ಕಲಬುರಗಿ: ನಿಮ್ಮೆಲ್ಲರ ಆಶೀರ್ವಾದ ಹಾಗೂ ಅಮೂಲ್ಯ ಮತಗಳನ್ನು ಹಣಕ್ಕಾಗಿ ಮಾರಾಟ ಮಾಡಿ ಅನಗತ್ಯ ಚುನಾವಣೆ ಎದುರಿಸುವಂತೆ ಮಾಡಿದ ಉಮೇಶ್ ಜಾಧವ ಗೆ ತಕ್ಕ ಪಾಠ ಕಲಿಸಿ ಎಂದು ಡಿಸಿಎಂ ಡಾ ಜಿ.ಪರಮೇಶ್ವರ ಕರೆ ನೀಡಿದರು.
ಅವರು ಚಿಂಚೋಳಿ ಉಪ ಚುನಾವಣೆ ಪ್ರಚಾರದ ಕೊನೆ ದಿನವಾದ ಇಂದು ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ರೋಡ್ ಶೋ ನಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾವಂತ ಜಾಧವ್ ನಿಂದ ಕ್ಷೇತ್ರ ಅಭಿವೃದ್ದಿ ನಿರೀಕ್ಷಿಸಿದ್ದ ಚಿಂಚೋಳಿ ಜನರ ಗೌರವ ಹಾಗೂ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ. ಹಣಕ್ಕೆ ಮಾರಾಟವಾಗಿದ್ದಾನೆ ಎನ್ನಲಾಗುವ ಜಾಧವ್ ಉಪಚುನಾವಣೆಯಲ್ಲಿ ತನ್ನ ಮಗನನ್ನು ನಿಲ್ಲಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅಣಕ ಮಾಡಿದಂತೆ ಎಂದ ಅವರ ಈ ಚುನಾವಣೆಯ ಫಲಿತಾಂಶ ಇಡೀ ರಾಜ್ಯಕ್ಕೆ ಸಂದೇಶ ತಲುಪಿಸುವಂತಿರಬೇಕು ಅದು ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ ಮೋದಿ ಸರಕಾರದ ಕೊನೆ ದಿನ ಇದೇ ಮೇ 23. ಆ ಮೇಲೆ ಕೇಂದ್ರದಲ್ಲಿ ಕಾಂಗ್ರೇಸ್ ಸರಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾಜಕಲ್ಯಾಣ ಸಚಿವರಾದ ಪ್ರಿಯಾಂಕ್ ಖರ್ಗೆ ಮಾತನಾಡಿ ಈ ಉಪಚುನಾವಣೆಲ್ಲಿ ಚಿಂಚೋಳಿಯ ಜನರ ಆತ್ಮಾಭಿಮಾನ ಹಾಗೂ ಪ್ರತಿಷ್ಠೆ ಎಂತದ್ದು ಎಂದು ತೋರಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ನಾರಯಣರಾವ್, ಜಲಜಾ ನಾಯಕ್, ಬಾಬು ಹೊನ್ನಾನಾಯಕ್ ಸೇರಿದಂತೆ ಮತ್ತಿತರಿದ್ದರು.