“ಪರಮಸುಖ”ದ ಬೆನ್ನು ಹತ್ತಿ ಮುಂದಣ ಪಥವ ಕಂಡ ಮಹಾದೇವಿ

0
132
ಸಂಸಾರ ಸಂಗದಲ್ಲಿರ್ದೆ ನೋಡಾ ನಾನು
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು
ಅಂಗವಿಕಾರದ ಸಂಗವ ನಿಲಿಸಿ ಲಿಂಗವನಂಗದ ಮೇಲೆ
ಸ್ಥಾಪ್ಯವ ಮಾಡಿದನೆನ್ನ ಗುರು
ಹಿಂದಣ ಜನ್ಮವ ತೊಡೆದು
ಮುಂದಣ ಪಥವ ತೋರಿದನೆನ್ನ ತಂದೆ
ಚನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು
– ಅಕ್ಕಮಹಾದೇವಿ

ಶರಣರು ಮರೆವಿಗೆ ಒಳಗಾದವರಲ್ಲ. ಅವರದು ಶ್ರೇಷ್ಠ ಮತ್ತು ಅನುಕರಣೀಯ ಜೀವನ. ಇಂತಹ ಶರಣ ಜೀವನಕ್ಕೆ ಮಾರು ಹೋದ ಮಹಾದೇವಿ ಬಾಲ್ಯದಲ್ಲಿ ಎಲ್ಲ ಮಕ್ಕಳಂತಿರಲಿಲ್ಲ. ಅವಳ ಆಟ-ಪಾಠ ಸೇರಿದಂತೆ ಎಲ್ಲದರಲ್ಲೂ ವ್ಯತ್ಯಾಸಗಳಿದ್ದವು. ಆಗಿನ ಕಾಲದಲ್ಲಿ ಯಾರು ಶಾಲೆಗೆ ಹೋಗದಿದ್ದ ವೇಳೆ ಈಕೆ ಗುರುಕುಲಕ್ಕೆ ಹೋಗಿ ಶಾಲೆ ಕಲಿಯುವುದು, ಇತರ ಮಕ್ಕಳಂತೆ ಆಟ-ಪಾಠಗಳಲ್ಲಿ ತೊಡಗದಿರುವುದು ಅದು ಲೋಕ ವಿರೋಧಿ ನಡೆ ಅನ್ನಿಸುತ್ತಿತ್ತು. “ಶರಣ ಸತಿ ಲಿಂಗಪತಿ” ಎಂದು ಗುರುಗಳು ಹೇಳಿದ್ದ ಮಾತುಗಳು ಮಹಾದೇವಿ ಮನಕ್ಕೆ ಹಸಿ ಗೋಡೆಗೆ ಹರಳು ನಾಟುವಂತೆ ನಾಟಿತು.

Contact Your\'s Advertisement; 9902492681

ಕುಂಬಾರನ ಕೈಗೆ ಸಿಕ್ಕ ಮಣ್ಣು ಮಡಿಕೆ, ಅಕ್ಕಸಾಲಿಗನ ಕೈಗೆ ಸಿಕ್ಕ ಚಿನ್ನ ಆಭರಣ, ಶಿಲ್ಪಿಯ ಕೈಗೆ ಸಿಕ್ಕ ಕಲ್ಲು ಶಿಲ್ಪವಾಗುವಂತೆ ಗುರುವಿನ ಕರುಣೆಗೆ ಒಳಗಾದರೆ ಜೀವ-ಶಿವ, ಭವಿ-ಭಕ್ತ ಆಗುತ್ತಾನೆ ಎನ್ನುವಂತೆ ಈ ಭವ ಬಂಧನ ಮತ್ತು ಮಾಯಾ ಬಲೆಯಿಂದ ಮುಕ್ತಳಾದ ಮಹಾದೇವಿ, “ಕರ್ತಶ್ರೀರಾಯ ಗುರುರಾಯ, ಮುಚ್ಚಿದ ಕವಚವ ಅರ್ತಿಯಿಂದ ಅಳವಡಿಸಿದೆ” ಎಂದು, ಚನ್ನಬಸವಣ್ಣನವರು “ಗುರು ಕರುಣಿಸಿ ಬಿಟ್ಟಿತ್ತು ಮಾಯೆ..” ಎಂದು ಹೇಳುತ್ತಾರೆ. ಅಂತೆಯೇ ಅಲ್ಲಮಪ್ರಭುಗಳು “ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮನಿಯೂ ನಿನ್ನವಳಲ್ಲ, ಇವು ಜಗಕಿಕ್ಕಿದ ವಿದಿ” ಎನ್ನುತ್ತಾರೆ. ಗುರು ಸ್ಪರ್ಶದಿಂದ ಪರಮಚೈತನ್ಯ, ಪರಮಸುಖ ಸಾಧ್ಯ ಎಂದು ಬಸವಣ್ಣನವರು ಹೇಳುತ್ತಾರೆ.

ಹುಟ್ಟು-ಸಾವು, ಸುಖ-ದುಃಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಿರಾಸೆ ದೂರ ಮಾಡಿ ಸಂತೋಷ, ಸಂಭ್ರಮ, ಉಲ್ಲಾಸದಿಂದ ಬದುಕಬೇಕು. ಬದಲಾದ ಈ ಪ್ರಪಂಚದಲ್ಲಿ ಒಳ-ಹೊರಗು ಒಂದಾಗಿಸಿಕೊಂಡು ಬದುಕುವುದೇ ಪರಮಸುಖ. ಸಾಕೆನಿಸದ, ಬೇಕೆನಿಸದ, ಸವೆಯದ ಸುಖವೇ ಪರಮಸುಖ. ಮರೆವಿನ ರೋಗ ಅಳಿಸಲು ಅರಿವಿನ ಮಾತ್ರೆ ಅಗತ್ಯವಾಗಿದೆ. ಪರಿವರ್ತನೆ ಆಗದಿರುವುದು ಕಲ್ಲಿನಂತಹ ಜೀವನ. ಪರಿವರ್ತನೆ ಜೀವಂತಿಕೆಯ ಲಕ್ಷಣ ಅನ್ನುವಂತೆ ಗುರುವಿನ ಲಿಂಗ ಹಸ್ತದಿಂದ ಮಹಾದೇವಿಯಲ್ಲಿರುವ ಚೈತನ್ಯ ಜಾಗೃತವಾಗುತ್ತದೆ.

ನೂಲಿನ ಸೀರೆಯುಟ್ಟು, ಹಣೆಗೆ ವಿಭೂತಿ ಹಚ್ಚಿಕೊಂಡು, ಕೊರಳಲ್ಲಿ ರುದ್ರಾಕ್ಷಿ ಹಾಕಿಕೊಂಡು ಸದಾ ಚನ್ನಮಲ್ಲಿಕಾರ್ಜುನನ ಧ್ಯಾನ ಮಾಡುತ್ತಿದ್ದ ಮಹಾದೇವಿಯ ಬಾಹ್ಯ ಸೌಂದರ್ಯ, ಭಾವ ಸೌಂದರ್ಯ, ಅವಳ ಒಲವು, ನಿಲುವು, ಚೆಲುವು ಕಂಡ ಊರ ಜನರು ಇವಳಿಗೆ ಹುಚ್ಚು ಹಿಡಿದಿದೆ. ದೆವ್ವ-ಭೂತ ಹಿಡಿದಿದೆ ಎಂದು ಅಂದಾಡಿಕೊಳ್ಳುತ್ತಿದ್ದರು. ಜನರ ಈ ಮಾತುಗಳನ್ನು ಕೇಳಿದ ತಾಯಿ ಲಿಂಗಮ್ಮನಿಗೆ ಕಳವಳವಾಯಿತು.

ಮದುವೆಯಾದ ಮಹಾದೇವಿಯ ಗೆಳತಿಯರನ್ನು ಕರೆಸಿ, ಗಂಡ-ಹೆಂಡತಿ, ಮಕ್ಕಳು-ಮರಿ, ಸಂಸಾರ- ಸುಖದ ಬಗ್ಗೆ ಅವರಿಂದ ಪಾಠ ಹೇಳಿಸುತ್ತಾಳೆ. ನಮ್ಮನ್ನು ಬಿಟ್ಟು ಬದುಕುವ ಗಂಡನಿಗಿಂತ ಸದಾ ನಮ್ಮ ಜತೆಗಿರುವ ಗಂಡ ಲೇಸು. ಸಾವಿಲ್ಲದ ರೂಹಿಲ್ಲದ ಚೆಲುವನಿಗೆ ನಾ ಒಲಿದಿದ್ದೇನೆ. ಈ ಸಾವ, ಕೆಡುವ ಗಂಡರನ್ನೊಯ್ದು ಒಲೆಯೊಳಗಿಕ್ಕವ್ವ. ನನಗೆ ನನ್ನ ನಲ್ಲ ಚನ್ನಮಲ್ಲಿಕಾರ್ಜುನ ಒಲಿವನೋ ಒಲಿಯನೋ ಎಂಬ ಚಿಂತೆ ಎಂದು ಮಹಾದೇವಿ ಅವರಿಗೆ ಮಾರುತ್ತರ ಕೊಡುತ್ತಾಳೆ.

ತನ್ನೊಳಗಿರುವ ಚೈತನ್ಯದ ಅರಿವು ಜಾಗೃತಗೊಳಿಸಿಕೊಂಡು ಶರಣರ ನಡೆ ನುಡಿಯನ್ನೇ ತನ್ನ ಗತಿ ಮತಿ ಮಾಡಿಕೊಂಡ ಮಹಾದೇವಿ ಈ ಲೋಕದ ಪರಿವೆಯಿಲ್ಲದೆ ನಿರಾಭರಣ ಸುಂದರಿಯಾಗಿ ವಚನ, ಕಲ್ಯಾಣ, ಬಸವಣ್ಣ, ಅಧ್ಯಾತ್ಮ, ಅನುಭವ ಮಂಟಪ ಹೀಗೆ ನಾನಾ ವಿಷಯಗಳ ಕುರಿತು ಹೆಚ್ಚಿನ ಆಸಕ್ತಿ ಬೆಳಸಿಕೊಂಡು ಮನೆ-ಮಠ, ಊರು-ಕೇರಿಯ ತುಂಬ ಓಡಾಡಿಕೊಂಡಿರುತ್ತಾಳೆ. ಹೀಗಿರುವಾಗ ಆ ಊರಿಗೆ ಮತ್ತು ಮಹಾದೇವಿಯ ಜೀವನಕ್ಕೆ ವಿಪತ್ತೊಂದು ಎದುರಾಗುತ್ತದೆ. ತನಗೆ ಬಂದ ಈ ಆಪತ್ತನ್ನು ಮಹಾದೇವಿ ಅತ್ಯಂತ ಸಮರ್ಥವಾಗಿ ಎದುರಿಸುತ್ತಾಳೆ. ಇದು ಮಹಾದೇವಿ ಜೀವನಕ್ಕೆ ಮಹತ್ವದ ತಿರುವು ತಂದುಕೊಡುವ ಘಟನೆಯಾಗಿದ್ದು, ಇದರಿಂದಾಗಿಯೇ ಮಹಾದೇವಿ ಇಡೀ ಲೋಕಕ್ಕೆ ಅಕ್ಕ ಅನ್ನಿಸಿಕೊಳ್ಳುತ್ತಾಳೆ.

(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here