ಕೊರೊನಾ ಕಲಿಸಿದ ಪಾಠ: “ವೇದ ಸುಳ್ಳಾದರೂ ಗಾದೆ ಸುಳ್ಳಾಗದು”

0
288

“ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎಂಬ ಮಾತಿದೆ. ಆದರೆ ಕೊರೊನಾ ಬಂದಾಗಿನಿಂದ “ಹಣ ಕಂಡರೆ ಹೆಣ ಬಾಯಿ ಬಿಡುತ್ತೆ” ಎಂಬ ಗಾದೆ ಮಾತ್ರ ಸುಳ್ಳಾಗುತ್ತಿದೆ ಎಂದೆನಿಸುತ್ತದೆ. ಯಾಕೆಂದರೆ ಕೊರೊನಾ ಪಾಸಿಟಿವ್ ಇರುವವರು ಉಗುಳು ಹಚ್ಚಿ ಎಸೆದಿರುತ್ತಾರೆ ಎನ್ನುವ ಭಯದಿಂದ ಬೀದಿಯಲ್ಲಿ ಹಣ ಬಿದ್ದಿದ್ದರೂ ಯಾರೂಬ್ಬರೂ ಮುಟ್ಟಲು ಹಿಂದೆ ಮುಂದೆ ನೋಡುತ್ತಿದ್ದಾರೆ.

“ಆವ ವಿದ್ಯೆ ಕಲಿತಡೇನು ಸಾವ ವಿದ್ಯೆ ಬೆನ್ನು ಬಿಡದು. ಉಸುರ ಕಟ್ಟಿದರೇನು ಬಸುರ ಹಿಡಿದಿದ್ದರೆ” ಎನ್ನುವ ವಚನದಂತೆ ತನಗೂ ಒಂದು ದಿನ ಸಾವಿದೆ ಅನ್ನುವುದನ್ನು ಮರೆತು ಬರೀ ಹಣ, ಆಸ್ತಿ, ಅಂತಸ್ತು, ಅಧಿಕಾರದಿಂದ ಮರೆಯುತ್ತಿದ್ದ ಮಾನವನನ್ನು ಈ ಮಹಾಮಾರಿ ಕೊರೊನಾ ಬಡಿದೆಚ್ಚರಿಸಿದೆ. ನೋಡು ಮನುಜ! ಸಾವು ನಿನ್ನ ಬೆನ್ನ ಹಿಂದೆಯೇ ಇರುವಾಗ ಹಣದ ಬೆನ್ನು ಹತ್ತದೆ ಮನುಷ್ಯ ಸಂಬಂಧಗಳನ್ನು ಮರೆಯಬೇಡ. ನಿನ್ನನ್ನು ನೀನು ಸುಧಾರಿಸಿಕೋ. ಇಲ್ಲದಿದ್ದರೆ ಎಲ್ಲರ ಕಣ್ಣ ಮುಂದೆಯೇ ನಿನಗೆ ಸಾವು ಬರಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

Contact Your\'s Advertisement; 9902492681

“ಸಕಲ ಜೀವಾತ್ಮರಿಗೆ ಲೇಸಾಗಲಿ” ಎಂಬ ಶರಣವಾಣಿಯಂತೆ ಇದರಲ್ಲೇ ನಮ್ಮ ಒಳಿತು ಹಾಗೂ ರಕ್ಷೆ ಅಡಗಿದೆ ಎನ್ನುವ ಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂಬ ಮಹಾಮಂತ್ರವನ್ನು ಈ ಮಹಾಮಾರಿ ಕೊರೊನಾ ನೆನಪಿಸಿದೆ. ನಾನು, ನನಗೆ ನನ್ನಿಂದಲೇ ಎಂಬ ಸ್ವಾರ್ಥ ಮನೋಭಾವನೆ ಬೆಳೆಸಿಕೊಂಡಿರುವ ಮಾನವನಿಗೆ “ಸರ್ವೆಜನಃ ಸುಖಿನೋ ಭವಂತೂ” ಎಂಬ ನಿಸ್ವಾರ್ಥ ಭಾವನೆ ಮೂಡಿಸಿದೆ.

ವಿಶ್ವದ ಎಂಥೆಂಥ ಪ್ರಚಂಡ ರಾಷ್ಟ್ರಗಳು, ಆ ರಾಷ್ಟ್ರಗಳ ರಾವಣ, ಐರಾವಣರಂಥವರನ್ನೂ ಎಡಮುರಿಗಟ್ಟಿ ಮನೆಯಲ್ಲಿಯೇ ಕಾಲುಮುದುರಿ ಕೂಡುವಂತೆ ಮಾಡಿದೆ. ಹತ್ತು ಹಲವಾರು ಸಾಧನೆ ಮಾಡಿದ ವಿಜ್ಞಾನಿಗಳನ್ನು ಸಹ ಗಡಗಡ ನಡುಗಿಸಿದೆ ಎಂದು ಹೇಳಬಹುದು. ನಾ ಮೇಲು, ನೀ ಕೀಳು ಎಂಬ ಬೇಧ-ಭಾವ ತೊಡೆದು ಹಾಕಿ ಅರಸ-ಆಳು ಎಲ್ಲರಿಗೂ ಸಮಾನತೆಯ ಪಾಠ ಕಲಿಸಿದೆ. ಇಲ್ಲಿ ಪರಸ್ಪರ ಎಲ್ಲರೂ ಅಸ್ಪೃಶ್ಯರಾಗಿಯೇ ಉಳಿಯುವಂತಾಗಿದೆ. ಯಾರೂ ಪರಸ್ಪರ ಮುಟ್ಟದೆ, ತಟ್ಟದೆ, ಹಸ್ತಲಾಘವ ಮಾಡದೆ ದೂರದಿಂದಲೇ ಕೇವಲ “ಶರಣು ಶರಣಾರ್ಥಿ” ಎಂದು ಹೇಳುವ, ಇವ ನಮ್ಮವ, ಇವ ನಮ್ಮವ ಎಂಬ ವಿನೀತಭಾವ ಕಲಿಸಿದೆ.

ಮನುಷ್ಯನ ದುರಾಸೆಯ ಓಟಕ್ಕೆ ಬ್ರೇಕ್ ಇಲ್ಲದಿದ್ದಲ್ಲಿ ಆಗಾಗ ಕೊರನಾದಂಥ ಹತ್ತು ಹಲವು ವೈರಸ್‌ಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ನಾವೆಲ್ಲ ಪ್ರಕೃತಿಯ ಕೂಸುಗಳಾಗಿರುವುದರಿಂದ ಪ್ರಕೃತಿಗೆ ಹೊಂದಿಕೊಂಡು ಬದುಕಬೇಕು ಎಂಬುದನ್ನು ಕಲಿಸಿಕೊಟ್ಟಿದೆ.


  • -ಗೌರಿ ಪ್ರಸನ್ನ, ಬೀರೂರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here