ಕೊರೊನಾ ಮಹಾಮಾರಿ…

0
415

ಕೊರೊನಾ ಇದು ಒಂದು ಸಾಂಕ್ರಾಮಿಕ ವೈರಸ್. ವಿಶ್ವದಲ್ಲೇ ಮೊದಲ ಬಾರಿಗೆ ೨೦೧೯ರ ಡಿಸೆಂಬರ್‌ದಲ್ಲಿ ಚೀನಾದ ವ್ಯುಹಾನ್‌ನಲ್ಲಿ ಸೋಂಕು ಕಾಣಿಸಿಕೊಂಡಿತು. ಇದು ಅಲ್ಲಿಯ ಜನರಿಗೆ ಮೊದಲು ಭಯಾನಕ ಸಾಂಕ್ರಾಮಿಕವೆಂದು ತಿಳಿದಿರಲಿಲ್ಲ. ಆಮೇಲೆ ಇದು ಅಲ್ಲಿಯ ಜನ ಸಮುದಾಯಕ್ಕೆ ಹಬ್ಬಿ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿತು. ಆಗ ಇದೊಂದು ಭಯಾನಕ ಮಹಾಮಾರಿ ವೈರಸ್ ಎಂಬುದು ಎಲ್ಲರಿಗೂ ಅರಿವಾಯಿತು.

ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳು : ಇದು ಒಬ್ಬರಿಂದ ಒಬ್ಬರಿಗೆ ಹರಡುವುದು. ಕೆಮ್ಮು, ನೆಗಡಿ, ಸೀನು, ಜ್ವರ, ಉಸಿರಾಟದ ತೊಂದರೆ, ಸುಸ್ತು, ಮೈ ಕೈ ನೋವು ಇತ್ಯಾದಿ… ಈ ವೈರಸ್ ಕಣ್ಣಿಗೆ ಕಾಣುವುದಿಲ್ಲ. ಅತಿಯೆಂದರೆ ಅತಿ ಸೂಕ್ಷ್ಮವಾದದ್ದು.

Contact Your\'s Advertisement; 9902492681

ಈ ಕೊರೊನಾ ಎಂಬ ಮಹಾಮಾರಿ ಸಾಂಕ್ರಾಮಿಕ ವೈರಸ್‌ನಿಂದ ಉಂಟಾಗುವ ರೋಗಕ್ಕೆ ಇಡೀ ಜಗತ್ತೇ (ವಿಶ್ವವೇ) ಇಂದು ತತ್ತರಿಸಿ ಹೋಗಿದೆ. ದುಡ್ಡೇ ದೊಡ್ಡಪ್ಪ ಎಂದು ಬೀಗುವ ಅಮೇರಿಕಾ, ಫ್ರಾನ್ಸ್, ಇಟಲಿ, ಇರಾಕ್, ಇರಾನ್, ಇಂಗ್ಲೆಂಡ್ ಇತ್ಯಾದಿ ಮುಂದುವರಿದ ರಾಷ್ಟ್ರಗಳು ನಲುಗಿ ಹೋಗಿವೆ. ನ್ಯೂಯಾರ್ಕ್ ನಗರವೊಂದು ಹೆಣದ ರಾಶಿಯಾಗಿದೆ. ಮನುಷ್ಯ ಸಂಬಂಧಗಳು ಹಾಳಾಗಿವೆ. ಈ ಕೊರೊನಾ ಎಂಬ ಸಾಂಕ್ರಾಮಿಕ ರೋಗ ನಮ್ಮ ಭಾರತಕ್ಕೆ ಕಾಲಿಟ್ಟಿದೆ. ಇಲ್ಲಿ ಕೇಂದ್ರ ಮತ್ತು ರಾಜ್ಯಸರಕಾರಗಳು ಹಗಲಿರುಳೂ ಶ್ರಮವಹಿಸಿ, ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ನಿಷೇಧಾಜ್ಞೆಗಳನ್ನು ಜಾರಿಮಾಡಿವೆ. ಪ್ರಧಾನಮಂತ್ರಿಯವರು ದೇಶದೆಲ್ಲೆಡೆ ನಿರ್ಬಂಧ ಹಾಕಿ, ಲಾಕ್‌ಡೌನ್ ಮಾಡಿ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಆದೇಶಿಸಿದ್ದಾರೆ. ಮನೆಯೇ ಮಂತ್ರಾಲಯ, ಮನೆಯೇ ದಿವ್ಯ ಔಷಧಿಯೆಂದು ತಿಳಿದು ನಡೆಯಬೇಕಾಗಿದೆ.

ಈ ಕೊರೊನಾ ಸೋಂಕು ಎಂತಹವರನ್ನೂ ಬೆಚ್ಚಿ ಬೀಳಿಸಿದೆ ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಈ ರೋಗದಿಂದ ವಿಜ್ಞಾನಿಗಳು, ಸಂಶೋಧಕರು, ಡಾಕ್ಟರುಗಳು, ತತ್ವಜ್ಞಾನಿಗಳು ಇತ್ಯಾದಿಯಾಗಿ ಎಲ್ಲರೂ ದಿಗಿಲುಗೊಂಡು ಭಯಾನಕ ಸ್ಥಿತಿಯಲ್ಲಿದ್ದಾರೆ. ಇಡೀ ದೇಶವೇ ಲಾಕ್‌ಡೌನ್ ಆದಾಗ ; ಸಾವಿರಾರು ಜನರು ಉದ್ಯೋಗಕ್ಕಾಗಿ, ಹೊಟ್ಟೆಪಾಡಿಗಾಗಿ, ಬೇರೆ ಊರುಗಳಿಗೆ ಹೋಗಿ ಸಿಲುಕಿಕೊಂಡ, ಕೂಲಿ ಕಾರ್ಮಿಕರು ನರಳುವಂತಾಗಿದೆ. ಅವರ ಪರಿಸ್ಥಿತಿ ಶೋಚನೀಯವಾಗಿದೆ. ಇದರ ಪರಿಣಾಮ ಸಾವಿರಾರು ಜನರು ೫೦೦-೬೦೦ ಕೀಲೋ ಮೀಟರು ನಡೆದು ತಮ್ಮೂರು ಸೇರಲು ಹರಸಾಹಸಪಟ್ಟಿದ್ದಾರೆ. ಇತ್ತಕಡೆ ಊರಿಗೂ ಪ್ರವೇಶವಿಲ್ಲ ಅತ್ತಕಡೆ ಕೆಲಸದ ಸ್ಥಳದಲ್ಲಿಯೂ ನೆಲೆಯಿಲ್ಲ ಇದೆಂತಹ ವಿಪರ್ಯಾಸ? ಈ ರೋಗದ ಭೀತಿಗೆ ಅಂಜಿ ಅನೇಕರು ರಾತ್ರೋ ರಾತ್ರಿಯೇ ಊಟ, ನಿದ್ರೆ, ನೀರಡಿಕೆ ಎಲ್ಲವನ್ನೂ ತೊರೆದು ಕಾಲ್ನಡಿಗೆಯಲ್ಲಿ ತಮ್ಮೂರುಗಳನ್ನು ಸೇರಿಕೊಂಡಿದ್ದಾರೆ.
ಕೊರೋನಾ ಮಹಾಮಾರಿಯು ಜಗತ್ತಿನ ಜನರಿಗೆ ಅನೇಕ ಪಾಠಗಳನ್ನು ಕಲಿಸಿದೆ. ಮನುಷ್ಯನ ಕಷ್ಟಕಾಲದಲ್ಲಿ ಸಂಪತ್ತು ಬರುವುದಿಲ್ಲ, ನಮ್ಮ ಊರು, ನಮ್ಮ ಜನ, ನಮ್ಮ ಸಂಸ್ಕೃತಿಯೇ ನಮಗೆ ಸ್ವರ್ಗ ಎನ್ನುವ ಪಾಠವನ್ನು ಅದು ಕಲಿಸಿಕೊಟ್ಟಂತಾಗಿದೆ.

ಈ ರೋಗದಿಂದ ಮುಕ್ತಿ ಪಡೆಯಲು ನಮಗೆ ಮನೆಯೇ ಆಸರೆಯಾಗಿದೆ. ಅಡುಗೆ ಮನೆಯ ಊಟ ಅಮೃತ ಸಮಾನವೆಂಬುದು ಮನವರಿಕೆಯಾಗಿದೆ. ಇಡೀ ರಾಜ್ಯದಾದ್ಯಂತ ಲಾಕ್‌ಡೌನ್ ಆದಾಗ ಅನೇಕ ಜನರು ಅನೇಕ ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿದ್ದಾರೆ. ಮಧ್ಯಮ ವರ್ಗದವರು, ದೈನಂದಿನ ವ್ಯಾಪಾರವನ್ನೇ ಅವಲಂಬಿಸಿದ್ದ ಚಿಕ್ಕ ಪುಟ್ಟ ವ್ಯಾಪಾರಸ್ಥರು, ಕೂಲಿಯನ್ನೇ ಆಧರಿಸಿದ ಎಷ್ಟೋ ಕುಟುಂಬಗಳು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವಂತಾಗಿದೆ. ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸಿಂಧನೂರಿಗೆ ಬರುವ ಮಾರ್ಗದ ಮಧ್ಯೆ ಮೃತಪಟ್ಟ ಕೂಲಿಕಾರ್ಮಿಕ ಮಹಿಳೆ ಗಂಗಮ್ಮಳ ಸಾವಿನ ಕುರಿತು ಸುದ್ದಿ ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದವು. ಇಂತಹ ವರದಿಗಳನ್ನು ಗಮನಿಸಿದಾಗ ಮನಸ್ಸು ಚುರ್ ಎನ್ನದೇ ಇರಲಾರದು.

ದಿನನಿತ್ಯ ಮುಂಜಾನೆಯಿಂದ ಸಂಜೆಯವರೆಗೂ ಬೀದಿ ಬದಿಗೆ ತಮ್ಮ ಸರಕುಗಳನ್ನು ತಂದು ವ್ಯಾಪಾರ ಮಾಡುವ ಮಾರಾಟಗಾರರ ಸ್ಥಿತಿಯಂತೂ ವರ್ಣಿಸಲು ಅಸಾಧ್ಯ. ಅನೇಕ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಯನ್ನು ಮಾರಾಟಮಾಡಲು ಸಾಧ್ಯವಾಗದೆ; ಅಲ್ಲಿಯೇ ನಾಶಮಾಡಿ ಕಣ್ಣೀರು ಸುರಿಸಿದ್ದಾರೆ. ಇದು ಎಂತಹ ಕೆಟ್ಟ ಕಾಲ ಬಂತಪ್ಪಾ ಎಂದು ಮರುಗಿದ್ದಾರೆ. ಹಗಲಿರುಳು ಕಷ್ಟಪಟ್ಟು ಹೊಲದಲ್ಲಿ ದುಡಿದು, ದುಬಾರಿ ಬೆಲೆಯ ಗೊಬ್ಬರ ಹಾಕಿ; ಫಸಲು ಬಂದಾಗ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗದೆ ; ಬೆಳೆದ ಮಾಲು ಕಣ್ಣಮುಂದೆಯೇ ಕೊಳೆಯುವುದನ್ನು ಕಂಡ ರೈತರು ಕಂಗಾಲಾಗಿದ್ದಾರೆ. ಇದು ವಿಡಿಯೋಗಳ ಮೂಲಕ ವೈರಲ್ ಆದುದನ್ನು ಕಂಡು ಜನರ ಕಣ್ಧಾರೆ ಕಡಲಾಗಿ ಹರಿದಿದೆ.

ಕಲಬುರ್ಗಿಯಲ್ಲಿ ಕೋವಿಡ್‌ನಿಂದ ಮೊದಲ ಸಾವು ಸಂಭವಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇಲ್ಲಿಯ ಜಿಲ್ಲಾಧಿಕಾರಿ ಶ್ರೀ ಬಿ.ಶರತ್ ಅವರು ತುಂಬಾ ಶ್ರಮವಹಿಸಿ ಹಗಲು – ರಾತ್ರಿ ದುಡಿಯುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾವಿರಾರು ಮಂದಿ ಡಾಕ್ಟರುಗಳು, ಆಡಳಿತಾಧಿಕಾರಿಗಳು, ನರ್ಸ್‌ಗಳು, ಪೊಲೀಸ್ ಸಿಬ್ಬಂದಿಗಳು, ಅಂಬುಲೆನ್ಸ್ ಡ್ರೈವರ್‌ಗಳು, ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕರು ಸುದ್ದಿ ಮಾಧ್ಯಮಗಳ ಬಂಧುಗಳು ತಮ್ಮ ಜೀವದ ಹಂಗು ತೊರೆದು ; ತಮ್ಮ ಕುಟುಂಬ ಮಕ್ಕಳು ಎಲ್ಲರನ್ನು ಮರೆತು, ಹಗಲಿರುಳು ಎನ್ನದೆ ನಿದ್ರೆಗೆಟ್ಟು ಈ ಕೋವಿಡ್ ಎಂಬ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ಹಾಗೂ ಇತರೆ ನೆರವು ನೀಡಲು ಕೈಜೋಡಿಸಿ ದುಡಿಯುತ್ತಿದ್ದಾರೆ. ಇವರಿಗೆ ನಾವು ಎಷ್ಟು ರೀತಿಯಿಂದ ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ!

ಸರಕಾರವು ಬಡವರಿಗಾಗಿ ಪಡಿತರ ಅಕ್ಕಿ, ಬೇಳೆ, ಆಹಾರದ ಕಿಟ್‌ಗಳನ್ನು ವಿತರಿಸುತ್ತಿದೆ. ಅನೇಕ ಸಂಘ ಸಂಸ್ಥೆಗಳು ಈ ಕೊರೋನಾ ಎಂಬ ಮಹಾಮಾರಿಗೆ ಸಾಕಷ್ಟು ಸಹಾಯ ಹಸ್ತ ನೀಡಿವೆ. ಸರಕಾರಿ ನೌಕರರು, ಆರ್ಥಿಕವಾಗಿ ಅನುಕೂಲವುಳ್ಳವರು ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಈ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬರು ಎಷ್ಟು ಸಾಧ್ಯವೋ ಅಷ್ಟು ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ತಮ್ಮ ತಮ್ಮ ಮನೆಯ ಒಳಗೆ ಉಳಿಯಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೊರ ಬರಬೇಕು. ಒಬ್ಬರಿಂದ ಒಬ್ಬರು ಅಂತರವನ್ನು ಕಾಯ್ದುಕೊಳ್ಳಬೇಕು. ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು. ಇದರಿಂದ ಹೆಮ್ಮಾರಿಯ ರುದ್ರಾವತಾರ ಕಡಿಮೆಯಾಗುತ್ತದೆ. ಈ ಸಾಂಕ್ರಾಮಿಕ ರೋಗದ ಹರಡುವಿಕೆಗೆ ನಾವೆಲ್ಲರೂ ಎಚ್ಚರಿಕೆಯಿಂದ ತಡೆಯೊಡ್ಡೋಣ. ಆರೋಗ್ಯವೇ ಭಾಗ್ಯವೆಂದು ತಿಳಿದು ಬಾಳೋಣ.

-ಪವಿತ್ರಾದೇವಿ ಈ. ಹಿರೇಮಠ, ದೇವರಗೋನಾಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here