ಮಹಾತ್ಮಗಾಂಧಿಯನ್ನ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನ `ದೇಶಭಕ್ತ’ ಎಂದು ಕರೆದಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೆಗೆ ಕೆಲ ಬಿಜೆಪಿ ನಾಯಕರು ಸೂಚಿಸಿದ ಬೆಂಬಲಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಹಾಗೂ ದಕ್ಷಿಣಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡೋ ಮೂಲಕ ಗೋಡ್ಸೆ `ದೇಶಭಕ್ತ’ ಎಂದು ಸಮರ್ಥಿಸಿಕೊಂಡ್ರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಸದ ಅನಂತ್ ಕುಮಾರ್ ಹೆಗ್ಡೆ “ನನಗೆ ತುಂಬಾ ಖುಷಿಯಾಗುತ್ತಿದೆ. ಬದಲಾದ ಯುಗದಲ್ಲಿ ಹಾಗೂ ಬದಲಾದ ಸನ್ನಿವೇಶದಲ್ಲಿ ಮತ್ತು ದೃಷ್ಟಿಕೋನದಲ್ಲಿ 7 ದಶಕದ ಬಳಿಕ ಚರ್ಚೆಯಾಗುತ್ತಿರುವುದು ಖಂಡಿಸಲ್ಪಟ್ಟವರಿಗೆ ಮಾತನಾಡಲು ಒಂದು ಸುವರ್ಣಾವಕಾಶವಾಗಿದೆ. ಈಗ ಗೋಡ್ಸೆ ಇದ್ದಿದ್ರೆ ಈ ಚರ್ಚೆ ನೋಡಿ ಅವರು ಖುಷಿಪಡುತ್ತಿದ್ದರು” ಅಂತ ಟ್ವೀಟ್ ಮಾಡಿದ್ರು. ಇದಾದ ಬೆನ್ನಲ್ಲೇ ದಕ್ಷಿಣಕನ್ನಡ ಸಂಸದ “ನಾಥೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1. ಅಜ್ಮಲ್ ಖಸಬ್ ಕೊಂದವರ ಸಂಖ್ಯೆ 72. ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17 ಸಾವಿರ. ಈಗ ನೀವೇ ಹೇಳಿ ಅತೀ ಕ್ರೂರ ಕೊಲೆಗಾರ ಯಾರು..?” ಅಂತ ಟ್ವೀಟ್ ಮಾಡಿದ್ರು. ಹೀಗೆ ಟ್ವೀಟ್ ಮಾಡೋದ್ರ ಜೊತೆಗೆ ಪರ ವಿರೋಧ ಚರ್ಚೆ ತಾರಕ್ಕಕ್ಕೇರಿದ್ದವು. ಆದ್ರೆ ಈ ಇಬರಬು ಸಂಸದರು ಕೂಡ ಮೊದಲು `ಹ್ಯಾಕ್’ ನೆಪವೊಡ್ಡಿ ತಮ್ಮ ತಪ್ಪನ್ನು ಸಮರ್ಥಿಸಿಕೊಂಡರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಬೀಳುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.
ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ. ಇದು ಖಂಡನಾರ್ಹ ಅಂತ ಹೇಳಿದ್ದಾರೆ. ಈ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ ಮೋದಿ. ಇದೇ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೂಡ ಇದು ಖಂಡನಾರ್ಹ. ಇಬ್ಬರು ಸಂಸದರಿಗೂ ನಾವು ನೋಟೀಸ್ ಕೊಟ್ಟಿದ್ದೇವೆ ಅಂತ ಹೇಳಿದ್ದಾರೆ. ಆದ್ರೆ ಪದೇ ಪದೇ ಬಿಜೆಪಿ ನಾಯಕರು ಈ ರೀತಿ ನಾಲಗೆ ಹರಿಬಿಡುವುದರಿಂದ ಅವರ ಮನಸ್ಥಿತಿಯನ್ನ ತೋರ್ಪಡಿಸುತ್ತಿದೆ. ಮಹಾತ್ಮ ಗಾಂಧೀಜಿಯನ್ನೇ ಕೊಂದವನು `ದೇಶಭಕ್ತ’ ಅನ್ನೋದು ಕ್ರೂರ ತನದ ಪರಮಾವಧಿ. ಈ ಬಗ್ಗೆ ಈಗ ಹಲವು ನಾಯಕರು ಕೂಡ ಪ್ರತಿಕ್ರಿಯಿಸುತ್ತಾ ಇದ್ದಾರೆ. ಸದ್ಯಕ್ಕೆ ಸೋಶೀಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‍ನಲ್ಲಿದೆ ಈ ಚರ್ಚೆ. ಬಿಜೆಪಿಯ ಸದ್ಯದ ಪಾಡು ನೋಡಿದ್ರೆ `ಮುತ್ತು ಹೊಡೆದರೆ ಹೋಯ್ತು.. ಟ್ವೀಟ್ ಮಾಡಿದರೆ ಹೋಯ್ತು’ ಅನ್ನುವಂತಾಗಿದೆ. ಅಂದಹಾಗೆ, ಈ ಚರ್ಚೆ ಹುಟ್ಟಿಕೊಂಡಿದ್ದು ಕಮಲ್ ಹಾಸನ್ ಹೇಳಿಕೆಯೊಂದಿದೆ. ಇತ್ತೀಚೆಗಷ್ಟೇ ಕಮಲ್ ಹಾಸನ್ “ಗಾಂಧೀಜಿಯನ್ನ ಕೊಂದ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ’ ಎಂದು ಹೇಳಿಕೆ ಕೊಟ್ಟಿದ್ದರು.