರದಿಂದಾಗಿ ಆಕೆಯಲ್ಲಿ ಸದ್ಗುಣಗಳು ವಿಕಾಸಗೊಂಡವು.
ಒಂದೊಮ್ಮೆ ಮಠಕ್ಕೆ ಹೋದಾಗ ಗಂಡು ಮಕ್ಕಳು ಗುರುಕುಲದಲ್ಲಿ ಪಾಠಕಲಿಯುವದನ್ನು ಕಂಡ ಮಹಾದೇವಿ, ತಾನು ಕೂಡ ಅವರಂತೆ ಶಿಕ್ಷಣ ಕಲಿಯಬೇಕು ಎಂದು ತಂದೆಗೆ ಬೇಡುತ್ತಾಳೆ. ಕಾಡುತ್ತಾಳೆ. ಆಗಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಹಾದೇವಿ ಶಾಲೆಗೆ ಹೋಗುತ್ತೇನೆ ಎಂದು ಕೇಳಿದ್ದನ್ನು ನೋಡಿ ಲಿಂಗಮ್ಮನ ಎದೆ ಹೊಡೆದು ಹೋಗುತ್ತದೆ. ತಂದೆ ನಿರ್ಮಲಶೆಟ್ಟಿ ” ಮಗು ಶಾಲೆ ಕಲಿಯಲಿ ಬಿಡು” ಎಂದು ಹೇಳುತ್ತಾನೆ. ಕೊನೆಗೆ ಗುರುಗಳಿಗೆ ಕೇಳಿದಾಗ, ಕಲ್ಯಾಣದ ಅನುಭವ ಮಂಟಪದಲ್ಲಿ ಅಪ್ಪ ಬಸವಣ್ಣನವರು ರಾತ್ರಿ ಶಾಲೆ ನಡೆಸುವ ಮೂಲಕ ವಯಸ್ಕರ ಶಿಕ್ಷಣ ನೀಡುತ್ತಿದ್ದಾರೆ. ಅಂತೆಯೇ 35 ಜನ ವಚನಕಾರ್ತಿಯರು ಬರೆಯುತ್ತಿದ್ದಾರೆ. ಬೆಳೆವ ಚೇತನಕ್ಕೆ ಅಡ್ಡಿಯಾಗಬಾರದು ಎಂದು ಹೇಳಿದರು.
ಜಗತ್ತಿನಲ್ಲಿ ಸಾರ್ವತ್ರಿಕ ಶಿಕ್ಷಣ ಆರಂಭವಾಗುವುದಕ್ಕಿಂತ ಮುಂಚೆಯೇ ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಸ್ತ್ರೀ ಶಿಕ್ಷಣ ಆರಂಭಿಸಿದ್ದರು. ಅವಳು ಮಠದಲ್ಲಿಯೇ ಶಿಕ್ಷಣ ಕಲಿಯಲಿ ಬಿಡು ಎಂದು ಗುರುಗಳು ಹೇಳುತ್ತಾರೆ. ಇದರಿಂದಾಗಿ ಮಹಾದೇವಿಗೆ ಗುರುಕುಲ ಶಿಕ್ಷಣ ದೊರೆಯುತ್ತದೆ. ಇಲ್ಲಿ ಜೀವನ ಶಿಕ್ಷಣ ಕಲಿಯುತ್ತಾಳೆ. ಜಗತ್ತಿನ ಎಲ್ಲೆಡೆ ಅದಿನ್ನೂ ಮಹಿಳೆಗೆ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ. ಮಹಿಳೆ ಶಿಕ್ಷಣದಿಂದ ವಂಚಿತಳಾಗಿದ್ದಳು. ಆದರೆ 12ನೇ ಶತಮಾಣದಲ್ಲಿ ಅಕ್ಕಮಹಾದೇವಿ ಸೇರಿದಂತೆ ಇತರೆ ಶಿವಶರಣೆಯರು ಅಕ್ಷರ ಕಲಿತರು ಮಾತ್ರವಲ್ಲ ವಚನಗಳನ್ನು ಸಹ ಬರೆದರು. ಹೀಗಾಗಿ ಮಹಾದೇವಿಯನ್ನು ಜಗತ್ತಿನ ಮೊಟ್ಟ ಮೊದಲ ಪದವೀಧರೆ ಎಂದು ಗುರುತಿಸಲಾಗುತ್ತದೆ.
“ಎತ್ತೆತ್ತ ನೋಡಿದಡತ್ತ ನೀನೆ ದೇವ, ತನ್ನ ತಾನು ಕಾಣುವ ನಿಜ ಶಿಕ್ಷಣ, ನೈತಿಕ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ ಪಡೆದ ಮಹಾದೇವಿ ಪ್ರೀತಿ, ತ್ಯಾಗದ ತಳಹದಿಯ ಶಿಕ್ಷಣ ಕಲಿಯುತ್ತಾಳೆ. ಶಿಕ್ಷಣದ ಧ್ಯೇಯ ಮತ್ತು ಜೀವನದ ಧ್ಯೇಯ ಒಂದೇ ಆಗಿರಬೇಕು” ಎನ್ನುವಂತಹ ಸತ್ಯ ಸಂಪಾದನೆಯ ವಿದ್ಯೆ, ಸಂಸ್ಕಾರವನ್ನು ಮಹಾದೇವಿ ಪಡೆಯುತ್ತಾಳೆ. ಹೀಗೆ ಓದು, ಬರಹದ ಸಂತಸ-ಸಂಭ್ರಮದಲ್ಲಿ ಮಗ್ನಳಾಗಿರುತ್ತಾಳೆ. ಅಂತರಂಗದಲ್ಲಿ ಜ್ಞಾನ, ಬಹಿರಂಗದಲ್ಲಿ ಅಪಾರ ಸೌಂದರ್ಯ ವಿಸ್ತರಿಸಿಕೊಂಡಿದ್ದ ಮಹಾದೇವಿಯ ಬಾಹ್ಯ ಸೌಂದರ್ಯಕ್ಕೆ ಲೋಕದ ಕಣ್ಣು ಬೀಳುತ್ತದೆ. ಇದೇವೇಳೆಯಲ್ಲಿ ಮಹಾದೇವಿ ಮಗುವಿನಿಂದ ಕನ್ಯೆ ಆಗುತ್ತಾಳೆ. ಋತುಮತಿ ಆಗುತ್ತಾಳೆ. ಆಗ ತಾಯಿ ಲಿಂಗಮ್ಮನಿಗೆ ಮಗಳ ಮದುವೆ ಬಗ್ಗೆ ಚಿಂತೆ ಹುಟ್ಟುತ್ತದೆ. ಪತಿ ಓಂಕಾರಶೆಟ್ಟಿ ಎದುರು ಅತ್ತು ಪರಿಹಾರಕ್ಕಾಗಿ ಗುರುಲಿಂಗ ದೇವರ ಬಳಿ ಹೋಗುತ್ತಾರೆ.
ಈ ವಿಷಯ ತಿಳಿದ ಗುರುಗಳಿಗೆ ಖುಷಿಯಾಗುತ್ತದೆ. ಉಡುತಡಿಯ ಕೀರ್ತಿ ನಾಡಿನೆಲ್ಲೆಡೆ ಪಸರಿಸಬಲ್ಲ ಮಹಾದೇವಿಗೆ ಲಿಂಗದೀಕ್ಷೆ ಆಗಬೇಕು ಎನ್ನುತ್ತಾರೆ. ಆಗ ಲಿಂಗಮ್ಮ, ಹಾಗಾದರೆ ಆವೊತ್ತು ಮಾಡಿದ್ದು ಏನು? ಕೇಳುತ್ತಾಳೆ. ಅದು ಗರ್ಭಸ್ಥ ಶಿಶುವಿಗೆ ಮಾಡಿದ ಲಿಂಗಧಾರಣೆ. ಅದು ಕೇವಲ ನಿಶ್ಚಿತಾರ್ಥವಿದ್ದಂತೆ. ಇದು ಲಿಂಗದೀಕ್ಷೆ. ಮದುವೆ ಇದ್ದಂತೆ ಎಂದು ಹೇಳುತ್ತಾರೆ. ಮೈಮೇಲೆ ನೀರೆರೆದುಕೊಂಡು, ಮೈ ಮುಚ್ಚುವ ದಟ್ಟವಾದ ಕೂದಲಿನೊಂದಿಗೆ ಬಂದಿದ್ದ ಮಹಾದೇವಿಯ ಕೈಯಲ್ಲಿ ಲಿಂಗ ಕೊಟ್ಟು ಬಸ್ಮಧಾರಣೆ ಮಾಡುತ್ತಾರೆ. ತಲೆಯ ಮೇಲೆ ಕೈಯಿಡುವಾಗ, ಮಹಾದೇವಿಯ ಸೌಂದರ್ಯದ ಖಣಿಯ ಕಂಡ ಗುರುಗಳ ಎದೆ ಕೂಡ ಜಲ್ ಅನ್ನುತ್ತದೆ. “ಈ ಚೆಲವು ಪರಶಿವನ ಚೆಲುವು. ಹತ್ತಾರು ವ್ಯಾಘ್ರಗಳ ನಡುವೆ ಹೇಗೆ ಬದುಕಿತೀ ಹಸು. ದುಷ್ಟರಲ್ಲೊಬ್ಬ ಸಾತ್ವಿಕ, ಕಳೆಯಲ್ಲೊಂದು ಬೆಳೆ, ಉಸುಕಿನಲ್ಲೊಂದು ಓಯಸಿಸ್ ನಂತಿರುವ ಈ ಸೌಂದರ್ಯ ರಾಶಿಯನ್ನು ನೀನೆ ರಕ್ಷಿಸಬೇಕು ಎಂದು ಪರಮಾತ್ಮನಲ್ಲಿ ಮೊರೆಯಿಡುತ್ತಾರೆ.
ಲಿಂಗದೀಕ್ಷೆ ಪ್ರಕ್ರಿಯೆ ಮುಂದುವರಿಸಿದ ಗುರುಗಳು, “ಮಹಾದೇವಿ ನಿನಗಿಂದು ಮದುವೆಯಾಯಿತು. ಇಷ್ಟಲಿಂಗವೇ ನಿನ್ನ ನಿಜವಾದ ಗಂಡ. ನೀನು ಜಗದೊಡೆಯನನ್ನು ಪತಿಯಾಗಿ ಸ್ವೀಕರಿಸಿರುವೆ. ನೀನು ನಿಚ್ಚ ಮುತೈದೆಯಾಗಿ ಬಾಳು ಎಂದು ಹಾರೈಸಿ ವಚನದ ತಾಡೋಲೆಗಳ ಜೊತೆಗೆ ಖಾಲಿ ತಾಡೊಲೆಗಳನ್ನು ಕೊಟ್ಟು ನಿನ್ನ ಅನುಭವಗಳನ್ನು ಇಲ್ಲಿ ದಾಖಲಿಸು” ಎನ್ನುತ್ತಾರೆ. ಮನೆಯ ಮಾಳಿಗೆ ಏರಿದ ಮಹಾದೇವಿ ಗುರು ಕೊಟ್ಟ ವಚನದ ತಾಡೋಲೆಗಲ್ಲಿ ವಚನ ಬರೆಯಲು ಪ್ರಾರಂಭಿಸಿದಳು.
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)