ಶಹಾಬಾದ: ನಗರದ ಸರಕಾರಿ ಬಾಲಕರ ವಸತಿ ನಿಲಯದಲ್ಲಿ ತಾಲೂಕ ಮೂಲಭೂತ ನಿರ್ವಹಣಾ ಸಮಿತಿ ಸಭೆ ಕಲಬುರಗಿ ಜಿಲ್ಲಾ ಕರೊನಾ ನೋಡಲ್ ವಿಶೇಷಾಧಿಕಾರಿ ಪರಶುರಾಮ ಶಿರನಾಳಕರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ತಾಲೂಕ ನಿರ್ವಹಣ ಸಮಿತಿ ಅಧ್ಯಕ್ಷ ತಹಶೀಲ್ದಾರ ಸುರೇಶ ವರ್ಮಾ, ನಗರದಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲ್ವೆಗೇಟ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಿದೆ. ಆ ಭಾಗದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ಮನೆಮನೆಗೆ ಹೋಗಿ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಬಡಾವಣೆಯಲ್ಲಿ ಪಡಿತರ, ತರಕಾರಿ,ಹಾಲು, ಗ್ಯಾಸ ವಿತರಣೆಗೆ ಕ್ರಮ ಕೈಗೊಂಡಿದ್ದೆವೆ. ಸ್ಥಳೀಯರಿಗೆ ಎರಡು ತಿಂಗಳ ವಿದ್ಯುತ್ ಬಿಲ್ಲ ಪಾವತಿಗೆ ವಿನಾಯಿತಿ ಕುರಿತು ಮಾಹಿತಿ ನೀಡಲಾಗಿದೆ ತರಕಾರಿ, ದಿನಸಿ, ಪಡಿತರ ಖರೀದಿ ಹೆಸರಿನಲ್ಲಿ ಜನ ಜಂಗುಳಿಯಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕರೊನಾ ನೋಡಲ್ ವಿಶೇಷಾಧಿಕಾರಿ ಪರಶುರಾಮ ಶಿರನಾಳ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಡಿತರ, ಕುಡಿಯುವ ನೀರಿಗಾಗಿ ಜನಜಂಗುಳಿ ಸೇರುವದನ್ನು ತಪ್ಪಿಸಲು ಗ್ರಾಪಂ. ಪಿಡಿಓ ಅವರ ಸಹಕಾರ ಪಡೆಯಬೇಕು. ಪ್ರಾಣಿಗಳಿಗೂ ಕರೋನಾ ಹರಡುತ್ತಿರುವದರಿಂದ ದನಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ತಾಪಂ.ಕಾರ್ಯನಿರ್ವಹ ಅಧಿಕಾರಿ ಲಕ್ಷ್ಮಣ ಶೃಂಗೇರಿ ಸೂಚಿಸಿದರು. ಅಲ್ಲದೇ ಕರೋನಾ ಹರಡದಂತೆ ಸಲಹೆ ಮತ್ತು ಸೂಚನೆಗಳನ್ನು ಒದಗಿಸಿ, ಯಾವುದೇ ಕಾರಣಕ್ಕೂ ನಗರದಲ್ಲಿ ಕರೋನಾ ಹರಡದಂತೆ ಕ್ರಮಕೈಗೊಳ್ಳಿ ಎಂದರು.
ಸೇಡಂ ಎಸಿ ರಮೇಶ ಕೋಲಾರ, ಡಿವೈಎಸ್‌ಪಿ ವೆಂಕಣ್ಣಗೌಡ ಪಾಟೀಲ,ತಾಲೂಕ ವೈದ್ಯಾಧಿಕಾರಿ ಡಾ. ಸುರೇಶ ಮೇಕಿನ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ, ಸಮಾಜ ಕಲ್ಯಾಣ ಇಲಾಖೆ ಗಿರೀಶ ರಂಜೋಳಕರ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.