ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಜಗದ್ಗುರು ಶ್ರೀ ರೇಣುಕಾಚಾರ್ಯ ಹೆಸರು ನಾಮಕರಣ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಇಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಸದ್ಭಕ್ತ ಮಂಡಳಿ ವತಿಯಿಂದ ಅಖಿಲ ಭಾರತ ವೀರಶೈವ ಮಹಾಸಭೆಯ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣಕುಮಾರ ಮೋದಿ ಯವರಿಗೆ ನಿಯೋಗದ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ನಿಯೋಗದ ಮುಖಂಡರೊಂದಿಗೆ ಮಾತನಾಡಿದ ಮೋದಿಯವರು ತಮ್ಮ ಬೇಡಿಕೆ ನ್ಯಾಯಸಮ್ಮತವಾಗಿದ್ದು ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಮಹಾಸಭೆಯ ರಾಜ್ಯ ಮತ್ತು ಕೇಂದ್ರ ಘಟಕಕ್ಕೆ ಪತ್ರ ಬರೆಯಲಾಗುವುದು ಮತ್ತು ತಮ್ಮ ಹೋರಾಟಕ್ಕೆ ಬೆಂಬಲ ನೀಡಲಾಗುವುದೆಂದು ಘೋಷಿಸಿದರು. ಮಂಡಳಿ ತೆಗೆದುಕೊಳ್ಳುವ ಎಲ್ಲಾ ಹೋರಾಟಕ್ಕೆ ತಮ್ಮ ಸಂಪೂರ್ಣ ಸಹಕಾರವಿದ್ದು, ರಾಜ್ಯದ ಮುಖ್ಯಮಂತ್ರಿಗಳ ಬಳಿ ತಾವು ತೆಗೆದುಕೊಂಡು ಹೋಗುವ ನಿಯೋಗದ ಜೊತೆಗೆ ತಾವೂ ಬರುವುದಾಗಿ ತಿಳಿಸಿದರು.
ಮಂಡಳಿಯ ಅಧ್ಯಕ್ಷರಾದ ಅಣವೀರಯ್ಯ ಪ್ಯಾಟಿಮನಿ ಮಾತನಾಡಿ ಕಲಬುರಗಿ ಜಿಲ್ಲೆಯಲ್ಲಿ ಜಗದ್ಗುರು ರೇಣುಕಾಚಾರ್ಯರ ದೇವಸ್ಥಾನಗಳು ಗ್ರಾಮೀಣ ಭಾಗ, ಪಟ್ಟಣ, ನಗರಗಳಲ್ಲಿ ಕಾಣಬಹುದಾಗಿದ್ದು, ಜಾತಿ, ಮತ, ಪಂಥ, ಪ್ರದೆಶ ಮೀರಿ ಜಗದ್ಗುರು ರೇಣುಕಾಚಾರ್ಯರ ಸದ್ಭಕ್ತರಿದ್ದು ಶ್ರದ್ಧೆಯಿಂದ, ಭಕ್ತಿಯಿಂದ ಭಜಿಸುತ್ತಾರೆ, ಪೂಜಿಸುತ್ತಾರೆ, ಹೀಗಾಗಿ ಲಕ್ಷಾಂತರ ಜನರ ಬೇಡಿಕೆ ಮತ್ತು ಆಶಯದಂತೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ನಾಮಕರಣ ಮಾಡುವಂತೆ ತಾವುಗಳು ಮಹಾಸಭೆಯ ವತಿಯಿಂದ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಹಾಸಭೆಯ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ನಿಯೋಗದಲ್ಲಿ ಸದ್ಭಕ್ತ ಮಂಡಳಿಯ ಬಸವರಾಜ ಕುಲಕುಂದಿ, ಸಂಗಯ್ಯ ಹಿರೇಮಠ, ಲಿಂಗನಗೌಡ ಪಾಟೀಲ, ಶಿವಲಿಂಗಯ್ಯ ಸ್ವಾಮಿ ಸಾವಳಗಿ, ಶಿವರಾಜ ಪಾಟೀಲ ಅವರಾದ, ಶಿವು ಸ್ವಾಮಿ, ಸೋಮಶೇಖರ ಹಿರೇಮಠ ಗುರಮಿಠಕಲ್, ಮರುಳಾರಾಧ್ಯ ಕಳ್ಳಿಮಠ, ಗಿರೀಶಗೌಡ ಇನಾಮದಾರ, ಫಕೀರಯ್ಯ ಟೇಂಗಳಿ, ಸಾಗರ ಹಿರೇಮಠ, ಸತೀಶ ಸ್ವಾಮಿ, ನಾಗರಾಜ ಪತ್ತಾರ, ಎನ್.ಎಸ್.ಹಿರೇಮಠ, ಸಂಜು ಟೆಂಗೆ, ಸಿದ್ರಾಮಯ್ಯ ಪುರಾಣಿಕ ಸೇರಿದಂತೆ ಅನೇಕರು ಉಪಸ್ಥಿರಿದ್ದರು.