ಕಲಬುರಗಿ: ಮೇ ೧೯ರಂದು ನಡೆಯಲಿರುವ ೪೨-ಚಿಂಚೋಳಿ ಮೀಸಲು (ಎಸ್.ಸಿ.) ವಿಧಾನಸಭಾ ಉಪಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಬುಧವಾರ ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್. ವೆಂಕಟೇಶ್‌ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಇವಿಎಂ ಹಂಚಿಕೆ ಹಾಗೂ ಸಿಬ್ಬಂದಿ ನಿಯೋಜನೆ ಕುರಿತಂತೆ ರ‍್ಯಾಂಡಮೈಸೇಶನ್ (ಯಾದೃಚ್ಛೀಕರಣ) ನಡೆಸಲಾಯಿತು.
ಚಿಂಚೋಳಿ ಮೀಸಲು (ಎಸ್.ಸಿ.) ವಿಧಾನಸಭಾ ಉಪಚುನಾವಣೆಗೆ ನೇಮಕವಾಗಿರುವ ಸಾಮಾನ್ಯ ವೀಕ್ಷಕ ಬಿ.ರಾಮರಾವ್ ಹಾಗೂ ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್ ನಿಯೋಜನೆ ಕುರಿತು ಮೊದಲ ಹಂತದ ಮೊದಲ ರ‍್ಯಾಂಡಮೈಸೇಶನ್ ಹಾಗೂ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಹಾಗೂ ಇವಿಎಂಗಳ ಹಂಚಿಕೆ ಕುರಿತು ೨ನೇ ಹಂತದ ರ‍್ಯಾಂಡಮೈಸೇಶನ್ ನಡೆಸಲಾಯಿತು.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು ೨೪೧ ಮತಕೇಂದ್ರಗಳ ಪೈಕಿ, ೬೦ ಸಂದಿಗ್ಧ (ಅತಿ ಸೂಕ್ಷ್ಮ) ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಲ್ಲಿ ಕೇಂದ್ರ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗುತ್ತಿದೆ. ಈ ಪೈಕಿ ೨೫ ಮತಕೇಂದ್ರಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಲಾಗಿದ್ದು, ಉಳಿದ ೩೫ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್ ನೇಮಿಸುವ ರ‍್ಯಾಂಡಮೈಸೇಶನ್ ಪ್ರಕ್ರಿಯೆ ಕೈಗೊಳ್ಳಲಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ಅವರು ತಿಳಿಸಿದರು.
ಸಿಬ್ಬಂದಿ ವಿರುದ್ಧ ಕ್ರಮ: ಕಲಬುರಗಿ ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಗೈರುಹಾಜರಾದ ಸಿಬ್ಬಂದಿಗಳ ವಿರುದ್ಧ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಇದೀಗ ಕರ್ತವ್ಯ ಲೋಪ ಎಸಗಿರುವಂತಹ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಚಿಂಚೋಳಿ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮೇ ೩ರಂದು ಕರೆದಿದ್ದ ತರಬೇತಿಗೆ ಗೈರು ಹಾಜರಾದ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಸಹ ಅವರು ಸೂಚಿಸಿದ್ದಾರೆ.
ಸಭೆಯಲ್ಲಿ ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯ ಚುನಾವಣಾಧಿಕಾರಿ ಸೋಮಶೇಖರ್ ಎಸ್.ಜಿ., ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ವೆಬ್ ಕ್ಯಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್ ನೋಡಲ್ ಅಧಿಕಾರಿ ಕೆ. ರಾಮೇಶ್ವರಪ್ಪ, ಎನ್‌ಐಸಿ ಕೇಂದ್ರದ ಅಧಿಕಾರಿ ಸುಧೀಂದ್ರ ಅವಧಾನಿ ಸೇರಿದಂತೆ ಮುಂತಾದವರು ಹಾಜರಿದ್ದರು.