ಶರಣರ ವಚನಗಳು ಬದುಕಿಗೆ ಮುನ್ನುಡಿ

0
100

ಶಹಾಪುರ: ಶರಣರ ವಚನಗಳು ಕೇವಲ ಬರವಣಿಗೆಯಲ್ಲ, ಅವು ಬದುಕಿನ ಮಾರ್ಗಕ್ಕೆ ಬರೆದ ಮುನ್ನುಡಿ ಎಂದು ಬೀದರನ ಮೇನಕಾ ಪಾಟೀಲ ಹೇಳಿದರು.

ನಗರದ ಬಸವ ಮಾರ್ಗ ಪ್ರತಿಷ್ಠಾನ,ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ಲಿಂ.ಗದ್ದಿಗಿರಾಯ ಗುಡಿಯವರ ಸ್ಮರಣೆಯಲ್ಲಿ ಬಸವ ಬೆಳಕು-೯೬ ರ ’ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

Contact Your\'s Advertisement; 9902492681

ತನ್ನ ಪರಿಶ್ರಮದ ಮೂಲಕ ಮಾಡುವ ದುಡಿಮೆ ಪರಿಶುದ್ಧವಾಗಿದ್ದರೆ ಅದು ಕಾಯಕವಾಗುತ್ತದೆ. ಕಾಯಕದ ಮೂಲಕ ಸಂಗ್ರಹಿಸಿದ ಸಂಪತ್ತು ಕೇವಲ ಆ ವ್ಯಕ್ತಿಯದು ಮಾತ್ರವಾಗಿರುವುದಿಲ್ಲ. ಅದು ಎಲ್ಲರಿಗೂ ಸೇರಿದ್ದಾಗಿರುತ್ತದೆ ಎಂದು ತಿಳಿದು ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಿಕೊಂಡು ಎಲ್ಲರೊಳಗೆ ಒಂದಾಗುವುದೆ ಶರಣತ್ವ. ಶರಣ ಅಂದರೆ ಮನೆ ಮಾರು ಬಿಟ್ಟು ಗುಡ್ಡ ಗವಿಯನ್ನು ಸೇರುವುದಲ್ಲ. ಹೆಂಡತಿ ಮಕ್ಕಳನ್ನು ತೊರೆದು ಕಾವಿ ಧರಿಸುವುದಲ್ಲ. ದೇವರು ಕೊಟ್ಟ ಜೀವವನ್ನು ಸವೆಯೆ ಬಳಸಿ ಧೀರತೆಯಿಂದ ಬದುಕುವವನು ಶರಣ.

ಶರಣ ಯಾವತ್ತೂ ಹೇಡಿಯಲ್ಲ. ತನಗೆ ಕೊಟ್ಟ ದೇಹವೆಂಬ ಪ್ರಸಾದವನ್ನು ಸಮರ್ಪಕವಾಗಿ ಬಳಸಿಕೊಂಡು ಅತ್ಯುನ್ನತವಾದುದನ್ನು ಸಾಧಿಸುವುದಾಗಿದೆ. ಏನೆಲ್ಲವೂ ನಮ್ಮ ಒಳಗೆ ಇದೆ, ಆದರೆ ನಾವು ಹೊರಗೆ ಹುಡುಕುತ್ತಿದ್ದೇವೆ.ಮೌನ-ಧ್ಯಾನಗಳೇ ಆಧ್ಯಾತ್ಮವಲ್ಲ. ಶಿವನೊಲಿಸಬಂದ ಕಾಯಕವನ್ನು ಶರಣರು ಪ್ರಸಾದವೆಂದಿದ್ದಾರೆ. ಶರಣ ಸರಳನು ನೇರನು ದಿಟ್ಟನೂ ಆಗಿರಬಲ್ಲ. ಆ ಶರಣ ಮನದೆರೆದು ಮಾತನಾಡುತ್ತಿದ್ದರೆ ಲಿಂಗವೇ ನಮ್ಮ ಕಣ್ಣ ಮುಂದೆ ಕುಳಿತಂತೆ ಆಗುತ್ತದೆ. ಆತ ನಡೆದರೆ ಆದರ್ಶದ ಬದುಕು ಚಲಿಸಿದಂತಾಗುತ್ತದೆ. ಆ ಶರಣ ನಡೆದ ನೆಲವೆ ಪಾವನವಾಗುತ್ತದೆ. ಶರಣ ನಿದ್ರೆಗೈದಡೆ ಜಪ ಕಾಣಿರೊ. ಶರಣ ಎದ್ದು ಕುಳಿತರೆ ಶಿವರಾತ್ರಿಯಾಗುತ್ತದೆ ಎಂದು ಮಾರ್ಮಿಕವಾಗಿ ಬಸವಾದಿ ಶರಣರ ವಚನಗಳನ್ನು ಉದಾಹರಿಸಿ ಹೇಳಿದರು.

ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಕಲ್ಲು ಮಣ್ಣು ಕಟ್ಟಿಗೆ ಪಂಚಲೋಹದಲ್ಲಿ ದೇವರಿದ್ದಾನೆ ಎಂದು ನಂಬಿಸುವವರು ನಮ್ಮನ್ನು ಮೋಸಗೊಳಿಸುತ್ತಿದ್ದಾರೆ. ನಮ್ಮ ಕಾಲು ಕಂಬ ದೇಹವೇ ದೇಗುಲ ಎಂಬ ಸತ್ಯವನ್ನು ಬಸವಣ್ಣನವರು ನಮಗೆ ತಿಳಿಸಿಕೊಟ್ಟಿದ್ದಾರೆ. ಎಲ್ಲರಿಗೂ ಪ್ರವೇಶವಿಲ್ಲದ ದೇವರ ಗುಡಿಯನ್ನು ನಾವು ನಿರ್ಲಕ್ಷಿಸಬೇಕೆಂದು ಸಲಹೆ ನೀಡಿದರು.

ದೇವರ ಸ್ವರೂಪವೇ ನಾವಾಗಿರುವಾಗ ದೇವರ ಏಜೆಂಟರನ್ನು ನಂಬುವ ಅವಶ್ಯಕತೆ ಇಲ್ಲ. ಎಲ್ಲರನ್ನೂ ಕಾಯುವವ ಎನ್ನಲಾಗುವ ದೇವರಿಗೂ ಬಂಧನವೆ ? ಸಿ.ಸಿ.ಕ್ಯಾಮರಾಗಳ ಕಣ್ಗಾವಲೆ ? ಪ್ಯಾರಾ ಮಿಲಿಟರ್ ಫೋರ‍್ಸ್ ಬೇಕೆ ? ಎಂದು ಪ್ರಶ್ನಿಸಿದ ಸತ್ಯಂಪೇಟೆ ಮುಂದುವರೆದು, ದೇವರುಗಳ ಏಜೆಂಟರುಗಳ ಗೊಡವೆಯನ್ನು ತಪ್ಪಿಸಿ ಪ್ರತಿಯೊಬ್ಬರ ಕೈಯಲ್ಲಿ ಇಷ್ಟಲಿಂಗವನ್ನು ಕೊಟ್ಟು ದೇವರನ್ನು ಸಾರ್ವತ್ರಿಕಗೊಳಿಸಿದರು ಎಂದು ಅಭಿಪ್ರಾಯ ಪಟ್ಟರು.

ಇಲ್ಲಿ ಯಾರೂ ಶಾಶ್ವತರಲ್ಲ. ಒಂದಲ್ಲ ಒಂದು ದಿನ ಇಲ್ಲಿಂದ ಎದ್ದು ಹೋಗಲೆಬೇಕು. ಜಾಗ ಖಾಲಿ ಮಾಡುವ ಮುನ್ನ ಸತ್ಯವನ್ನು ಅರಿತು ಬದುಕಿದರೆ ಬಾಳು ಬಂಗಾರವಾಗುತ್ತದೆ. ಜೀವನ ಸಾರ್ಥಕವಾಗುತ್ತದೆ. ಸತ್ತ ಮೇಲೆ ಸ್ವರ್ಗ ಸಿಗುತ್ತದೆನ್ನುವುದು ಭ್ರಮೆ. ವಾಸ್ತವ ಬದುಕನ್ನೇ ಶರಣರ ವಿಚಾರಗಳ ಮೂಲಕ ಬೆಳಗಿಸಿಕೊಳ್ಳಬೇಕು ಎಂದವರು ವಚನಗಳ ಮೂಲಕ ಉದಾಹರಿಸಿ ಸಭೆಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಹಾಬಾದ ನಗರದ ಗಿರಿಮಲ್ಲಪ್ಪ ಹೊಳಸಂಗ ವಹಿಸಿದ್ದರು. ವೇದಿಕೆಯ ಮೇಲೆ ಬಸ್ಸಮ್ಮ ಗದ್ದಿಗಿರಾಯ ಗುಡಿ ಹಳಿಸಗರ ,ನರೇಂದ್ರ ಪಾಟೀಲ, ಶ್ವೇತಾ ಗುಡಿ, ಸುನಿತಾ ಮಲ್ಲಿಕಾರ್ಜುನ ಗುಡಿ ಇದ್ದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ರಾಜು ಕುಂಬಾರ ಸ್ವಾಗತಿಸಿದರು. ಅಮೋಘ ಸತ್ಯಂಪೇಟೆ ವಂದಿಸಿದರು. ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಪ್ರಾರ್ಥನೆ ಮಾಡಿದರು.

ಸಭೆಯಲ್ಲಿ ದೇವು ಹಳಿಸಗರ, ಗುರುಬಸವಯ್ಯ ಗದ್ದುಗೆ, ಎಂ.ಬಿ.ನಾಡಗೌಡ, ಶಿವಲಿಂಗಪ್ಪ ಮುಖ್ಯ ಶಿಕ್ಷಕರು,ತಿಪ್ಪಣ್ಣ ಬಸವಕಲ್ಯಾಣ, ಮಹಾಂತೇಶ ಆವಂಟಿ, ಸುಧಾಕರ ಗುಡಿ,ಮಹಾಂತೇಶ ನಾಯಕ, ಸಿದ್ದಲಿಂಗಪ್ಪ ಆನೇಗುಂದಿ, ಬಸವರಾಜ ಹೇರುಂಡಿ, ಬಸವರಾಜ ಹಿರೇಮಠ, ಬಸವರಾಜ ಸಿನ್ನೂರ ಶರಣಪ್ಪ ಕುಂಬಾರ,ಚಂದ್ರಶೇಖರ ಜಾಕಾ, ರಮೇಶ ವಜ್ಜಲ, ಪ್ರಭು ರಾಚರೆಡ್ಡಿ, ಸಾಯಿಕುಮಾರ ಇಜೇರಿ, ಭಾಗ್ಯ ದೊರೆ, ಪಂಪಣ್ಣಗೌಡ ಮಳಗ, ಶಹಾಬಾದ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here