ಕಲಬುರಗಿ: ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರವರು ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್. ದೊರೆಸ್ವಾಮಿರವರ ಬಗ್ಗೆ ತುಚ್ಛವಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದು ಮತ್ತು ಅವರನ್ನು ಪಾಕಿಸ್ತಾನದ ಏಜೆಂಟರೆಂದು ಕರೆದಿದಿದ್ದನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಇವತ್ತಿನವರೆಗೂ ತಾವು ನಂಬಿದ ವಿಚಾರ ಮತ್ತು ಆದರ್ಶಗಳಿಗೆ ಅನುಗುಣವಾಗಿ ಜೀವನ ನಡೆಸುತ್ತಾ ಬಂದಿದ್ದು, ಇಂದು ಜನತೆಯ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಾ ಬಂದಿದ್ದಾರೆ. ಪಕ್ಷಭೇದ ಮರೆತು ಅಧಿಕಾರಾರೂಢರಾದ ಎಲ್ಲಾ ಪಕ್ಷಗಳನ್ನು ಟೀಕಿಸುತ್ತಾ ಹೋರಾಡುತ್ತಾ ಬಂದಿದ್ದಾರೆ. ಅಧಿಕಾರದ ಹಿಂದೆ ಬೀಳದೆ ಬಡವರ, ದೀನ-ದಲಿತರ, ಮಹಿಳೆಯರ ರೈತ ಮತ್ತು ವಿದ್ಯಾರ್ಥಿಗಳ ಚಳುವಳಿಗಳನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದು ಜಿಲ್ಲಾ ಸಮಿತಿಯ ಸಂಚಾಲಕ ಆರ್. ಕೆ. ವೀರಭದ್ರಪ್ಪ ತಿಳಿಸಿದರು.
ಅಲ್ಲದೆ ಈ ಹಿಂದೆ ನಮ್ಮ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಆಧ್ಯಕ್ಷರಾಗಿ ಹಾಗೂ ಪ್ರಸ್ತುತ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ಶೈಕ್ಷಣಿಕ ಚಳುವಳಿಗೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದು, ಇಂಥ ಸಾಮಾಜಿಕ ಬದ್ಧತೆಯನ್ನು ಹೊಂದಿದ ಶತಾಯುಷಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ತುಂಬಾ ಅವಹೇಳನಕಾರಿಯಾಗಿ ಮಾತನಾಡಿದ್ದು ನಾಡಿನ ಜನತೆಗೆ ತೀವ್ರ ಬೇಸರವನ್ನುಂಟು ಮಾಡಿದೆ. ಈ ಘಟನೆಯನ್ನು ರಾಜ್ಯದ ಶಿಕ್ಷಣಪ್ರೇಮಿ ಮತ್ತು ಎಲ್ಲಾ ಜನರು ಖಂಡಿಸಿ ಶಾಸಕನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.