ಕಲಬುರಗಿ: ಹಣ ದುರುಪಯೋಗಪಡಿಸಿಕೊಂಡು ಕರ್ತವ್ಯಕ್ಕೆ ಗೈರು ಹಾಜರಾಗಿ ಕರ್ತವ್ಯ ಲೋಪ ವೆಸಗಿದ ಆರೋಪದ ಮೇರೆಗೆ ಚಿತ್ತಾಪುರ ತಾಲೂಕಿನ ವಾಡಿ (ಜಂ) ಸಮುದಾಯ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಸಂತೋಷಕುಮಾರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಂ.ಎ. ಜಬ್ಬಾರ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ನಿಯಮ ೧೦ರ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇಟ್ಟು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳೀಸಲಾಗಿದೆ. ಈ ಸಿಬ್ಬಂದಿಯು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ೧೯೫೭ರ ನಿಯಮ ೯೮ರನ್ವಯ ಜೀವನಾಂಶ ಭತ್ಯೆಗೆ ಅರ್ಹರಾಗಿದ್ದು, ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.