ದೇವರುಗಳು ಬೇಡುವುದಿಲ್ಲ, ಕಾಡುವುದಿಲ್ಲ

0
121

ಹನ್ನೆರಡನೆ ಶತಮಾನಕ್ಕಿಂತಲೂ ಪೂರ್ವದಲ್ಲಿ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂಬ ಚಾತುವರ್ಣ ವ್ಯವಸ್ಥೆ ಜಾರಿಯಲ್ಲಿತ್ತು. ಸೃಷ್ಟಿಕರ್ತ ಬ್ರಹ್ಮನ ತಲೆಯಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರೀಯ, ಹೊಟ್ಟೆಯಿಂದ ವೈಶ್ಯ, ಪಾದದಿಂದ ಶೂದ್ರ ಹುಟ್ಟಿದ ಎಂದು ನಂಬಿಸಿಕೊಂಡು ಬರಲಾಗಿತ್ತು. ಬ್ರಹ್ಮನ ತಲೆಯಿಂದ ಹುಟ್ಟಿದ್ದರಿಂದ ಬ್ರಾಹ್ಮಣ ಸಹಜವಾಗಿಯೇ ಶ್ರೇಷ್ಠ ವ್ಯಕ್ತಿ. ಭುಜದಿಂದ ಹುಟ್ಟಿದ ಕ್ಷತ್ರೀಯ ಸಹಜವಾಗಿಯೇ ಆತ ಹೋರಾಟ ಮಾಡುವುದು ಆತನ ಕರ್ತವ್ಯವಾಗಿತ್ತು. ಹೊಟ್ಟೆಯಿಂದ ಹುಟ್ಟಿದ ವೈಶ್ಯ ವ್ಯಾಪಾರ ಮಾಡಿ ಬದುಕಬೇಕಿತ್ತು. ಪಾದದಿಂದ ಹುಟ್ಟಿದ ಶೂದ್ರ ಇವರೆಲ್ಲರ ಸೇವೆ ಮಾಡಬೇಕಿತ್ತು. ಹೀಗೆ ಹುಟ್ಟಿನಿಂದಲೇ ಆತನ ಸ್ಥಾನಮಾನ ಅಳೆಯಲಾಗುತ್ತಿತ್ತು. ಜಾತಿ ಪದ್ಧತಿಯನ್ನು ಕೂಡ ಹಾಗೆಯೇ ಉಳಿಸಿಕೊಂಡು ಬರಲಾಗಿತ್ತು.

ಜಾತಿಯ ಜೊತೆಗೆ ಧರ್ಮ, ದೇವರುಗಳನ್ನು ಸಹ ವರ್ಗೀಕರಿಸಲಾಗಿತ್ತು. ಜಾತಿಯ ಹೆಸರಿನಲ್ಲಿ ಆಳುತ್ತಿದ್ದ ಕೆಲವು ಪಟ್ಟಭದ್ರಶಕ್ತಿಗಳು ತಾವು ನಂಬಿದ ಧರ್ಮವೇ ಶ್ರೇಷ್ಠ. ತಾವು ನಡೆದುಕೊಳ್ಳುವ ದೇವರುಗಳೇ ಶ್ರೇಷ್ಠ. ಇವುಗಳನ್ನು ಬಿಟ್ಟು ಅನ್ಯ ಧರ್ಮ, ದೇವರುಗಳಿಲ್ಲ. ಧರ್ಮದಲ್ಲೂ ಮೇಲು-ಕೀಳು ಇರುವಂತೆ ದೇವರುಗಳಲ್ಲಿ ಸಹ ಶ್ರೀಮಂತರ ದೇವರು ಬೇರೆ, ಬಡವರ ದೇವರು ಬೇರೆ ಎಂದು ಹೇಳಿಕೊಂಡು ಬರಲಾಗಿತ್ತು. ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿದ ಮೇಲ್ವರ್ಗದವರು ತಮ್ಮ ದೇವರುಗಳು ಶುದ್ಧ ಶಾಖಾಹಾರಿಗಳಾಗಿವೆ. ಕೆಳವರ್ಗದ ದೇವರುಗಳು ಮಾಂಸಹಾರಿ ದೇವರುಗಳು ಎಂದು ವರ್ಗೀಕರಿಸಿದ್ದರು.

ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ
ಮಾರಿಯೆಂಬುದೇನು?
ಕಂಗಳು ತಪ್ಪಿ ನೋಡೊದರೆ ಮಾರಿ
ನಾಲಿಗೆ ತಪ್ಪಿ ನುಡಿದರೆ ಮಾರಿ
ನಮ್ಮ ಕೂಡಲ ಸಂಗಮದೇವನ
ನೆನಹ ಮರೆದೊಡೆ ಮಾರಿ
Contact Your\'s Advertisement; 9902492681

ಮಾರಿ-ಮಸಣಿಯೆಂಬ ಕ್ಷುದ್ರ ದೇವತೆಗಳ ಕಾಟ ಯಾರಿಗೂ ತಪ್ಪಿದ್ದಲ್ಲ. ಇವುಗಳ ಕಾಟ ತಪ್ಪಿಸಿಕೊಳ್ಳಲು ದಕ್ಷಿಣೆ, ನೈವೇದ್ಯ ಬಲಿ ಕೊಡುವುದು ಕಡ್ಡಾಯವಾಗಿತ್ತು. ಬಲಿ ಕೊಡದಿದ್ದಲ್ಲಿ ಆ ಕ್ಷುದ್ರ ದೇವತೆಗಳು ನಿರಂತರ ಕಾಟ ಕೊಟ್ಟು ನಮ್ಮನ್ನು ನರಳಾಡುವಂತೆ ಮಾಡಿ ಇಡೀ ಬದುಕು ನರಕ ಯಾತನೆ ಅನುಭವಿಸುವಂತೆ ಮಾಡುವ ಧೈತ್ಯ ಶಕ್ತಿ ಆ ಕ್ಷುದ್ರ ದೇವತೆಗಳಿವೆ ಎಂದು ಹೇಳಿಕೊಂಡು ಬರಲಾಗಿತ್ತು. ಆ ದೇವರುಗಳನ್ನು ಸಮಾಧಾನಪಡಿಸಲು, ಸಂತೃಪ್ತಿ ಪಡಿಸಲು ಏನೆಲ್ಲ ಉತ್ಸವ, ಆಚರಣೆ ಮಾಡಬೇಕು ಎಂದು ಹೇಳಲಾಗುತ್ತಿತ್ತು. ಈ ದೇವತೆಗಳ ಕೋಪಕ್ಕೆ ತುತ್ತಾದರೆ ಸಿಡುಬು, ಪ್ಲೇಗ್ ಮುಂತಾದ ಅಂಟು ರೋಗಗಳು ನಮ್ಮ ಮೈಗೆ ಹರಡುತ್ತವೆ ಎಂದು ನಮ್ಮನ್ನು ನಂಬಿಸಿ ಆ ದೇವತೆಗಳ ಬಗ್ಗೆ ನಮಗೆ ಭಯ ಹುಟ್ಟುಹಾಕಿದ್ದರು.

ಆದರೆ ಮಾರಿ, ಮಸಣಿ ಎಂಬ ಬೇರೆ ಬೇರೆ ದೇವರುಗಳಿರುವುದಿಲ್ಲ. ದೇವರುಗಳು ನಮಗೆ ಕಾಟ ಕೂಡ ಕೊಡುವುದಿಲ್ಲ. ಒಂದುವೇಳೆ ದೇವರುಗಳು ಕಾಟ ಕೊಡುವಂತಿದ್ದರೆ ಅವುಗಳಿಗೆ ನಾವು ದೇವರೆಂದು ಏಕೆ ಕರೆಯಬೇಕು? ಎಂಬ ಪ್ರಶ್ನೆಯನ್ನು ಕೇಳಿದ ಬಸವಣ್ಣನವರು ನಿಜವಾದ ಮಾರಿ, ಮಸಣಿ ಯಾವುದು ಎಂಬುದನ್ನು ಅತ್ಯಂತ ಸಮರ್ಪಕವಾಗಿ ಉತ್ತರಿಸಿದ್ದಾರೆ. ಮಾರಿಯೆಂದರೆ ಕೆಟ್ಟದ್ದು. ನೋಡಬಾರದ್ದನ್ನು ನೋಡಿದರೆ, ಮಾಡಬಾರದ್ದನ್ನು ಮಾಡಿದರೆ ಅದರಿಂದುಂಟಾಗುವ ಕೆಟ್ಟ ಪರಿಣಾಮವೇ ಮಾರಿ, ಮಸಣಿ. ಕೂಡಲಸಂಗನ ನೆನಹು ಉದಯ. ಮರೆಹು ಅಸ್ತಮಾನ ಎಂದು ವಿವರಿಸಿದ್ದಾರೆ.

ಮೇಲಾಗಿ ಎಲ್ಲ ಧರ್ಮಗಳ ಸಾರ ಒಂದೇ. ನಮ್ಮೆಲ್ಲರ ಮಾಲೀಕನು (ದೇವರು) ಒಬ್ಬನೇ. ಮನುಷ್ಯ ಜಾತಿಯೂ ಒಂದೇ ಎಂದು ಹೇಳಿದರು. ಆ ಮೂಲಕ ಜಾತಿ, ಧರ್ಮ, ದೇವರ ಸಂಕೊಲೆಯಿಂದ ಜನರನ್ನು ಬಿಡುಗಡೆಗೊಳಿಸಿದರು. ಸ್ಥಾಪಿತ ನಂಬಿಕೆಯನ್ನು ಅತ್ಯಂತ ವೈಜ್ಞಾನಿಕವಾಗಿ, ವೈಚಾರಿಕವಾಗಿ ಹೊಡೆದು ಹಾಕಿದ ಬಸವಣ್ಣನವರು ಹೊಸ ಧರ್ಮ, ದೇವರುಗಳನ್ನು ಸೃಷ್ಟಿ ಮಾಡಿದರು. ದೇಹವೇ ದೇವಾಲಯ ಎಂಬ ಹೊಸ ಪರಿಕಲ್ಪನೆಯನ್ನು ನೆಲೆಗೊಳಿಸಿದರು.

“ಮಡಕೆ ದೈವ, ಮರ ದೈವ, ಬೀದಿಯ ಕಲ್ಲು ದೈವ, ದೈವ, ದೈವವೆಂದು ಕಾಲಿಡಲು ಇಂಬಿಲ್ಲ” ಎಂದು ಆಗಿನ ಧಾರ್ಮಿಕ ವ್ಯವಸ್ಥೆಯನ್ನು ಹೇಳುವುದರ ಜೊತೆಗೆ ಇಂತಹ ದೇವರುಗಳ ಹೆಸರನ್ನು ಹೇಳಿಕೊಂಡು ಜನರನ್ನು ಯಾವ ರೀತಿ ಶೋಷಣೆ ಮಾಡುತ್ತ ಬರಲಾಗುತ್ತಿತ್ತು ಎಂಬ ಸಾಮಾಜಿಕ ವ್ಯವಸ್ಥೆಯನ್ನು ಸಹ ತಮ್ಮ ವಚನಗಳ ಮೂಲಕ ವಿಡಂಬಿಸಿರುವುದನ್ನು ಕಾಣಬಹುದು. ಮೇಲ್ನೋಟಕ್ಕೆ ಈ ವಚನ ದೇವರು, ದೈವವಗಳ ಸಂಖ್ಯೆ, ಸ್ವರೂಪವನ್ನು ಹೇಳುವಂತಿದ್ದರೂ, ಇವ್ಯಾವೂ ದೇವರುಗಳಲ್ಲ. ಈ ರೀತಿಯ ನಂಬಿಕೆ ಕೂಡ ಸರಿಯಲ್ಲ. ದೇವರು ಕಾಲಿಗೊಂದು ಕೈಗೊಂದು ಎಂದು ಇರುವುದಿಲ್ಲ. ಆತ ಅಗೋಚರ, ಅಗಮ್ಯನಾಗಿದ್ದಾನೆ. ನಮ್ಮ ಪಯಣ ನಿಜವಾದ ದೇವನೆಡೆಗೆ ಸಾಗುವುದಿದೆ ಎಂಬ ಸದಾಚಾರವನ್ನು ಹೇಳುವಂತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here