ಬಿಸಿ ಬಿಸಿ ಸುದ್ದಿ

ಭಾಗ-6: ಯಡ್ರಾಮಿ: ಎಲ್ಲಿದೆ ಈ ಊರು..

ವಾರವೊಪ್ಪತ್ತಿನಲ್ಲೇ ಯಡ್ರಾಮಿ ಕುರಿತಾದ ಈ ಅಂಕಣ ಬರಹ ಇಷ್ಟೊಂದು ಜನಪ್ರಿಯವಾಗುತ್ತದೆಂದು ದಿಲ್ಲಿಯ ಮೋದಿ ಇಲ್ಲಿಯ  ನಿಂಬೆಹಣ್ಣು  ರೇವಣ್ಣನ ಆಣೆಗೂ ನಾನಂದು ಕೊಂಡಿರಲಿಲ್ಲ. ಇದರ ಜನಪ್ರಿಯತೆಗೆ ಮಾರು ಹೋಗಿ ಇ – ಮೀಡಿಯಾ ಆನ್ ಲೈನ್ ವೇಬ್ ಸೈಟ್ ಪತ್ರಿಕೆ ತನ್ನಲ್ಲೂ ಇದನ್ನು  ಪ್ರಕಟಿಸ ತೊಡಗಿದೆ. ಹಲಗೆ ಬಳಪವನು ಹಿಡಿಯದ ಅಗ್ಗಳಿಕೆ ಎಂಬಂತೆ ಮೊಬೈಲಿನಲ್ಲೇ ಟೈಪಿಸುವುದನ್ನು ಹೊಸದಾಗಿ ಕಲಿತಿರುವ ಉಮೇದು ಬೇರೆ ನನ್ನದು.

ನಾನು ಈ ಹಿಂದೆ “ಕೆಂಡಸಂಪಿಗೆ ”  ಬ್ಲಾಗ್ ಗೆ ಮತ್ತು ” ಜನತಾವಾಣಿ ” ದೈನಿಕಕ್ಕೆ ನಾಕೈದು ವರ್ಷಗಳ ಕಾಲ ಅಂಕಣ ಬರೆದಾಗಲೂ ಇಂತಹದೇ ಮೆಚ್ಚುಗೆಯ ಮಹಾಪೂರ.

ಆದರೆ ಒಂದು ಊರಿನ ಗತಿಶೀಲ ಬದುಕಿನ ಜೀವ ಸಂವೇದನೆಗಳನ್ನು ಕುರಿತು, ಅದರ ಪ್ರಾಣವಾಯುವಿನ ಏರಿಳಿತದ ವರ್ತಮಾನಗಳನ್ನು ಆಪ್ತವಾಗಿಸಿ ಬರೆಯುವುದು ಸಾಧಾರಣದ ಮಾತಲ್ಲ…

ನಮಗೆ ನಮ್ಮೂರು…  ಬಾಲ್ಯದ  ನೆನಪುಗಳತ್ತ  ನಮ್ಮನ್ನೆಲ್ಲ ಕೊಂಡೊಯ್ಯುತ್ತಿದ್ದೀರಿ.

ಜೀವವಾಯು ಸೂಸಿದಂಗಾಯ್ತು. ಯಡ್ರಾಮಿ ಬದುಕಿನ  ಕತೆಗಳನ್ನು  ಓದುತ್ತಿದ್ದರೆ ನಮಗೆ ರಾವ ಬಹದ್ದೂರರ ಗ್ರಾಮಾಯಣದ ಪಾದೇಹಳ್ಳಿ ಧುತ್ತನೆ  ಕಣ್ಮುಂದೆ ಬಂದು ನಿಲ್ಲುತ್ತದೆ. ಕಳೆದು ಕೊಂಡದ್ದನ್ನು ಮರಳಿ ಪಡೆದ ಸುಖ.

ನಮ್ಮ ಹಳ್ಳಿ, ಹಳ್ಳ, ಕೇರಿ, ಕೆರಿ … ಹೀಗೆ ಎಲ್ಲವೂ ನಮ್ಮೊಳಗೆ ಪುನಃ ಪುನಃ ನುಸುಳಿ , ನುಸುಳಿ ಮೈದಡವಿದಂತಾಗುತ್ತಿದೆ, ಬರವಣಿಗೆಯಲಿ ಆಪ್ತತೆ ಮತ್ತು ತಾಜಾತನವಿದೆ…ಎಂದಿರುವ ಅರುಂಧತಿ, ಶೋಭಾ, ನಾಗವಲ್ಲಿ , ಮೋಹನರಾಂ, ಡಾ. ಪ್ರಕಾಶ ಹಲಗೇರಿ, ನದಾಫ್, ಪ್ರಭಾಕರ ಜೋಷಿ, ಮಾಲತಿ ಭಟ್… ಹೀಗೆ ದೊಡ್ಡ ಪಟ್ಟಿಯೇ ಇದೆ.

ಈ ಹಿಂದೆ ನೀವು ಬರೆಯುತ್ತಿದ್ದ  ” ಕಡಕೋಳ ಕಾಲಂ ” ಮರುಕಳಿಸಿದಂತಿದೆ ಎನ್ನುತ್ತಿರುವ ಕಲೀಂ ಬಾಷಾ… ಹೀಗೆ ನಾನು ಲೆಕ್ಕಿಸದಷ್ಟು ಗೆಳೆಯರ ಮೆಚ್ಚುಗೆ. ಅವರಲ್ಲನೇಕರು ನನಗೆ ಅಪರಿಚಿತರು.  ಎಲ್ಲರಿಗೂ ಯಡ್ರಾಮಿ ಬಗೆಗೆ ಎಲ್ಲಿಲ್ಲದ ಜಿಜ್ಞಾಸೆ. ಕಾರ್ಕಳದಿಂದ ಫೋನ್ ಮಾಡಿದ ಗೆಳೆಯರೊಬ್ಬರು  ಮಳೆಗಾಲ ಆರಂಭಗೊಳ್ಳಲಿ.. ನಾನು ಯಡ್ರಾಮಿ ನೋಡಲು ಬರುವೆ ಎಂದಿದಾರೆ. ಇದನ್ನು ಬೃಹತ್ ಕಾದಂಬರಿಯಾಗಿಸಿರೆಂಬ ಸಲಹೆ ಶ್ರೀಲಕ್ಷ್ಮಿಯದು.

… ಹೀಗೆ  ಹತ್ತು  ಹಲವು  ಸಹಸ್ಪಂದನಗಳ ಮಹಾಪೂರವೇ ಉಕ್ಕಿ ಬರುತ್ತಲಿರುವುದು ನನಗೆ ಖುಷಿ ಕೊಟ್ಟಿದೆ. ವಿಜಿ ವಿಜಯೇಂದ್ರ ಎಂಬ ಬೆಂಗಳೂರು ಮೂಲದ ಮಾಧ್ಯಮ ಮಿತ್ರರು (ಪ್ರಸ್ತುತ ಪ್ರಭಾವಿ ಮಂತ್ರಿಯೊಬ್ಬರ ವಿಶೇಷಾಧಿಕಾರಿ ) ಕಟ್ಟಕ್ಕರೆಯ ಕುಲಕರ್ಣಿ… ಓದಿ ಅವರದೊಂದು ಭಾವಚಿತ್ರ ಹಾಕಬಾರದೇ…? ಎಂದು ಅಂಕಣ ಬಯಲುಗೊಂಡ ಕೆಲ ಕ್ಷಣಗಳಲ್ಲೆ ತಣ್ಣಗೆ ಪ್ರತಿಕ್ರಿಯಿಸಿದರು.

ಯಡ್ರಾಮಿಗಿಂತಲೂ ಬೇರೆ ಭಾಗಗಳಿಂದಲೇ ಹೆಚ್ಚು ಸ್ಪಂದನ.  ಕೆಲವು  ಮಂದಿ  ಹೆಸರಾಂತ ಲೇಖಕರು  ಯಾವುದೇ ಕಾರಣಕೂ ಈ ಬರವಣಿಗೆ  ನಿಲ್ಲಿಸಬೇಡಿರೆಂದು, ಅಲವತ್ತುಗೊಂಡಂತೆ ಹೇಳಿದವರು ಹಲವರು. ಅವರಲ್ಲಿ ಬಹುಪಾಲು ವಿ.ವಿ.ಪ್ರಾಧ್ಯಾಪಕಿಯರು.

ಅಂಕಣ ಬರಹವನ್ನು ಕುರಿತು ತುಂಬ ಗಂಭೀರವಾಗಿ, ಸಂತಸ, ಸೋಜಿಗ, ಕುತೂಹಲಗಳನ್ನು ತೋರಿರುವ ಹೊರಗಿನ ಬಹುತೇಕರಿಗೆ  ಭೌತಿಕ ಯಡ್ರಾಮಿ ಕುರಿತು ಹತ್ತು ಹಲವು ಪ್ರಶ್ನೆಗಳು. ಆಸಕ್ತಿದಾಯಕವಾಗಿ ಸ್ಪಂದಿಸಿ ಇಷ್ಚು ದಿನ ಈ ಊರು ಕುರಿತು ನೀವು  ಯಾಕೆ ಬರೆಯಲಿಲ್ಲ ..ಎಲ್ಲಿ ಹೋಗಿತ್ತು ಈ ಊರು.. ಇದು ನಿಮ್ಮ ಹುಟ್ಟೂರೇ.. ?

ಹೌದೂ.. ಎಲ್ಲಿದೆ ಈ ಊರು.? ಯಾವ ಜಿಲ್ಲೆ …ತಾಲೂಕು… ? ಮೊದಲಾದ ಖಂಡುಗ ಖಂಡುಗ ಪ್ರಶ್ನೆಗಳ ಮಳೆಗರೆತ. ನಾನು ಬೆಂಗಳೂರು, ಮೈಸೂರು, ಡಾವಣಗೇರಿಯ  ಸಿಮೆಂಟ್ ಕಾಡುಗಳಲ್ಲಿ  ಓಡಾಡಿಕೊಂಡು ಬರೆಯುವ ಇದನ್ನು..  ಸುಡುವ ಬಿಸಿಲಲ್ಲಿ ತಣ್ಣಗೆ ಕುಂತೋದುವ ಯಡ್ರಾಮಿ ಆಸು ಫಾಸಲೆಯ ನನ್ನ ಆಪ್ತ ಮಿತ್ರರಿಗೆ ತಮ್ಮ ಆತ್ಮ ಕಥನಗಳನ್ನು , ತಾವೇ ಬರೆದ ಪುಸ್ತಕದಕ್ಷರಗಳಂತೆ ತಾವೇ  ತೆರೆದು ಓದುವ ಸಂಭ್ರಮ ಸಂತಸ.

ಮಳ್ಳಿಯ ಸುಧೀಂದ್ರಕುಲಕರ್ಣಿ ನನ್ನ ಈ  ಅಂಕಣದ ದೊಡ್ಡ ಅಭಿಮಾನಿ. ” -ಅಣ್ಣಾ ನೀವು ಬರೆದು ಕಳಿಸುವ ನಿಮ್ಮ ಬರಹಗಳನ್ನು ನಾನು ನನ್ನ ಗೆಳೆಯರಿಗೆ  ತಾಬಡ ತೋಬಡ ಕಳಸ್ತೀನಿ, ನಮ್ಕಡಿ ಮಂದಿ ಖುದ್ದು ನಾನೇ ಬರೆದಷ್ಟು ಖುಷಿ ಪಡ್ತಾರೆ. ಹೊಳ್ಳಿ ಫೋನ್ ಹಚ್ಚಿ ತಮ್ಮ ಸಂತೋಷ ಹಂಚ್ಕೋತಾರೆ. ” ಎಂದು ಮುದ್ದಾಂ ನನ್ನೊಂದಿಗೆ ಮಾತಾಡಿ.,  ಕೆಲವರಿಗೆ ನನ್ನ ಫೋನ್ ನಂ. ಕೊಟ್ಟು  ಮಾತಾಡಿಸಿದ್ದುಂಟು.

ಮೊನ್ನೆ ರಾತ್ರಿ ಹೈದ್ರಾಬಾದನ ಹುಸೇನ ಪಟೇಲ್  ಜತೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತಾಡಿಸಿ ಪ್ರೀತಿ ಹಂಚಿಕೊಂಡರು ಸುಧೀಂದ್ರ . ಕಲಬುರ್ಗಿಯ ಹಿರೇಮಠರಿಗೆ, ಇನ್ನೊಂದಿಷ್ಚು ಅಂಕಣ ಬರೀರಿ ಒಂದು ಪುಸ್ತಕವನ್ನೇ  ಪ್ರಕಟಿಸ ಬೇಕೆಂಬ ಹಂಬಲ.. ಹೀಗೆ ಇವರೆಲ್ಲರ ಜವಾರಿ ಪ್ರೀತಿ ದೊಡ್ಡದು. ನನ್ನ ಬರಹಕ್ಕಿಂತ ಯಡ್ರಾಮಿಯ ಬದುಕು ದೊಡ್ಡದು. ಆ ಬದುಕಿನ ಪ್ರೀತಿ ಇನ್ನಷ್ಟು ದೊಡ್ಡದು. ಅಂತಹ ಬದುಕಿಗೆ ನಾನೊಂದು ಭಾವಗನ್ನಡಿಯಷ್ಟೇ.

-ಮಲ್ಲಿಕಾರ್ಜುನ ಕಡಕೋಳ

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

10 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

13 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

17 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

18 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

20 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420