ಲಾರಿ-ಟಿಪ್ಪರ್‌ನಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ

0
62

ಕಲಬುರಗಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಸರಕು ಸಾಗಣೆ ಪೂರೈಸುವ ಲಾರಿ-ಟಿಪ್ಪರ ಸೇರಿದಂತೆ ಇನ್ನಿತರ ಗೂಡ್ಸ್ ವಾಹನಗಳಲ್ಲಿ ಸಾರ್ವಜನಿಕರನ್ನು ಹೊತ್ತುಕೊಂಡು ಹೋಗಲಾಗುತ್ತಿದ್ದು, ಇದು ಅಪಘಾತಕ್ಕೆ ಆಹ್ವಾನಿಸಿದಂತಿದೆ. ಇವುಗಳನ್ನು ನಿಯಂತ್ರಿಸುವುದಲ್ಲದೆ ಸಾರ್ವಜನಿಕರನ್ನು ಹೊತ್ತುಕೊಂಡು ಒಯ್ಯುವ ಇಂತಹ ವಾಹನಗಳನ್ನು ಜಪ್ತಿ ಮಾಡಿಕೊಂಡು ವಾಹನ ಮಾಲೀಕರ ಮೇಲೆ ಕ್ರಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾದ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಪ್ರಕರಣದಲ್ಲಿ ಚಾಲಕನ ಚಾಲನಾ ಪರವಾನಿಗೆ ಅಮಾನತ್ತಿನಲ್ಲಿರಿಸಬೇಕು ಹಾಗೂ ವಾಹನದ ಪರವಾನಿಗೆ ರದ್ದತಿಗೂ ಕ್ರಮ ಜರುಗಿಸಬೇಕು. ಇದಲ್ಲದೆ ಜಿಲ್ಲೆಯ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಟಂಟಂ, ಟೆಂಪು, ಜೀಪ್, ಕ್ರೂಸರ್ ವಾಹನಗಳಲ್ಲಿ ನಿಗದಿತ ಆಸನಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡುತಿದ್ದಲ್ಲಿ ಅಂತಹವರ ಮೇಲೆಯೂ ಆರ್.ಟಿ.ಓ. ಹಾಗೂ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

Contact Your\'s Advertisement; 9902492681

ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ರಸ್ತೆ ಅಪಘಾತ ತಪ್ಪಿಸಲು ಅಲ್ಲಲ್ಲಿ ರೋಡ್ ಹಂಪ್ಸ್ ನಿರ್ಮಿಸಿ, ರಸ್ತೆ ಮದ್ಯದಲ್ಲಿರುವ ಗುಂಡಿಗಳನ್ನು ಮುಚ್ಚಿರಿ. ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ರೇಡಿಯಂ ಸ್ಟಿಕರ್‌ಗಳ ಸಂಕೇತ ಚಿನ್ಹೆಗಳನ್ನು ಹೆಚ್ಚಿನ ಜನಸಂದಣಿ ಇರುವ ಜಂಕ್ಷನಗಳಲ್ಲಿ ಅಳವಡಿಸಬೇಕು. ಕಲಬುರಗಿ ನಗರ ಸೇರಿದಂತೆ ತಾಲೂಕು ಕೇಂದ್ರದ ಪ್ರಮುಖ ವೃತ್ತದ ಹೆದ್ದಾರಿ ಫಲಕಗಳ ಮೇಲೆ ರಸ್ತೆ ಅಪಘಾತಗಳ ಜಾಹೀರಾತುಗಳನ್ನು ಪ್ರದರ್ಶಿಸಿ. ವಿಶೇಷವಾಗಿ ಹೆಲ್ಮೆಟ್ ಹಾಗೂ ಸುರಕ್ಷತಾ ಕ್ರಮ ಅನುಸರಿಸಿದಾಗ ಆಗಿರುವ ರಸ್ತೆ ಅಪಘಾತ, ಸುರಕ್ಷತಾ ಕ್ರಮ ಅನುಸರಿಸದ ಸಮಯದಲ್ಲಿ ಆದ ರಸ್ತೆ ಅಪಘಾತ ಸಂದರ್ಭದಲ್ಲಿ ಸಾವು ನೋವಿನ ಬಗ್ಗೆ ಚಿತ್ರ ಮತ್ತು ಅಂಕಿ ಸಂಖ್ಯೆ ವಿವರಣೆ ನೀಡಿ. ಜೊತೆಗೆ ಭಾಗಿದಾರ ಇಲಾಖೆಗಳಾದ ಲೋಕೋಪಯೋಗಿ, ಪಂಚಾತ್‌ರಾಜ್ ಇಂಜಿನೀಯರಿಂಗ್, ಸ್ಥಳೀಯ ಸಂಸ್ಥೆಗಳ ನೆರವು ಸಹ ಪಡೆಯಬೇಕು ಎಂದು ಹೇಳಿದರು.

ಕ್ರಿಯಾ ಯೋಜನೆ ಸಲ್ಲಿಸಿ:- ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರಸ್ತೆ ಅಪಘಾತಗಳ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಕುರಿತು ಜಿಲ್ಲಾ ಮಟ್ಟದ ಕ್ರಿಯಾ ಯೋಜನೆಯನ್ನು ಸಾರಿಗೆ ಆಯುಕ್ತರಿಗೆ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಪೊಲೀಸ್, ಕಾರ್ಮಿಕ, ಲೋಕೋಪಯೋಗಿ, ಈ.ಕ.ರ.ಸಾ.ಸಂಸ್ಥೆ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಆರ್.ಟಿ.ಓ ಕಚೇರಿಗೆ ಕೂಡಲೆ ಸಲ್ಲಿಸಬೇಕು. ಇದರೊಂದಿಗೆ ಬ್ಲ್ಯಾಕ್ ಸ್ಪಾಟ್ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದರು.

ಡಿಮಾಂಡ್ ಸರ್ವೇ ಕೈಗೊಳ್ಳಿ:– ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬೇಡಿಕೆ ಅನುಗುಣವಾಗಿ ಬಸ್ ಸಂಚಾರ ಪೂರೈಸಲು ಪ್ರಸ್ತುತ ಆ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಓಡಾಟ ಹಾಗೂ ನಿತ್ಯ ಜನರ ಸಂಚಾರದ ಬಗ್ಗೆ ಕೂಲಂಕುಷವಾಗಿ ಸರ್ವೇ ಮಾಡಿ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

ಶಾಲೆಗಳು ಸ್ಕೂಲ್ ಬಸ್ ಪೂರೈಸಲಿ:- ಕಲಬುರಗಿ ನಗರದಲ್ಲಿ ಶಾಲಾ ಮಕ್ಕಳನ್ನು ಆಟೋದಲ್ಲಿ ಮಿತಿ ಮೀರಿ ಕೂರಿಸಿಕೊಂಡು ಪ್ರಯಾಣ ಮಾಡಲಾಗುತ್ತಿದ್ದು, ಅಪಘಾತ ತಪ್ಪಿಸಲು ಇದರ ನಿಯಂತ್ರಣ ಅಗತ್ಯ. ಆಟೋದಲ್ಲಿ ಮಕ್ಕಳ ಪ್ರಯಾಣವನ್ನು ತಪ್ಪಿಸಲು ಶಾಲಾ ಆಡಳಿತ ಮಂಡಳಿಗಳೆ ಮಕ್ಕಳಿಗಾಗಿ ಶಾಲಾ ಬಸ್/ವ್ಯಾನ್ ಪೂರೈಸಬೇಕು. ಈ ಸಂಬಂಧ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿ ಎಂದು ಡಿಡಿಪಿಐ ಶಾಂತಗೌಡ ಪಾಟೀಲ್ ಅವರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು ಪ್ರತಿ ಶಾಲೆಯಲ್ಲಿ ರಸ್ತೆ ಸಂಚಾರ ಸುರಕ್ಷತಾ ಕ್ರಮಗಳ ಸಂಕೇತಗಳ ರೇಖಾಚಿತ್ರ ಬಿಡಿಸಲು ಸಹ ಕ್ರಮವಹಿಸಬೇಕು ಎಂದರು.
೧೮ ವಯಸ್ಸಿನ ಒಳಗಿನವರು ವಾಹನ ಚಲಾವಣೆ ಮಾಡುವಂತಿಲ್ಲ:- ೧೮ ವಯಸ್ಸು ಪೂರ್ಣಗೊಳ್ಳದ ಚಾಲಕರು ಜೀಪ್, ಟೆಂಪು, ಲಾರಿ, ಟಿಪ್ಪರದಂತಹ ದೊಡ್ಡ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇಂತಹ ವಾಹನಗಳ ಮಾಲೀಕರ ಮೇಲೆ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಆರ್.ಟಿ.ಓ. ಮತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ ಜಿಲ್ಲೆಯ ಹಲವು ಕಡೆ ಬ್ಲ್ಯಾಕ್ ಸ್ಪಾಟ್ ಸ್ಥಳಗಳನ್ನು ಗುರುತಿಸಲು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಯವರು ಮರು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದು, ಆರ್.ಟಿ.ಓ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು. ಇನ್ನು ಕಬ್ಬು ಸಾಗಾಣಿಕೆ ಮಾಡುವ ಟ್ರ್ಯಾಕ್ಟರಗಳ ವಾಹನ ಚಾಲಕರು ಧ್ವನಿವರ್ಧಕ ಸ್ಪೀಕರಗಳನ್ನು ಬಳಸುತ್ತಿದ್ದು, ಇದು ಸಹ ಅಪಘಾತಗಳಿಗೆ ಕಾರಣವಾಗುತ್ತಿದೆ. ಮೊದಲು ಈ ಸ್ಪೀಕರಗಳನ್ನು ವಾಹನದಿಂದ ತೆರವುಗೊಳಿಸಿ. ಅಪಘಾತಕಗ್ಕೊಳಗಾಗುವ ಗಾಯಾಳುಗಳಿಗೆ ಗೋಲ್ಡನ್ ಹವರನಲ್ಲಿ ಚಿಕಿತ್ಸೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಅಪಘಾತವಾಗುವ ಪ್ರದೇಶಗಳಲ್ಲಿ ಹೆಚ್ಚು ಅಂಬುಲೆನ್ಸ್ ವಾಹನ ಪೂರೈಸಲು ಆರೋಗ್ಯ ಇಲಾಖೆ ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಕಲಬುರಗಿ ಉಪ ಸಾರಿಗೆ ಆಯುಕ್ತೆ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಶೋಭಾ, ಸಹಾಯಕ ಆರ್.ಟಿ.ಓ ಅಧಿಕಾರಿ ಕೆ.ದಾಮೋದರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ ಕೆ.ಪಾಟೀಲ, ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಣಗೌಡ ಪಾಟೀಲ, ಕಾರ್ಮಿಕ ಅಧಿಕಾರಿ ಶ್ರೀಹರಿ, ಸಂಚಾರಿ ಪಿ.ಐ. ಮಹಾದೇವ ಸೇರಿದಂತೆ ಲೊಕೋಪಯೋಗಿ ಇಲಾಖೆ, ಈ.ಕ.ರ.ಸಾ.ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here