ಹಿಂದಿನ ಕಾಲದಲ್ಲಿ ಕಾಲರಾ, ಪ್ಲೇಗ್ ರೋಗಗಳು ಅವುಗಳ ಹರಡುವ ಬಗ್ಗೆ ಕೇಳಿದ್ದೆವು.ಆ ಕಾಲದಲ್ಲಿ ಬಹುಶಃ ಔಷಧ ಇದ್ದಿಲ್ಲ.ಸಾವುಗಳು ನಡದೇ ಇತ್ತು. ಅಂದು ಕೇಳಿದ್ದನ್ನ ಇಂದು ಕಾಣುವ ಸ್ಥಿತಿ ನಿರ್ಮಾಣವಾಗಿದೆ.ಅದುವೇ ಕೊರೊನಾ ಅಂಟು ಜಾಡ್ಯ.ಇದಕ್ಕೆ ಮದ್ದು ಮನೆಯಲ್ಲಿರುವುದೇ ಆಗಿದೆ. ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಸಂಶೋಧನೆ ನಡೆದಿದೆ.ಈ ಹಿನ್ನೆಲೆಯಲ್ಲಿ ದೇಶ ಅಲ್ಲ ಜಗತ್ತೇ ಲಾಕ್ ಡೌನ್ ಆಗಿಬಿಟ್ಟಿದೆ.
ಈ ಲಾಕ್ ಡೌನ್ ವೈಯಕ್ತಿಕವಾಗಿ ಹೇಳುವುದಾದರೆ ಈ ಸುದೀರ್ಘ ದಿನಗಳಲ್ಲಿ ಎಲ್ಲಿ ಹೋಗದೆ ಮನೆಯಲ್ಲಿಯೇ ಇರಲು ಸಾಧ್ಯ ಮಾಡಿಕೊಳ್ಳಲು ತಯಾರಿ ಬೇಕಷ್ಟೆ.ಬಹಳ ದಿನಗಳು ಇಡೀ ಕುಟುಂಬ ಉದರ ನಿಮಿತ್ತದ ಕರ್ತವ್ಯದ ಹಿನ್ನೆಲೆಯಲ್ಲಿ ಒಟ್ಟಿಗೆ ಇರಲು ಆಗಿರಲಿಲ್ಲ.ಅಂತಹ ಸಂದರ್ಭ ಒದಗಿದ್ದು.ಇದು ಬಹಳ ದಿನಗಳಾದರೆ ಆದೂ ಸಹ ಆಲಸ್ಯಕ್ಕೆ ಕಾರಣವಾಗುತ್ತದೆ.
ರೈತ ಬೀಜ ಬಿತ್ತಿ ದವಸ ಧಾನ್ಯ ಬೆಳದು ಅನ್ನ ನೀಡುತ್ತಿರುವಾಗ ಆ ಅನ್ನೋ ತಿನ್ನೋ ನಮಗೆ ಸದ್ವಿಚಾರಗಳನ್ನ ಬಿತ್ತಿ ಬೆಳೆಯಲು ಎಲ್ಲಿ ಸೋಲುತ್ತಿದ್ದೇವೆ ಎನ್ನುವ ಚಿಂತೆ ಕಾಡಲು ಶುರುವಾಗಿದೆ. ಲಾಕ್ ಡೌನ್ ಆರಂಭವಾಗಿದೆ ಮನುಷ್ಯನ ಸಂಚಾರ ಕಡಿಮೆಯಾದ ತಕ್ಷಣ ಕಾಡಿನ ವನ್ಯಜೀವಿಗಳಿಗೆ ಸ್ವತಂತ್ರ ಅನುಭವ.
ಜಲ ಶುದ್ಧಿಯಾಗಿ ಅಪವಿತ್ರವಾದ ಗಂಗೆ ನಿಷ್ಕಲ್ಮಶವಾಗಿ ಹರಿಯುತ್ತಿರುವುದು, ಅಶುದ್ಧ ಗಾಳಿ ಕಡಿಮೆಯಾಗಿ ಶುದ್ಧ ವಾಯುವಿನಿಂದ ಪರಿಸರ ನೈರ್ಮಲ್ಯಕ್ಕೆ ಕಡಿವಾಣ ಬಿದ್ದಿರುವುದು. ಆದರೂ ನಾವು ಪರಿಸರದ ಹಿತದೃಷ್ಟಿಯಿಂದ ಮತ್ತೆ ಪರಿಸರ ಹಾಳು ಮಾಡುವ ಗೀಳು ಬಿಟ್ಟಿಲ್ಲ. ಕೊರೊನಾ ಇಷ್ಟು ಪರಿಸರವನ್ನ ಸುಸ್ಥಿಯಲ್ಲಿ ಇಟ್ಟಿದೆಯೆಂದರೆ ಅದರ ಪಾಠವನ್ನು ಗಣನೆಗೆ ತೆಗೆದುಕೊಂಡು ನಿಯಮ ರೂಪಿಸುವ ಅಗತ್ಯವಿದೆ ಎಂದೆನಿಸುತ್ತದೆ.
ಬೇಸಿಗೆಯ ಈ ಸಂದರ್ಭದಲ್ಲಿ ನಮ್ಮ ಮನೆಯ ಮುಂದೆ ನಾಲ್ಕೈದು ಮಣ್ಣಿನ ಮಡಕೆಗಳನ್ನು ಕಟ್ಟಿ ಅದಕ್ಕೆ ನೀರು ಹಾಕುವ ಬೇಕಾದ ದವಸಗಳನ್ನು ಇಡುವ ಮೂಲಕ ಪಕ್ಷಿಗಳಿಗೆ ನೀರಿಟ್ಟೇ ಆಹಾರ ಇಟ್ಟೆ ಎನ್ನುವುದಿತ್ತು.ಆದರೆ ಆ ಪಕ್ಷಿಗಳು ನೀರಿಟ್ಟ ಕೂಡಲೇ ಸಂತೋಷ ಪಟ್ಟು ಬರಲಿಲ್ಲ.ಏಕೆಂದರೆ ಮನುಷ್ಯರು ನಾವು ಹಾವನ್ನಿಡಿಯಲು ಕಪ್ಪೆಯನ್ನು ಬಲಿ ಕೊಡುತ್ತೇವೆ.ಅವು ಸಹ ಅಳೆದು ತೂಗಿ ನಮಗೇನು ಆತಂಕ ಇಲ್ಲಾ ಎಂದು ಅರಿವಾದಾಗ ಮಾತ್ರ ನಿಧಾನವಾಗಿ ಬರಲು ಆರಂಭಿಸಿ ಕಲರವದಿಂದ ಬಂದು ನೀರು, ಕಾಳು ತಿನ್ನುವ, ಕುಡಿಯುವ ನೋಟ ಖುಷಿ ಕೊಟ್ಟರೆ, ಈ ಒಂದು ಪ್ರಸಂಗ ನನ್ನಲ್ಲಿನ ಅಹಂ ಕಡಿಮೆ ಮಾಡಿತು.ನೀನಿಟ್ಟ ತಕ್ಷಣ ನಾವು ಬರುವುದಿಲ್ಲ ಎನ್ನುವ ಸಂದೇಶ ಕೊಟ್ಟ ಪಾಠ ಮರೆಯುವಂತಿಲ್ಲ.
ಕೊರೊನಾ ಲಾಕ್ ಡೌನ್ ಅನೇಕ ತಲ್ಲಣಗಳಿಗೆ ಈಡು ಮಾಡಿದ್ದು ನೋಡಿ ಅನೇಕರು ಅನೇಕ ಅನೇಕ ರೀತಿಯಲ್ಲಿ ಸಹಾಯ ಮಾಡಿದ ಪ್ರಸಂಗ ಕಣ್ಣು ತೆರೆಸಿತು. ಪ್ರಶಸ್ತಿ ವಿಜೇತ ಅನೇಕ ಚಲನ ಚಿತ್ರ ನೋಡುವ ಸದಾವಕಾಶಕ್ಕೆ ಎಡೆ ಯಾಯಿತು. ದೇಶದ ಬೆನ್ನಲುಬಾದ ರೈತರು ಸದಾ ಒಂದಿಲ್ಲೊಂದು ಕಾರಣ ಸಂಕಷ್ಟಕ್ಕೆ ಸಿಕ್ಕುತ್ತಾರೆ.ಆದರೆ ಈ ಸಂದರ್ಭ ಇಕ್ಕಟ್ಟು ಸೃಷ್ಟಿಸಿತಲ್ಲಾ ಎಂಬ ಕೊರಗು.
ಹೇಳಲು ಸಾಕಷ್ಟಿವೆ.ನಾವು ನಮ್ಮ ಇತಿ ಮಿತಿ ಅರಿತು ನಡೆದಲ್ಲಿ ನಮಗೆ ಮತ್ತು ನಾಡಿಗೆ ಒಳ್ಳೆಯದು. ಸರ್ಕಾರದ ನೀತಿ ನಿಯಮಗಳಿಗೆ ಬದ್ದರಾಗಿ ನಡೆದು ಆದಷ್ಟು ಬೇಗ ಈ ವಿಷ ವೈರಾಣು ಪ್ರಪಂಚದಿಂದ ತೊಲಗಿ ಸರ್ವರೂ ನೆಮ್ಮದಿಯಿಂದ ಬದುಕುವಂತಾಗಲು ನಮ್ಮ ಸಹಕಾರ, ಬೆಂಬಲ ಅಗತ್ಯ.